ಬದಿಯಡ್ಕ: ಜಿಲ್ಲೆಯ ಮೂರು ಉಪನೋಂದಾವಣಾ ಕಚೇರಿಗೆಳಿಗೆ ವಿಜಿಲೆನ್ಸ್ ಅಧಿಕಾರಿಗಳು ದಾಳಿ ನಡೆಸಿದ್ದು, ಇದರಲ್ಲಿ ಬದಿಯಡ್ಕ ಉಪ ನೋಂದಾವಣಾ ಕಚೇರಿಯ ನಾಲ್ಕು ಮಂದಿ ಸಿಬ್ಬಂದಿಗೆ ಗೂಗಲ್ ಪೇ ಮೂಲಕ ಕೆಲವು ದಸ್ತಾವೇಜು ಬರಹಗಾರರು 1.89ಲಕ್ಷ ರೂ. ಅನಧಿಕೃತವಾಗಿ ರವಾನಿಸಿರುವುದನ್ನು ಪತ್ತೆಹಚ್ಚಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆಗಾಗಿ ಪ್ರಕರಣದ ಬಗ್ಗೆ ರಾಜ್ಯ ವಿಜಿಲೆನ್ಸ್ ನಿರ್ದೇಶಕರಿಗೆ ವರದಿ ಸಲ್ಲಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ಕಾಸರಗೋಡು ವಿಜಿಲೆನ್ಸ್ ಘಟಕ ಇನ್ಸ್‍ಪೆಕ್ಟರ್ ಪಿ. ನಾರಾಯಣನ್ ಅವರ ನೇತೃತ್ವದ ಅಧಿಕಾರಿಗಳ ತಂಡ ವಿವಿಧ ಉಪನೋಂದಾವಣಾ ಕಚೇರಿಗಳಿಗೆ ದಾಳಿ ನಡೆಸಿದೆ.
ಕಾಸರಗೋಡು ಉಪ ನೋಂದಾವಣಾ ಕಚೇರಿಯಲ್ಲಿ ವಿಜಿಲೆನ್ಸ್ ಡಿವೈಎಸ್‍ಪಿ ವಿ. ಉಣ್ಣಿಕೃಷ್ಣನ್, ನೀಲೇಶ್ವರದ ಉಪನೋಂದಾವಣಾ ಕಚೇರಿಗೆ ನಡೆದ ದಾಳಿಗೆ ವಿಜಿಲೆನ್ಸ್ ಇನ್ಸ್‍ಪೆಕ್ಟರ್ ಸುನಿಲ್‍ಕುಮಾರ್ ನೇತೃತ್ವ ವಹಿಸಿದ್ದರು.

