HEALTH TIPS

ಭಯೋತ್ಪಾದಕ ಜಾಲವನ್ನು ಕಿತ್ತುಹಾಕಿ ಅಥವಾ ಪರಿಣಾಮ ಎದುರಿಸಿ : ಅಫ್ಘಾನ್‍ಗೆ ರಶ್ಯ, ಚೀನಾ, ಪಾಕ್ ಮತ್ತು ಇರಾನ್ ಎಚ್ಚರಿಕೆ

ನ್ಯೂಯಾರ್ಕ್: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ(ಯುಎನ್‍ಜಿಎ) ನೇಪಥ್ಯದಲ್ಲಿ ರಶ್ಯ, ಚೀನಾ, ಪಾಕಿಸ್ತಾನ ಮತ್ತು ಇರಾನ್ ನೀಡಿರುವ ಜಂಟಿ ಹೇಳಿಕೆಯಲ್ಲಿ ಭಯೋತ್ಪಾದಕ ಜಾಲವನ್ನು ಕಿತ್ತುಹಾಕದಿದ್ದರೆ ತೀವ್ರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅಫ್ಘಾನಿಸ್ತಾನಕ್ಕೆ ಎಚ್ಚರಿಕೆ ನೀಡಿರುವುದಾಗಿ ವರದಿಯಾಗಿದೆ.

ಅಫ್ಘಾನಿಸ್ತಾನವು ದೋಹಾ ಒಪ್ಪಂದವನ್ನು ಪ್ರಾಮಾಣಿಕವಾಗಿ ಪಾಲಿಸುತ್ತಿಲ್ಲ. ಮಹಿಳೆಯರ ಮತ್ತು ಮಕ್ಕಳ ಹಕ್ಕುಗಳನ್ನು ಮೊಟಕುಗೊಳಿಸಲಾಗಿದೆ. ಅಫ್ಘಾನಿಸ್ತಾನದ ನೆಲದಿಂದ ಕಾರ್ಯಾಚರಿಸುವ ಬಲೂಚಿಸ್ತಾನ್ ಲಿಬರೇಷನ್ ಆರ್ಮಿ(ಬಿಎ), ತೆಹ್ರೀಕೆ ತಾಲಿಬಾನ್ ಪಾಕಿಸ್ತಾನ್(ಟಿಟಿಪಿ) ಹಾಗೂ ಇತರ ಭಯೋತ್ಪಾದಕ ಸಂಘಟನೆಗಳನ್ನು ತಾಲಿಬಾನ್ ನಿಯಂತ್ರಿಸಬೇಕು ಎಂದು ಪಾಕಿಸ್ತಾನ ಆಗ್ರಹಿಸಿದೆ. ಅಫ್ಘಾನಿಸ್ತಾನದಲ್ಲಿ ಐಸಿಸ್, ಅಲ್‍ಖೈದಾ, ಎಟಿಐಎಂ, ಟಿಟಿಪಿ, ಜೈಷ್, ಬಿಎಲ್‍ಎ ಮತ್ತು ಮಜೀದ್ ಬ್ರಿಗೇಡ್ ಸಕ್ರಿಯವಾಗಿದ್ದು ಈ ಗುಂಪುಗಳು ಪ್ರಾದೇಶಿಕ ಮತ್ತು ಜಾಗತಿಕ ಭದ್ರತೆಗೆ ನೇರ ಬೆದರಿಕೆಯಾಗಿವೆ ಎಂದು ನಾಲ್ಕೂ ದೇಶಗಳು ಕಳವಳ ವ್ಯಕ್ತಪಡಿಸಿದ್ದು ಉಗ್ರರ ಶಿಬಿರಗಳನ್ನು ಮುಚ್ಚಿ, ಸಮಾಜದ ಎಲ್ಲಾ ವರ್ಗದ ಪ್ರಾತಿನಿಧ್ಯ ಇರುವ ಸರಕಾರವನ್ನು ರಚಿಸಬೇಕು ಮತ್ತು ಮಹಿಳೆಯರು, ಅಲ್ಪಸಂಖ್ಯಾತರನ್ನು ರಕ್ಷಿಸಬೇಕು ಎಂದು ತಾಲಿಬಾನ್ ಆಡಳಿತವನ್ನು ಒತ್ತಾಯಿಸಿವೆ.

ಭಯೋತ್ಪಾದನೆ, ಯುದ್ಧ ಮತ್ತು ಮಾದಕವಸ್ತು ಕಳ್ಳಸಾಗಣೆಯಿಂದ ಮುಕ್ತವಾದ ಸ್ವತಂತ್ರ, ಸಂಘಟಿತ ಮತ್ತು ಸ್ಥಿರ ದೇಶವಾಗಿ ಅಫ್ಘಾನಿಸ್ತಾನಕ್ಕೆ ಬೆಂಬಲವನ್ನು 11 ಅಂಶಗಳ ಹೇಳಿಕೆಯಲ್ಲಿ ಪುನರುಚ್ಚರಿಸಲಾಗಿದ್ದು ಅಫ್ಘಾನಿಸ್ತಾನದೊಂದಿಗೆ ಪ್ರಾದೇಶಿಕ ಆರ್ಥಿಕ ಸಹಕಾರವನ್ನು ವಿಸ್ತರಿಸಲು ಸಿದ್ಧ ಎಂದು ಉಲ್ಲೇಖಿಸಲಾಗಿದೆ.

ಆರೋಪ ತಳ್ಳಿಹಾಕಿದ ಅಫ್ಘಾನಿಸ್ತಾನ ರಾಯಭಾರಿ

ಅಫ್ಘಾನಿಸ್ತಾನದ ನೆಲವನ್ನು ಭಯೋತ್ಪಾದಕ ಜಾಲಗಳಿಗೆ ಆಧಾರವಾಗಿ ಬಳಸಿಕೊಳ್ಳಲಾಗುತ್ತಿದೆ ಎಂಬ ಆರೋಪವನ್ನು ಖತರ್‌ನ ಅಫ್ಘಾನಿಸ್ತಾನದ ರಾಯಭಾರಿ ಸುಹೈಲ್ ಶಹೀನ್ ತಿರಸ್ಕರಿಸಿದ್ದಾರೆ.

ವಿಶ್ವಸಂಸ್ಥೆ ಸಾಮಾನ್ಯ ಸಭೆಯ ನೇಪಥ್ಯದಲ್ಲಿ ರಶ್ಯ, ಚೀನಾ, ಪಾಕಿಸ್ತಾನ ಮತ್ತು ಇರಾನ್ ದೇಶಗಳು ಕಳವಳ ವ್ಯಕ್ತಪಡಿಸಿರುವ ಬಗ್ಗೆ ಪ್ರತಿಕ್ರಿಯಿಸಿರುವ ಶಹೀನ್ ` ಪ್ರಾದೇಶಿಕ ಶಕ್ತಿಗಳು ಜಂಟಿ ಹೇಳಿಕೆಯಲ್ಲಿ ಪ್ರತಿಪಾದಿಸಿರುವಂತೆ ಅಫ್ಘಾನಿಸ್ತಾನವು ಭಯೋತ್ಪಾದಕ ಗುಂಪಿನ ಯಾವುದೇ ಜಾಲಗಳಿಗೆ ನೆಲೆ ಒದಗಿಸಿಲ್ಲ. ನಾವು ಮಾಧ್ಯಮ ಪಕ್ಷಪಾತದ ಬಲಿಪಶುಗಳಾಗಿದ್ದೇವೆ. ಯಾವುದೇ ಆರೋಪಗಳಿಗೆ ಸಶಕ್ತ ಪುರಾವೆಗಳ ಅಗತ್ಯವಿದೆ ಮತ್ತು ಆರೋಪವನ್ನು ಮಾಧ್ಯಮಗಳಲ್ಲಿ ಪ್ರಚಾರ ಮಾಡುವ ಬದಲು ಅಧಿಕೃತ ರಾಜತಾಂತ್ರಿಕ ಮಾರ್ಗಗಳ ಮೂಲಕ ಸಲ್ಲಿಸಬೇಕು. ಯಾವುದೇ ದೇಶಗಳು ವ್ಯಕ್ತಪಡಿಸುವ ಕಳವಳದ ಬಗ್ಗೆ ಗಮನ ಹರಿಸಲು ನಾವು ಬದ್ಧರಿದ್ದೇವೆ, ಆದರೆ ಹೇಳಿಕೆ ನೀಡುವವರು ಪುರಾವೆಗಳನ್ನು ಒದಗಿಸಬೇಕು' ಎಂದು ಹೇಳಿರುವುದಾಗಿ ವರದಿಯಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries