ಲಾಹೋರ್: ಭಾರತ ಸೇನೆ ನಡೆಸಿದ 'ಆಪರೇಷನ್ ಸಿಂಧೂರ'ದಲ್ಲಿ ಮೃತಪಟ್ಟ ಜೈಷ್-ಎ-ಮೊಹಮ್ಮದ್ (ಜೆಇಎಂ) ಉಗ್ರ ಸಂಘಟನೆಯ ಸದಸ್ಯರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಬಹವಲ್ಪುರದಲ್ಲಿರುವ ಸೇನಾ ಅಧಿಕಾರಿಗಳಿಗೆ, ಸೈನಿಕರಿಗೆ ಪಾಕಿಸ್ತಾನದ ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ಅವರು ನಿರ್ದೇಶನ ನೀಡಿದ್ದರು ಎನ್ನಲಾಗಿದೆ.
ಜೆಇಎಂ ಸಂಘಟನೆಯ ಕಮಾಂಡರ್ ಇಲಿಯಾಸ್ ಕಾಶ್ಮೀರಿ ಮಾತನಾಡಿರುವ ವಿಡಿಯೊವೊಂದು ಗುರುವಾರ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಖ್ಯೆಯಲ್ಲಿ ಹಂಚಿಕೆಯಾಗಿದೆ. ವಿಡಿಯೊದಲ್ಲಿ ಈ ಮಾಹಿತಿಯನ್ನು ಕಾಶ್ಮೀರಿ ಹಂಚಿಕೊಂಡಿದ್ದಾನೆ.
'25 ವರ್ಷಗಳ ಬಳಿಕ ಪಾಕ್ ಸೇನೆ ಹಾಗೂ ಜಿಹಾದಿಗಳು ಒಂದುಗೂಡಿದ್ದೇವೆ' ಎಂದಿರುವ ಆತನ ಮಾತುಗಳು ವಿಡಿಯೊದಲ್ಲಿದೆ. ಜೊತೆಗೆ, 'ಆಪರೇಷನ್ ಸಿಂಧೂರದಲ್ಲಿ ಇದೇ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್‌ನ ಕುಟುಂಬದ ಹತ್ತು ಸದಸ್ಯರು ಮೃತಪಟ್ಟಿದ್ದಾರೆ' ಎಂದೂ ಆತ ಹೇಳಿದ್ದಾನೆ.




