HEALTH TIPS

ಹೊರಜಗತ್ತಿನೊಂದಿಗೆ ಗಾಜಾ ಸಂಪರ್ಕ ಕಡಿತ: ದೂರವಾಣಿ, ಇಂಟರ್‌ನೆಟ್‌ ಸ್ಥಗಿತ

ಜೆರುಸಲೇಂ: ಗಾಜಾ ಪಟ್ಟಿಯು ಸಂಪೂರ್ಣವಾಗಿ ಹೊರಜಗತ್ತಿನಿಂದ ಬೇರ್ಪಟ್ಟಿದೆ. ಇಲ್ಲಿನ ಅಂತರ್ಜಾಲ ಮತ್ತು ದೂರವಾಣಿ ಸಂಪರ್ಕ ಕಡಿದು ಹೋಗಿದೆ. ಗಾಜಾದಲ್ಲಿ ಏನಾಗುತ್ತಿದೆ ಎಂಬುದು ಯಾರಿಗೂ ತಿಳಿಯದಂತಾಗಿದೆ.

ಇಸ್ರೇಲ್‌ ಸೇನೆ ಗುರುವಾರವೂ ಗಾಜಾ ನಗರದ ಮೇಲೆ ದಾಳಿ ಮುಂದುವರಿಸಿದೆ.

ದೊಡ್ಡ ಟ್ಯಾಂಕ್‌ಗಳು ಗುರುವಾರ ಗಾಜಾ ನಗರವನ್ನು ತಲುಪಿವೆ. ಭೂ, ವಾಯು ಮಾರ್ಗವಾಗಿ ಇಸ್ರೇಲ್‌ ನಿರಂತರ ದಾಳಿ ನಡೆಸುತ್ತಿದೆ.

'ಗಾಜಾದಲ್ಲೇನಾಗುತ್ತಿದೆ ಎಂಬ ಕುರಿತು ಇಸ್ರೇಲ್‌ ಸೇನೆ ನೀಡುವ ಮಾಹಿತಿಯನ್ನು ನಮಗೆ ಪರಿಶೀಲಿಸಲಾಗುತ್ತಿಲ್ಲ. ಗಾಜಾದ ಹಲವು ಭಾಗಗಳಿಗೆ ತೆರಳದಂತೆ ಮಾಧ್ಯಮದವರಿಗೆ ನಿರ್ಬಂಧ ಹೇರಲಾಗಿದೆ' ಎಂದು ಎಎಫ್‌ಪಿ ಹೇಳಿದೆ.

ಆಂಬುಲೆನ್ಸ್‌ಗೆ ಕರೆ ಮಾಡಲು ಮತ್ತು ಇಸ್ರೇಲ್‌ ನೀಡಿದ ಎಚ್ಚರಿಕೆಯಂತೆ ಗಾಜಾ ಪಟ್ಟಿಯ ದಕ್ಷಿಣಕ್ಕೆ ತೆರಳುವ ಸಂಬಂಧ ತಮ್ಮವರೊಂದಿಗೆ ಚರ್ಚಿಸಲು ದೂರವಾಣಿ ಸಂಪರ್ಕ ಇಲ್ಲದೆ ಜನರು ಪರದಾಡುವಂತಾಗಿದೆ.

ಇಸ್ರೇಲ್‌ ದಾಳಿಯಿಂದ ಮೃತಪಟ್ಟ ಪ್ಯಾಲೆಸ್ಟೀನಿಯನ್ನರ ಸಂಖ್ಯೆ 65,062ಕ್ಕೆ ಏರಿಕೆಯಾಗಿದೆ. ಇದರಲ್ಲಿ ಎಷ್ಟು ಮಂದಿ ನಾಗರಿಕರು ಎಷ್ಟು ಮಂದಿ ಹಮಾಸ್‌ ಬಂಡುಕೋರರು ಇದ್ದಾರೆ ಎನ್ನುವುದನ್ನು ಗಾಜಾದ ಆರೋಗ್ಯ ಇಲಾಖೆ ಸ್ಪಷ್ಟಪಡಿಸಿಲ್ಲ. 'ಕಳೆದ 24 ಗಂಟೆಗಳಲ್ಲಿ ಇಸ್ರೇಲ್‌ ದಾಳಿಯಲ್ಲಿ 79 ಮಂದಿ ಮೃತಪಟ್ಟಿದ್ದಾರೆ' ಎಂದು ಇಲಾಖೆ ಗುರುವಾರ ಹೇಳಿದೆ.

ನಿರಾಶ್ರಿತರ ಶಿಬಿರಗಳು, ಆಶ್ರಯ ತಾಣಗಳು, ಆಸ್ಪತ್ರೆಗಳು ಯಾವುದನ್ನೂ ಗಣನೆಗೆ ತೆಗೆದುಕೊಳ್ಳದೆ ಇಸ್ರೇಲ್‌ ಸೇನೆ ದಾಳಿ ನಡೆಸುತ್ತಿದೆ. 'ಆಸ್ಪತ್ರೆಗಳೂ ಸೇರಿದಂತೆ ಇಡೀ ಗಾಜಾವು ಸುರಕ್ಷಿತವಾಗಿಲ್ಲ ಎಂಬುದಕ್ಕೆ ಈ ದಾಳಿಗಳು ಸಾಕ್ಷ್ಯ ಒದಗಿಸುತ್ತಲಿವೆ' ಎಂದು ಇಲ್ಲಿ ಮಾನವೀಯ ಸಹಕಾರ ಒದಗಿಸುವ ಸಂಸ್ಥೆಯೊಂದು ಹೇಳಿದೆ.

ಇಸ್ರೇಲ್‌ ಸೇನೆ ಸಾರ್ವಜನಿಕ ದೂರಸಂಪರ್ಕ ಜಾಲವನ್ನು ಗುರಿಯಾಗಿಸಿ ಉದ್ದೇಶಪೂರ್ವಕವಾಗಿ ದಾಳಿ ನಡೆಸಲಾಗಿಲ್ಲ. ಇಂಥ ಘಟನೆಗಳ ಕುರಿತು ಪರಿಶೀಲಿಸಲಾಗುತ್ತಿದೆ

'ವಾಹನ ಬಾಡಿಗೆ ₹88 ಸಾವಿರ'

ಕಾರಿನಲ್ಲೋ ಲಗೇಜ್‌ ಕ್ಯಾರಿಯರ್‌ನಲ್ಲೋ ತಮಗೆ ಸಂಬಂಧಿಸಿದ ವಸ್ತುಗಳನ್ನು ಹೇರಿಕೊಂಡು ಪ್ಯಾಲೆಸ್ಟೀನಿಯನ್ನರು ಗಾಜಾಪಟ್ಟಿಯ ದಕ್ಷಿಣ ಭಾಗಕ್ಕೆ ಸಾಗುತ್ತಿದ್ದಾರೆ. ದಕ್ಷಿಣಕ್ಕೆ ತೆರಳುವ ವಾಹನದ ಬಾಡಿಗೆ 1000 ಡಾಲರ್‌ (ಸುಮಾರು ₹88 ಸಾವಿರ) ತಲುಪಿದೆ! ರಸ್ತೆ ಗುಂಡಿಗಳ ಕಾರಣದಿಂದ ವಾಹನಗಳ ಚಕ್ರಗಳಿಗೆ ಕಟ್ಟಡದ ಅವಶೇಷಗಳು ಸಿಕ್ಕಿ ವಾಹನದ ಮೇಲಿದ್ದ ವಸ್ತುಗಳು ಕೆಳಗೆ ಬೀಳುತ್ತಿವೆ.

ಆ ವಸ್ತುಗಳನ್ನು ಮತ್ತೆ ವಾಹನಕ್ಕೆ ತುಂಬಿ ಜನರು ಸಾಗುವ ದೃಶ್ಯಗಳು ಸಾಮಾನ್ಯ ಎಂಬಂತೆ ಗಾಜಾ ನಗರದಲ್ಲೆಲ್ಲಾ ಕಾಣಸಿಗುತ್ತಿವೆ. 'ಆ ದೇವರಲ್ಲಿ ನಾವು ಕೇಳುವುದಿಷ್ಟೆ. ಆಕಾಶದಲ್ಲಿ ಕಾಣುವ ಆ ಕ್ಷಿಪಣಿಗಳು ನಮ್ಮ ಮೇಲೆ ಬಿದ್ದು ಬಿಡಲಿ. ಒಮ್ಮೆಲೆ ನಾವು ಸತ್ತು ಬಿಡುತ್ತೇವೆ. ನಮಗೆ ಇರಲು ನೆಲೆ ಇಲ್ಲ ನಮ್ಮ ಬಳಿ ದುಡ್ಡಿಲ್ಲ ತಿನ್ನಲೂ ಏನಿಲ್ಲ' ಎನ್ನುತ್ತಾರೆ 32 ವರ್ಷದ ಅಯಾ ಅಹಮ್ಮದ್‌. ನೂರಾರು ಪ್ಯಾಲೆಸ್ಟೀನಿಯನ್ನರು ಗಾಜಾ ಪಟ್ಟಿಯ ದಕ್ಷಿಣಕ್ಕೆ ಕಾಲ್ನಡಿಗೆಯಲ್ಲಿ ಸಾಗುತ್ತಿದ್ದರೆ ಕೆಲವರು ಕಾರುಗಳು ಲಾರಿ ಮತ್ತು ಕತ್ತೆಗಳ ಮೂಲಕವೂ ಸಾಗುತ್ತಿದ್ದಾರೆ. 'ಇದು ಪರಿಸ್ಥಿತಿಯು ಇನ್ನಷ್ಟು ಹದಗೆಡುತ್ತಿರುವ ಮತ್ತು ಮಹಾವಲಸೆಯ ಹೊಸ ಅಲೆಯಂತೆ ಭಾಸವಾಗುತ್ತಿದೆ' ಎಂದು ವಿಶ್ವಸಂಸ್ಥೆಯ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

'ಅಮೆರಿಕ ಕೆಟ್ಟ ಮಧ್ಯಸ್ಥಿಕೆದಾರ'

'ಅಮೆರಿಕವು ಕೆಟ್ಟ ಮಧ್ಯಸ್ಥಿಕೆದಾರ ದೇಶವಾಗಿದೆ. ನಮ್ಮ ಮತ್ತು ಇಸ್ರೇಲ್‌ ನಡುವೆ ಮಧ್ಯಸ್ಥಿಕೆ ವಹಿಸಿಕೊಂಡಿದ್ದರೂ ಅಮೆರಿಕವು ಇಸ್ರೇಲ್‌ ಪರವಾಗಿಯೇ ಇದೆ' ಎಂದು ಹಮಾಸ್‌ನ ಹಿರಿಯ ಅಧಿಕಾರಿ ಘಾಜಿ ಹಮದ್ ಆರೋಪಿಸಿದ್ದಾರೆ.

ಕತಾರ್‌ ಮೇಲೆ ಇಸ್ರೇಲ್‌ ಇತ್ತೀಚೆಗೆ ದಾಳಿ ನಡೆಸಿತ್ತು. ಈ ಬಳಿಕ ಇದೇ ಮೊದಲ ಬಾರಿಗೆ ಹಮದ್ ಸಾರ್ವಜನಿಕವಾಗಿ ಬುಧವಾರ ಕಾಣಿಸಿಕೊಂಡಿದ್ದಾರೆ. ಅಲ್‌ ಜಜೀರಾ ಸುದ್ದಿ ಸಂಸ್ಥೆಗೆ ಸಂದರ್ಶನ ನೀಡಿದ್ದಾರೆ. 'ಅಮೆರಿಕದ ಕದನವಿರಾಮ ಪ್ರಸ್ತಾವದ ಕುರಿತು ಸಭೆ ನಡೆದು ಒಂದು ತಾಸು ಕಳೆದಿತ್ತು ಅಷ್ಟೆ. ನಾವು ಪ್ರಸ್ತಾವದ ಕುರಿತು ಚರ್ಚೆ ನಡೆಸುತ್ತಿದ್ದೆವು. ಅದಾಗಲೇ ಸ್ಫೋಟದ ಶಬ್ದ ಕೇಳಿಸಿತು. ಇಸ್ರೇಲ್‌ ನಡೆಸಿದ ಈ ದಾಳಿಯಲ್ಲಿ ನಮ್ಮ ಐವರು ಸದಸ್ಯರು ಮತ್ತು ಸ್ಥಳೀಯ ಅಧಿಕಾರಿಯೊಬ್ಬರು ಮೃತಪಟ್ಟರು' ಎಂದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries