HEALTH TIPS

ಕಾಂಗ್ರೆಸ್ ಸಭೆಯಲ್ಲಿ ಬಾಂಗ್ಲಾದೇಶ ರಾಷ್ಟ್ರಗೀತೆ ಪಠಣ: ತನಿಖೆಗೆ ಆದೇಶಿಸಿದ ಸರ್ಕಾರ!

ಗುವಾಹತಿ: ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ಸ್ಥಳೀಯ ನಾಯಕರೊಬ್ಬರು ಬಾಂಗ್ಲಾದೇಶ ರಾಷ್ಟ್ರಗೀತೆ ಹಾಡಿರುವ ವಿಡಿಯೋವೊಂದು ವ್ಯಾಪಕ ವೈರಲ್ ಆಗುತ್ತಿದ್ದು, ಈ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ ತನಿಖೆಗೆ ಆದೇಶಿಸಿದೆ.

ಅಸ್ಸಾಂನ ಕರಿಗಂಜ್ ಜಿಲ್ಲೆಯ ಶ್ರೀಭೂಮಿ ಪಟ್ಟಣದಲ್ಲಿ ನಡೆದ ಕಾಂಗ್ರೆಸ್ ಸೇವಾ ದಳದ ಸಭೆಯಲ್ಲಿ ಬಾಂಗ್ಲಾದೇಶದ ರಾಷ್ಟ್ರಗೀತೆ (Bangladesh National Anthem) 'ಅಮರ್ ಸೋನಾರ್ ಬಾಂಗ್ಲಾ' ಹಾಡಲಾಗಿದೆ. ಈ ಕುರಿತ ವಿಡಿಯೋ ಕೂಡ ವ್ಯಾಪಕ ವೈರಲ್ ಆಗುತ್ತಿದ್ದು, ಕಾಂಗ್ರೆಸ್ ಪಕ್ಷದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ಶ್ರೀಭೂಮಿ ಪಟ್ಟಣದ ಪಕ್ಷದ ಜಿಲ್ಲಾ ಕಚೇರಿಯಾದ ಇಂದಿರಾ ಭವನದಲ್ಲಿ ಮಂಗಳವಾರ ನಡೆದ ಕಾಂಗ್ರೆಸ್ ಸೇವಾ ದಳ ಸಭೆಯಲ್ಲಿ, ನೊಬೆಲ್ ಪ್ರಶಸ್ತಿ ವಿಜೇತ ಕವಿ ಹಾಗೂ ಭಾರತದ ರಾಷ್ಟ್ರಗೀತೆ ಜನಗಣ ಮನ ಬರೆದಿದ್ದ ರವೀಂದ್ರನಾಥ ಟ್ಯಾಗೋರ್ ಬರೆದ ಬಾಂಗ್ಲಾದೇಶದ ರಾಷ್ಟ್ರಗೀತೆ 'ಅಮರ್ ಸೋನಾರ್ ಬಾಂಗ್ಲಾ'ದ ಎರಡು ಸಾಲುಗಳನ್ನು ಹಾಡಿದ ನಂತರ ಅದರ ನಾಯಕರು ಚರ್ಚೆ ಪ್ರಾರಂಭಿಸಿದರು.

ಸಭೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ನಂತರ ವ್ಯಾಪಕ ವೈರಲ್ ಆಗುತ್ತಿದ್ದು, ಈ ಕೃತ್ಯದ ಕುರಿತು ಅಸ್ಸಾಂ ಸರ್ಕಾರ ತನಿಖೆಗೆ ಆದೇಶಿಸಿದೆ. ಕಾಂಗ್ರೆಸ್ ಸೇವಾ ದಳದ ಸಭೆಯಲ್ಲಿ ಬಾಂಗ್ಲಾದೇಶದ ರಾಷ್ಟ್ರಗೀತೆ ಹಾಡಲಾಗಿದೆ ಎಂಬ ಆರೋಪದ ಬಗ್ಗೆ ತನಿಖೆ ನಡೆಸುವಂತೆ ಅಸ್ಸಾಂ ಸರ್ಕಾರ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದೆ.

ಜಿಲ್ಲಾಡಳಿತದ ಹಿರಿಯ ಅಧಿಕಾರಿಯೊಬ್ಬರು 'ಈ ವಿಷಯದ ಬಗ್ಗೆ ತನಿಖೆ ನಡೆಸಲು ಮೀನುಗಾರಿಕಾ ಸಚಿವ ಕೃಷ್ಣೇಂದು ಪಾಲ್ ಅವರಿಂದ ಮೌಖಿಕ ಸೂಚನೆಗಳನ್ನು ಪಡೆದಿದ್ದಾರೆ ಮತ್ತು ಈಗ ಈ ವಿಷಯವನ್ನು ಪರಿಶೀಲಿಸುತ್ತಿದ್ದೇವೆ' ಎಂದು ಹೇಳಿದರು.

"ಕಾಂಗ್ರೆಸ್ ಪಾಕಿಸ್ತಾನಕ್ಕೆ ಜನ್ಮ ನೀಡಿತು, ಮತ್ತು ಬಾಂಗ್ಲಾದೇಶ ಆ ದೇಶದ ಭಾಗವಾಗಿತ್ತು. ನೆರೆಯ ದೇಶದ ಮೇಲಿನ ಪ್ರೀತಿಯನ್ನು ತೋರಿಸಲು ಕಾಂಗ್ರೆಸ್ ಬಾಂಗ್ಲಾದೇಶದ ರಾಷ್ಟ್ರಗೀತೆಯನ್ನು ಹಾಡಿದೆ. ಘಟನೆಯ ಸತ್ಯವನ್ನು ದೃಢಪಡಿಸಿದ ನಂತರ ಕಾನೂನು ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗೆ ಸೂಚನೆಗಳನ್ನು ನೀಡಲಾಗಿದೆ ಎಂದು ಹೇಳಿದರು.

ಕಾಂಗ್ರೆಸ್ ನಾಯಕರ ನಡೆಯನ್ನು ವ್ಯಾಪಕವಾಗಿ ವಿರೋಧಿಸಲಾಗುತ್ತಿದೆ. ಈ ಕುರಿತು ಬಿಜೆಪಿ ನಾಯಕರು ಸರಣಿ ವಾಕ್ಸಮರವನ್ನೇ ನಡೆಸುತ್ತಿದೆ.

ಓಲೈಕೆ ರಾಜಕೀಯ ಎಂದ ಬಿಜೆಪಿ

ಈ ಬಗ್ಗೆ ಎಕ್ಸ್​ ಪೋಸ್ಟ್​ ಮಾಡಿರುವ ಅಸ್ಸಾಂ ಸಚಿವ ಅಶೋಕ್ ಸಿಂಘಾಲ್, ಭಾರತದಿಂದ ಈಶಾನ್ಯವನ್ನು ಬೇರ್ಪಡಿಸಲು ಪ್ರಯತ್ನಿಸುತ್ತಿರುವ ದೇಶದ ರಾಷ್ಟ್ರಗೀತೆ ಹಾಡಲು ಕಾಂಗ್ರೆಸ್ ಅನುಮತಿ ನೀಡಿದ್ದಕ್ಕಾಗಿ ವಾಗ್ದಾಳಿ ನಡೆಸಿದ್ದಾರೆ. 'ಮತ ಬ್ಯಾಂಕ್ ರಾಜಕೀಯಕ್ಕಾಗಿ ರಾಜ್ಯದ ಜನಸಂಖ್ಯೆಯನ್ನು ಬದಲಾಯಿಸಲು ಮತ್ತು ಗ್ರೇಟರ್ ಬಾಂಗ್ಲಾದೇಶವನ್ನು ರಚಿಸಲು ಕಾಂಗ್ರೆಸ್ ದಶಕಗಳಿಂದ MIAಯ ಅಕ್ರಮ ಒಳನುಸುಳುಕೋರರನ್ನು ಏಕೆ ಅನುಮತಿಸುತ್ತಿದೆ ಮತ್ತು ಪ್ರೋತ್ಸಾಹಿಸುತ್ತಿದೆ ಎಂಬುದು ಈಗ ಸ್ಪಷ್ಟವಾಗಿದೆ ಎಂದು ಸಿಂಘಾಲ್ ಟೀಕಾಪ್ರಹಾರ ಮಾಡಿದ್ದಾರೆ.

ಕಾಂಗ್ರೆಸ್ ಸ್ಪಷ್ಟನೆ

ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ಶ್ರೀಭೂಮಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತಪಸ್ ಪುರ್ಕಾಯಸ್ಥ, "ರವೀಂದ್ರನಾಥ ಟ್ಯಾಗೋರ್ ಅವರನ್ನೂ ನಿಮ್ಮ ರಾಜಕೀಯಕ್ಕೆ ತರಬೇಡಿ. ನಮ್ಮ ಹೆಮ್ಮೆಯ 85 ವರ್ಷದ ಕವಿ ವಿಧುಭೂಷಣ್ ದಾಸ್ ಹಾಡಿನ ಕೇವಲ ಎರಡು ಸಾಲುಗಳನ್ನು ಹಾಡಿದ್ದಾರೆ. ಈ ಹಾಡನ್ನು ಟೀಕಿಸುವುದು ರವೀಂದ್ರನಾಥ ಟ್ಯಾಗೋರ್ ಅವರನ್ನು ಅವಮಾನಿಸಿದಂತೆ" ಎಂದು ಹೇಳಿದರು.

ಅಸ್ಸಾಂ ಕಾಂಗ್ರೆಸ್ ಅಧ್ಯಕ್ಷ ಗೌರವ್ ಗೊಗೊಯ್ ಕೂಡ ಭಾರತೀಯ ಜನತಾ ಪಕ್ಷವನ್ನು ಟೀಕಿಸಿದರು ಮತ್ತು ಆಡಳಿತ ಪಕ್ಷವು ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಬೇರೆ ಯಾವುದೇ ಸಮಸ್ಯೆಯನ್ನು ಹೊಂದಿಲ್ಲದ ಕಾರಣ 'ಅನಗತ್ಯ ವಿವಾದ'ವನ್ನು ಸೃಷ್ಟಿಸುತ್ತಿದೆ ಎಂದು ಹೇಳಿದರು.

ಭಾರತ ಭೂ ಭಾಗ ತನ್ನದೆಂದು ನಕ್ಷೆ ಬದಲಿಸಿದ್ದ ಬಾಂಗ್ಲಾದೇಶ

ಇನ್ನು ಇಡೀ ಈಶಾನ್ಯವನ್ನು ನುಂಗುವ ನಕ್ಷೆಯ ಬಗ್ಗೆ ಪಕ್ಷವು ಉಲ್ಲೇಖಿಸಿದ್ದು, ಬಾಂಗ್ಲಾದೇಶದ ಮಧ್ಯಂತರ ನಾಯಕ ಮುಹಮ್ಮದ್ ಯೂನಸ್ ಇತ್ತೀಚೆಗೆ ಅಸ್ಸಾಂ ಮತ್ತು ಇತರ ಈಶಾನ್ಯ ರಾಜ್ಯಗಳನ್ನು ಬಾಂಗ್ಲಾದೇಶದ ಭಾಗವೆಂದು ತೋರಿಸುವ ವಿವಾದಾತ್ಮಕ ನಕ್ಷೆಯನ್ನು ಹೊಂದಿರುವ ಪುಸ್ತಕವನ್ನು ಬಾಂಗ್ಲಾಗೆ ಭೇಟಿ ನೀಡಿದ ಪಾಕಿಸ್ತಾನಿ ಜನರಲ್‌ಗೆ ಉಡುಗೊರೆಯಾಗಿ ನೀಡಿದ್ದನ್ನು ಉಲ್ಲೇಖಿಸಲಾಗಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries