ಬಿಜಾಪುರ: ಉಗ್ರ ಮಾವೋವಾದಿ ನಾಯಕಿ ಹಾಗೂ ಹಿರಿಯ ನಕ್ಸಲ್ ಪಾಪಾರಾವ್ ಅವರ ಪತ್ನಿ ಊರ್ಮಿಳಾ, ಬುಚ್ಚಣ್ಣ ಕುಡಿಯಂ ಸೇರಿದಂತೆ ಆರು ಮಂದಿ ನಕ್ಸಲರು ಛತ್ತೀಸಗಢದ ಬಿಜಾಪುರ್ ಜಿಲ್ಲೆಯಲ್ಲಿ ನವೆಂಬರ್ 11ರಂದು ಭದ್ರತಾ ಪಡೆಗಳು ನಡೆಸಿದ ಗುಂಡಿನ ದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂದು ಗುರುವಾರ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕಾಂಡುಲ್ನರ್ ಮತ್ತು ಕಚಲರಾಮ್ ಗ್ರಾಮದ ಸಮೀಪ ಇರುವ ಇಂದ್ರಾವತಿ ರಾಷ್ಟ್ರೀಯ ಉದ್ಯಾನದ ದಟ್ಟ ಅರಣ್ಯದಲ್ಲಿ ಇವರೆಲ್ಲರೂ ಗುಂಡಿಗೆ ಬಲಿಯಾದರು. ಇವರೆಲ್ಲರ ಮಾಹಿತಿ ಕೊಟ್ಟವರಿಗೆ ₹27 ಲಕ್ಷ ಬಹುಮಾನ ಘೋಷಿಸಲಾಗಿತ್ತು ಎಂದು ಬಿಜಾಪುರ್ ಎಸ್.ಪಿ. ಜಿತೇಂದ್ರ ಯಾದವ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಬುಚ್ಚಣ್ಣ ಅಲಿಯಾಸ್ ಕನ್ನಾ ಹಲವು ಬೃಹತ್ ನಕ್ಸಲ್ ದಾಳಿಗಳ ಸೂತ್ರಧಾರರಾಗಿದ್ದರು. ಪೊಲೀಸ್ ಮಾಹಿತಿದಾರರು ಎಂದು ಭಾವಿಸಿ 20 ಗ್ರಾಮಸ್ಥರನ್ನು ಬಾಂಬ್‌ಗಳನ್ನು ಸ್ಫೋಟಿಸಿ ಹತ್ಯೆ ಮಾಡಿದ ಆರೋಪ ಇವರ ಮೇಲಿತ್ತು. ಊರ್ಮಿಳಾ ಪೀಪಲ್ಸ್ ಲಿಬರೇಷನ್ ಗೆರಿಲ್ಲಾ ಆರ್ಮಿಯ ಸಹಚರರಾಗಿದ್ದರು. ಇವರಲ್ಲದೇ ಜಗತ್ ಟಾಮೋ ಅಲಿಯಾಸ್ ಟಾಮೋ, ದೇವೆ, ಭಗತ್, ಮಂಗ್ಲಿ ಓಯಮ್ ಗುಂಡಿನ ದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿ ತಿಳಿಸಿದರು.




