ನವದೆಹಲಿ: ಭಾರತದಲ್ಲಿ ಹೆದ್ದಾರಿ, ಎಕ್ಸ್‌ಪ್ರೆಸ್‌ವೇ ಮೂಲಕ ರಸ್ತೆ ಸಾರಿಗೆ ಸಂಪರ್ಕ ಮೇಲ್ದರ್ಜೆಗೆ ಏರಿಸಲಾಗಿದೆ. ಹೀಗಾಗಿ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹ ಸರ್ವೆ ಸಾಮಾನ್ಯವಾಗಿದೆ. ಎಕ್ಸ್‌ಪ್ರೆಸ್ ವೇಗಳ ಟೋಲ್ ದುಬಾರಿ ಎಂದು ಪ್ರತಿಭಟನೆಗಳು ನಡೆದಿದೆ.
ಇದರ ನಡುವೆ ಸುಪ್ರೀಂ ಕೋರ್ಟ್ ಮಹತ್ವದ ಸೂಚನೆಗಳನ್ನು ದೆಹಲಿ ಸರ್ಕಾರಕ್ಕೆ ನೀಡಿದೆ. ತಾತ್ಕಾಲಿಕವಾಗಿ ಟ್ರೋಲ್ ಸಂಗ್ರಹ ಸ್ಥಗಿತಗೊಳಿಸಲು ಸಲಹೆ ನೀಡಿದೆ. ಚಳಿಗಾಲದಲ್ಲಿ ಅಂದರೆ ಅಕ್ಟೋಬರ್ 1 ರಿಂದ ಜನವರಿ 31ರ ವರೆಗೆ ಟೋಲ್ ಸಂಗ್ರಹ ನಿಲ್ಲಿಸಲು ಸುಪ್ರೀಂ ಕೋರ್ಟ್ ಹೇಳಿದೆ. ಹೌದು, ದೆಹಲಿಯಲ್ಲಿ ವಾಯು ಮಾಲಿನ್ಯ ವಿಪರೀತವಾಗುತ್ತಿರುವ ಹಿನ್ನಲೆಯಲ್ಲಿ ದೆಹಲಿ ಸುತ್ತಮುತ್ತಲಿನ ಟೋಲ್ ಸಂಗ್ರಹ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಸೂಚಿಸಿದೆ.
ಟೋಲ್ ಹಣ ಮುಖ್ಯವಲ್ಲ, ಆರೋಗ್ಯ ಮುಖ್ಯ
ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಸೂರ್ಯ ಕಾಂತ್ ಹಲವು ಸೂಚನೆಗಳ ಜೊತೆಗೆ ದೆಹಲಿ ಸರ್ಕಾರಕ್ಕೆ ಮಹತ್ವದ ಸಲಹೆ ನೀಡಿದ್ದಾರೆ. ವಾಯು ಮಾಲಿನ್ಯ ವಿಪರೀತವಾಗು ಸಂದರ್ಭದಲ್ಲಿ ಟೋಲ್‌ನಿಂದ ಬರುವ ಹಣ ಮುಖ್ಯವಲ್ಲ. ಮಾಲಿನ್ಯ ತಗ್ಗಿಸಲು, ಆರೋಗ್ಯ ಕಾಪಾಡಿಕೊಳ್ಳಲು ಬೇಕಾದ ಕ್ರಮಗಳು ಅಗತ್ಯ ಎಂದು ಚೀಫ್ ಜಸ್ಟೀಸ್ ಆಫ್ ಇಂಡಿಯಾ ಸೂರ್ಯ ಕಾಂತ್ ಅಭಿಪ್ರಾಯಪಟ್ಟಿದ್ದಾರೆ.
ಜನವರಿ 31ರ ವರೆಗೆ ಟೋಲ್ ಸಂಗ್ರಹ ಬೇಡ
ದೆಹಲಿಯಲ್ಲಿ ವಾಯು ಮಾಲಿನ್ಯ ಪರಿಸ್ಥಿತಿ ಕೈಮೀರಿದೆ. ಸದ್ಯ ತೆಗೆದುಕೊಂಡಿರುವ ಯಾವುದೇ ನಿರ್ಧಾರಗಳು ವಾಯು ಮಾಲಿನ್ಯ ತಗ್ಗಿಸಲು ಸಾಧ್ಯವಾಗಿಲ್ಲ. ಹೀಗಾಗಿ ಜನವರಿ 31ರ ವರೆಗೆ ದೆಹಲಿ ಹೊರವಲಯದಲ್ಲಿರುವ ಎಲ್ಲಾ ಟೋಲ್‌ಗಳು ಮುಕ್ತವಾಗಿರಲಿ. ಇಷ್ಟೇ ಪ್ರತಿ ವರ್ಷ ದೆಹಲಿ ಸುತ್ತ ಮುತ್ತಲಿನ ಟೋಲ್ ಅಕ್ಟೋಬರ್ 1 ರಿಂದ ಜನವರಿ 31ರ ವರೆಗೆ ಸ್ಥಗಿತ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಚಳಿಗಾಲದಲ್ಲಿ ದೆಹಲಿ ವಾಯು ಮಾಲಿನ್ಯ ವಿಪರೀತವಾಗುತ್ತದೆ. ಹೀಗಾಗಿ ಈ ಸಮಯದಲ್ಲಿ ಟೋಲ್ ಸಂಗ್ರಹಕ್ಕೆ ತಾತ್ಕಾಲಿಕ ಬ್ರೇಕ್ ಹಾಕುವುದು ಉತ್ತಮ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ಟೋಲ್ ಸ್ಥಗಿತದಿಂದ ವಾಯು ಮಾಲಿನ್ಯ ಕಡಿಮೆಗೊಳಿಸುವುದು ಹೇಗೆ?
ದೆಹಲಿ ವಾಯು ಮಾಲಿನ್ಯದ ಕಾರಣ ಚಳಿಗಾಲದಲ್ಲಿ ದೆಹಲಿ ಸುತ್ತ ಮುತ್ತಲಿನ ಟೋಲ್ ಸಂಗ್ರಹ ಸ್ಥಗಿತಗೊಳಿಸಲು ಸುಪ್ರೀಂ ಕೋರ್ಟ್ ಸಲಹೆ ನೀಡಿದೆ. ಇದಕ್ಕೆ ಮುಖ್ಯ ಕಾರಣ ಟೋಲ್ ಗೇಟ್‌ಗಳಿಂದ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ವಾಹನಗಳು ಸರಾಗವಾಗಿ ಸಾಗುತ್ತಿಲ್ಲ. ದೆಹಲಿ ನಗರದ ಒಳಗಡೆ ಟ್ರಾಫಿಕ್ ಜಾಮ್ ಹೆಚ್ಚಾಗುತ್ತಿದೆ. ಹೆಚ್ಚಿನ ವಾಹನಗಳು ಟ್ರಾಫಿಕ್ ಜಾಮ್ ರಸ್ತೆಯಲ್ಲಿ ಸಂಚರಿಸುವಾಗ ಮಾಲಿನ್ಯ ಪ್ರಮಾಣ ಹೆಚ್ಚಾಗುತ್ತಿದೆ. ಸರಾಗವಾಗಿ ವಾಹನಗಳು ತೆರಳಿದರೆ ಮಾಲಿನ್ಯದ ಪ್ರಮಾಣ ಕಡಿಮೆ ಮಾಡಲು ಸಾಧ್ಯ ಅನ್ನೋದು ಸುಪ್ರೀಂ ಕೋರ್ಟ್ ಅಭಿಪ್ರಾಯ.
ಕನಿಷ್ಠ 50 ಕಿಲೋಮೀಟರ್ ಟೋಲ್ ಪ್ಲಾಜ್ ಇರಬೇಕು
ಸದ್ಯ ಹೆದ್ದಾರಿ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ 5 ರಿಂದ 10 ಕಿಲೋಮೀಟರ್‌ಗೂ ಟೋಲ್ ಪ್ಲಾಜಾಗಳಿವೆ. ಇದು ಸರಿಯಾದ ಕ್ರಮವಲ್ಲ. ಇದರಿಂದ ವಾಹನ ಸಂಚಾರ ದಟ್ಟಣೆ, ವಾಯು ಮಾಲಿನ್ಯ ಹೆಚ್ಚಾಗಲಿದೆ. ಇದರ ಬದಲು ಕನಿಷ್ಠ 50 ಕಿಲೋಮೀಟರ್ ದೂರಕ್ಕೆ ಟೋಲ್ ಪ್ಲಾಜಾ ಇರಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ದೆಹಲಿ ಸುತ್ತ ಮುತ್ತ 9 ಟೋಲ್ ಪ್ಲಾಜಾಗಳಿವೆ. ಈ ಟೋಲ್ ಪ್ಲಾಜಾ ಸ್ಥಗಿತಗೊಳಿಸುವ ಕುರಿತು,ವಾಹನ ಸಂಚಾರ ದಟ್ಟಣೆ ಕಡಿಮೆ ಮಾಡುವ ಕುರಿತು ಒಂದು ವಾರದೊಳಗೆ ಸೂಕ್ತ ಯೋಜನೆ ರೂಪಿಸಬೇಕು. ದೆಹಲಿ ವಾಯು ಮಾಲಿನ್ಯ ತಗ್ಗಿಸಲು ಪರಿಣಾಮಕಾರಿಯಾದ ಕ್ರಮಗಳನ್ನು ತೆಗೆದುಕೊಳ್ಳಬೇಕು.

