ನವದೆಹಲಿ: ದೆಹಲಿಯ ಕೆಂಪುಕೋಟೆ ಬಳಿ ನಡೆದ ಕಾರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್‌ಐಎ) ಜಮ್ಮು-ಕಾಶ್ಮೀರದ ನಿವಾಸಿಯೊಬ್ಬರನ್ನು ಬಂಧಿಸಿದೆ. ಇದರೊಂದಿಗೆ ಪ್ರಕರಣದಲ್ಲಿ ಬಂಧನಕ್ಕೀಡಾದವರ ಸಂಖ್ಯೆ 9ಕ್ಕೆ ತಲುಪಿದೆ.
ಬಂಧಿತ ವ್ಯಕ್ತಿಯನ್ನು ಶ್ರೀನಗರದ ಶೋಪಿಯಾನ್ ನಿವಾಸಿ ಯಾಸಿರ್ ಅಹ್ಮದ್ ದಾರ್ ಎಂದು ಗುರುತಿಸಲಾಗಿದೆ.
ಈತ ಆತ್ಮಾಹುತಿ ಬಾಂಬರ್ ಡಾ.ಉಮರ್ ನಬಿಯ ಆಪ್ತ ಸಹಚರನಾಗಿದ್ದು, ಪ್ರಕರಣದ ಮತ್ತೊಬ್ಬ ಆರೋಪಿ ಮುಫ್ತಿ ಇರ್ಫಾನ್ ಸೇರಿ ಇನ್ನೂ ಹಲವರ ಜತೆಗೂ ಆಪ‍್ತ ಸಂಪರ್ಕ ಹೊಂದಿದ್ದಾನೆ ಎಂದು ಎನ್‌ಐಎ ವಕ್ತಾರರು ತಿಳಿಸಿದ್ದಾರೆ.
'ಸ್ಫೋಟದ ಹಿಂದಿನ ಪಿತೂರಿಯಲ್ಲಿ ದಾರ್‌ನ ಕೈವಾಡವೂ ಇದೆ. ಆತ್ಮಾಹುತಿ ದಾಳಿಗಳನ್ನು ನಡೆಸಲು ಆತನೂ ಶಪಥಗೈದಿದ್ದಾನೆ ಎಂಬುದು ತಿಳಿದುಬಂದಿದೆ. ದೆಹಲಿಯಲ್ಲಿ ಆತನನ್ನು ಸೆರೆಹಿಡಿಯಲಾಯಿತು' ಎಂದೂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

