HEALTH TIPS

AQI 750ರಿಂದ 68ಕ್ಕೆ ಇಳಿಸಿದ ಚೀನಾದಿಂದ ದೆಹಲಿಗೆ ವಾಯುಮಾಲಿನ್ಯ ನಿಯಂತ್ರಣ ಸಲಹೆ

ನವದೆಹಲಿ: ವಾಯುಮಾಲಿನ್ಯ ಜಗತ್ತಿನಾದ್ಯಂತ ಹಲವು ರಾಷ್ಟ್ರಗಳಲ್ಲಿ ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ. ಭಾರತದ ರಾಜಧಾನಿ ದೆಹಲಿಯಲ್ಲಿ ಗಾಳಿಯ ಗುಣಮಟ್ಟ ತೀರಾ ಕಳಪೆಗೆ ಕುಸಿದಿದೆ. ಸದ್ಯ ದೆಹಲಿಯಲ್ಲಿನ ವಾಯುಮಾಲಿನ್ಯ ಸಮಸ್ಯೆ ನಿವಾರಣೆಗೆ ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಬಹುದು, ಈ ಹಿಂದೆ ಚೀನಾದ ರಾಜಧಾನಿ ಬೀಜಿಂಗ್‌ನಲ್ಲಿ ಉಲ್ಬಣಿಸಿದ್ದ ವಾಯು ಮಾಲಿನ್ಯ ಸಮಸ್ಯೆಯನ್ನು ಹೇಗೆ ನಿಯಂತ್ರಣಕ್ಕೆ ತರಲಾಗಿದೆ ಎಂದು ಭಾರತದಲ್ಲಿರುವ ಚೀನಾ ರಾಯಭಾರಿ ಕಚೇರಿ ಮಾಹಿತಿ ಹಂಚಿಕೊಂಡಿದೆ.

ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಹಲವು ಪೋಸ್ಟ್‌ಗಳನ್ನು ಹಂಚಿಕೊಳ್ಳುವ ಮೂಲಕ ಬೀಜಿಂಗ್‌ ಮತ್ತು ದೆಹಲಿಯನ್ನು ಹೋಲಿಕೆ ಮಾಡಿದೆ. ಜತೆಗೆ ಮಾಲಿನ್ಯ ನಿಯಂತ್ರಣಕ್ಕೆ ಚೀನಾ ಕೈಗೊಂಡ ನಿಯಮಗಳ ಬಗ್ಗೆ ತಿಳಿಸಿದೆ.

ಭಾರತದಲ್ಲಿನ ಚೀನಾ ರಾಯಭಾರಿ ಹಂಚಿಕೊಂಡ ಸಲಹೆಗಳಿವು

1) ವಾಹನ ಹೊರಸೂಸುವ ಹೊಗೆಯ ನಿಯಂತ್ರಣ

  • ವಾಹನ ಹೊರಸೂಸುವ ಹೊಗೆಯನ್ನು ನಿಯಂತ್ರಿಸಲು ಚೀನಾ ಅಳವಡಿಸಿಕೊಂಡಿರುವ 6NI ನಿಯಮವನ್ನು ಪಾಲಿಸಿ.

  • ಹಳೆಯ ಮತ್ತು ಹೆಚ್ಚು ಹೊಗೆಯನ್ನು ಹೊರಸೂಸುವ ವಾಹನಗಳನ್ನು ಹಂತ ಹಂತವಾಗಿ ರಸ್ತೆಗಿಳಿಯದಂತೆ ಮಾಡಿ.

  • ಕಾರುಗಳ ಸಂಖ್ಯೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ನಂಬರ್‌ ಪ್ಲೇಟ್‌ ಅನ್ನು ಲಾಟರಿ ಮೂಲಕ ಹಂಚುವುದು ಮತ್ತು ಸಮ ಹಾಗೂ ಬೆಸ ನೋಂದಣಿ ಸಂಖ್ಯೆಯ ವಾಹನಗಳಿಗೆ ಮಾತ್ರ ರಸ್ತೆಗಿಳಿಸುವ ಅನುಮತಿ ಅಥವಾ ವಾರದ ದಿನಗಳಲ್ಲಿ ಚಾಲನಾ ನಿಯಮ ಅನುಷ್ಠಾನಗೊಳಿಸಿ.

  • ಮೆಟ್ರೊ ಮತ್ತು ಬಸ್‌ ಸಂಪರ್ಕ ವ್ಯವಸ್ಥೆಯನ್ನು ಹೆಚ್ಚಿಸಿ.

  • ಇಂಧನ ವಾಹನಗಳ ಬದಲಾಗಿ ಎಲೆಕ್ಟ್ರಿಕ್‌ ವಾಹನಗಳಿಗೆ ಬದಲಾಯಿಸಿ.

  • 2) ಕೈಗಾರಿಕೆಗಳ ಬಗ್ಗೆ ನಿಗಾ

    • ಚೀನಾದಲ್ಲಿ 3 ಸಾವಿರಕ್ಕೂ ಅಧಿಕ ಭಾರಿ ಕೈಗಾರಿಕೆಗಳ ಸ್ಥಗಿತ ಅಥವಾ ಸ್ಥಳಾಂತರಗೊಳಿಸಲಾಗಿದೆ.

    • ಚೀನಾದಲ್ಲಿ ಉಕ್ಕು ತಯಾರಿಸುವ ಅತಿದೊಡ್ಡ ಕೈಗಾರಿಕೆಗಳಲ್ಲಿ ಒಂದಾದ ಶೌಗಾಂಗ್ ಕೈಗಾರಿಕೆಯನ್ನು ಸ್ಥಳಾಂತರಿಸುವ ಮೂಲಕ ಶೇ 20 ರಷ್ಟು ವಾಯುಮಾಲಿನ್ಯ ಸಮಸ್ಯೆಯನ್ನು ನಿಯಂತ್ರಿಸಲಾಗಿದೆ.

    • ಖಾಲಿ ಇರುವ ಕಾರ್ಖಾನೆಗಳನ್ನು ಉದ್ಯಾನವನ, ವಾಣಿಜ್ಯ ವಲಯ, ಸಾಂಸ್ಕೃತಿಕ ಮತ್ತು ತಂತ್ರಜ್ಞಾನ ಕೇಂದ್ರಗಳಾಗಿ ಪರಿವರ್ತಿಸಲಾಗಿದೆ. ಉದಾಹರಣೆಗೆ ಹಿಂದಿನ ಶೌಗಾಂಗ್ ತಾಣವು 2022ರ ಚಳಿಗಾಲದ ಒಲಿಂಪಿಕ್ಸ್ ಸ್ಥಳವಾಯಿತು.

    • ಸಗಟು ಮಾರುಕಟ್ಟೆಗಳು, ಲಾಜಿಸ್ಟಿಕ್ಸ್ ಕೇಂದ್ರಗಳು, ಕೆಲವು ಶೈಕ್ಷಣಿಕ ಮತ್ತು ವೈದ್ಯಕೀಯ ಸಂಸ್ಥೆಗಳನ್ನು ಸ್ಥಳಾಂತರಿಸಿ.

    • ಹೆಚ್ಚಿನ ಮೌಲ್ಯದ ಸಂಶೋಧನೆ, ಅಭಿವೃದ್ಧಿ ಮತ್ತು ಸೇವೆಗಳನ್ನು ಉಳಿಸಿಕೊಂಡು, ಸಾಮಾನ್ಯ ಉತ್ಪಾದನೆಯನ್ನು ಹೆಬೈ ಪ್ರಾಂತ್ಯಕ್ಕೆ ಸ್ಥಳಾಂತರಿಸುವ ಮೂಲಕ ಪ್ರಾದೇಶಿಕ ಏಕೀಕರಣ ಕ್ರಮವನ್ನು ಚೀನಾ ಕೈಗೊಂಡಿದೆ.

    • ಚೀನಾ ರಾಜಧಾನಿ ಬೀಜಿಂಗ್‌ನಲ್ಲಿ 2013ರಲ್ಲಿ PM 2.5 ಗಾತ್ರದ ಧೂಳಿನ ಕಣಗಳು ಗಾಳಿಯನ್ನು ಮಲೀನಗೊಳಿಸುವ ಮೂಲಕ ಎಕ್ಯೂಐ ಪ್ರಮಾಣ 755 ಘನ ಮೈಕ್ರೋಗ್ರಾಂಗೆ ತಲುಪಿತ್ತು. 2023ರಲ್ಲಿ ಇದು 236ಕ್ಕೆ ಇಳಿಯಿತು. ಈಗ 68ಕ್ಕೆ ಬಂದು ತಲುಪಿದೆ. ಈ ಮೂಲಕ ವಾರ್ಷಿಕ ಗಾಳಿಯ ಗುಣಮಟ್ಟ 100ಕ್ಕಿಂತಲೂ ಕಡಿಮೆ ಇದೆ. ಅಂದರೆ ಈಗ ಬೀಜಿಂಗ್‌ನಲ್ಲಿ ಉತ್ತಮ ಗುಣಮಟ್ಟದ ಗಾಳಿಯಿದೆ.

      ಆದರೆ ದೆಹಲಿಯಲ್ಲಿ ಎಕ್ಯೂಐ ಸೂಚ್ಯಂಕ 400ರ ಗಡಿದಾಟಿದೆ. ಅಂದರೆ ಗಾಳಿಯ ಗುಣಮಟ್ಟ ತೀವ್ರ ಕಳಪೆ ಮಟ್ಟಕ್ಕೆ ಕುಸಿದಿದೆ.

      ಎಕ್ಯೂಐ ಪ್ರಮಾಣ ಸೊನ್ನೆಯಿಂದ 50 ರಷ್ಟಿದ್ದರೆ 'ಉತ್ತಮ' ಎಂದು, 51ರಿಂದ 100ರಷ್ಟಿದ್ದರೆ 'ಸಮಾಧಾನಕರ', 101 ರಿಂದ 200ರಷ್ಟಿದ್ದರೆ 'ಸಾಧಾರಣ', 201 ರಿಂದ 300ರಷ್ಟಿದ್ದರೆ 'ಕಳಪೆ' ಹಾಗೂ 301ರಿಂದ 400ರಷ್ಟಿದ್ದರೆ 'ಅತ್ಯಂತ ಕಳಪೆ' ಎಂದು ಹೇಳಲಾಗುತ್ತದೆ. 401ರಿಂದ 450ರಷ್ಟು ಕಂಡು ಬಂದರೆ 'ತೀವ್ರ ಕಳಪೆ' ಹಾಗೂ 450ಕ್ಕಿಂತ ಹೆಚ್ಚಾದರೆ 'ತೀವ್ರಕ್ಕಿಂತಲೂ ಅಪಾಯಕಾರಿ' ಎಂದು ಪರಿಗಣಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries