HEALTH TIPS

ಬಾಂಗ್ಲಾ ಮೊದಲ ಮಹಿಳಾ ಪ್ರಧಾನಿ ಖಲೀದಾ ಜಿಯಾ ಜನಿಸಿದ್ದು ಭಾರತದಲ್ಲಿ

 ಢಾಕಾ: ಬಾಂಗ್ಲಾದೇಶದ ರಾಜಕೀಯದಲ್ಲಿ ಹೊಸ ಅಲೆ ಮೂಡಿಸಿದ್ದ ಮೊದಲ ಮಹಿಳಾ ಪ್ರಧಾನಿ ಬೇಗಂ ಖಲೀದಾ ಜಿಯಾ (80) ಅವರು ಮಂಗಳವಾರ ಅನಾರೋಗ್ಯದ ಕಾರಣದಿಂದ ನಿಧನರಾಗಿದ್ದಾರೆ.

ಬಾಂಗ್ಲಾದೇಶ ನ್ಯಾಷನಲ್‌ ಪಕ್ಷದ (ಬಿಎನ್‌ಪಿ) ಅಧ್ಯಕ್ಷೆಯಾಗಿದ್ದ ಖಲೀದಾ ಅವರು ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಜಯ ಸಾಧಿಸಿ ಪ್ರಧಾನಿಯಾಗಲಿದ್ದಾರೆ ಎನ್ನುವ ಮಾತುಗಳು ಬಾಂಗ್ಲಾ ರಾಜಕೀಯ ವಲಯದಲ್ಲಿ ಕೇಳಿಬಂದಿದ್ದವು. 


ಖಲೀದಾ ಜಿಯಾ 1945ರಲ್ಲಿ ಬ್ರಿಟಿಷ್ ಭಾರತದ ಬಂಗಾಳ ಪ್ರೆಸಿಡೆನ್ಸಿಯಆಗಿನ ಅವಿಭಜಿತ ದಿನಾಜ್‌ಪುರ ಜಿಲ್ಲೆಯಲ್ಲಿ (ಈಗ ಭಾರತದ ಪಶ್ಚಿಮ ಬಂಗಾಳದ ಜಲ್ಪೈಗುರಿ) ಜನಿಸಿದ್ದರು. ಹೀಗಾಗಿ ಖಲೀದಾ ಅವರಿಗೆ ಭಾರತದ ನಂಟೂ ಇದೆ. ವಿಭಜನೆಯ ನಂತರ, ಖಲೀದಾ ಮತ್ತು ಅವರ ಕುಟುಂಬ ದಿನಾಜ್‌ಪುರ ಪಟ್ಟಣಕ್ಕೆ (ಈಗ ಬಾಂಗ್ಲಾದೇಶದಲ್ಲಿದೆ) ವಲಸೆ ಬಂದಿದ್ದರು.

ಬಾಂಗ್ಲಾ ಅಧ್ಯಕ್ಷರಾಗಿದ್ದ ಜಿಯಾವುರ್ ರೆಹಮಾನ್ ಅವರನ್ನು 1960ರಲ್ಲಿ ಖಲೀದಾ ವಿವಾಹವಾಗಿದ್ದರು. 1981ರಲ್ಲಿ ಜಿಯಾವುರ್ ಅವರ ಹತ್ಯೆಯಾಯಿತು. ತದನಂತರ ಖಲೀದಾ ಬಿಎನ್‌ಪಿಗೆ ಸಾಮಾನ್ಯ ಸದಸ್ಯರಾಗಿ ಸೇರಿದ್ದರು. 1983ರಲ್ಲಿ ಪಕ್ಷದ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಒಂದು ವರ್ಷದ ನಂತರ, ಪಕ್ಷವು ಅವರನ್ನು ಅಧ್ಯಕ್ಷೆಯಾಗಿ ಆಯ್ಕೆ ಮಾಡಿತು.

1983ರಲ್ಲಿ ಬಾಂಗ್ಲಾದೇಶ ಸೇನಾ ಮುಖ್ಯಸ್ಥ ಜನರಲ್ ಹುಸೇನ್ ಮುಹಮ್ಮದ್ ಎರ್ಷಾದ್ ಅವರ ಆಡಳಿತವನ್ನು ಕೊನೆಗೊಳಿಸಲು ಏಳು ಪಕ್ಷಗಳ ಮೈತ್ರಿಕೂಟವನ್ನು ರಚಿಸುವಲ್ಲಿ ಖಲೀದಾ ಪ್ರಮುಖ ಪಾತ್ರವಹಿಸಿದ್ದರು.

1991ರಲ್ಲಿ ಪ್ರಜಾಪ್ರಭುತ್ವ ಸ್ಥಾಪನೆಯಾದ ಬಳಿಕ ಖಲೀದಾ ಮೊದಲ ಮಹಿಳಾ ಪ್ರಧಾನಿಯಾಗಿ ಆಯ್ಕೆಯಾದರು. 1996 (12 ದಿನಗಳ ಕಾಲ) 2001ರಲ್ಲೂ ಪ್ರಧಾನಿ ಹುದ್ದೆಗೇರುವ ಮೂಲಕ ಮೂರು ಬಾರಿ ಪ್ರಧಾನಿಯಾಗಿ ಆಡಳಿತ ನಡೆಸಿದ್ದರು.

ರಾಷ್ಟ್ರೀಯತೆ, ಮಿಲಿಟರಿ, ಆಡಳಿತ ಯಂತ್ರದಲ್ಲಿ ಅಮೂಲಾಗ್ರ ಬದಲಾವಣೆ ತಂದಿದ್ದ ಖಲೀದಾ, ಭಾರತ ಮತ್ತು ಬಾಂಗ್ಲಾದೇಶ ನಡುವಿನ ಸಂಬಂಧ ಕುರಿತಂತೆ ಅನೇಕ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದ್ದರು.

ವಿವಾದಗಳಿಗೂ ಒಳಗಾಗಿದ್ದ ಖಲೀದಾ

ರಾಜಕೀಯ ಜೀವನದಲ್ಲಿ ವಿವಾದಗಳ ಸುಳಿಗೂ ಸಿಲುಕಿದ್ದ ಖಲೀದಾ, ಅಧಿಕಾರ ಕಳೆದುಕೊಂಡ ನಂತರ ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲು ಶಿಕ್ಷೆ ಮತ್ತು ಗೃಹಬಂಧನಕ್ಕೂ ಒಳಗಾಗಿದ್ದರು. 17 ವರ್ಷಗಳ ಕಾಲ ಜೈಲು ಶಿಕ್ಷೆಗೆ ಒಳಗಾಗಿದ್ದರು. ಆರೋಗ್ಯ ಸಮಸ್ಯೆ, ಸೆರೆವಾಸಗಳ ನಡುವೆ ಖಲೀದಾ ರಾಜಕೀಯ ಪ್ರಭಾವ ಕಡಿಮೆಯಾಗಿತ್ತು. 2020ರಲ್ಲಿ ಅನಾರೋಗ್ಯ ಕಾರಣದಿಂದ ಜೈಲಿನಿಂದ ಬಿಡುಗಡೆಯಾಗಿದ್ದರು.

ಹದಗೆಟ್ಟಿದ್ದ ಹಸೀನಾ-ಖಲೀದಾ ಸಂಬಂಧ

2004ರಲ್ಲಿ ಢಾಕಾದಲ್ಲಿ ನಡೆದ ಗ್ರೆನೇಡ್‌ ದಾಳಿಗೆ ಖಲೀದಾ ಜಿಯಾ ಸರ್ಕಾರ ಕಾರಣ ಎಂದು ಪದಚ್ಯುತ ಪ್ರಧಾನಿ ಶೇಖ್ ಹಸೀನಾ ದೂರಿದ್ದರು. ಈ ದಾಳಿಯಲ್ಲಿ ಅವಾಮಿ ಲೀಗ್‌ ಪಕ್ಷದ 24 ಸದಸ್ಯರು ಮೃತಪಟ್ಟಿದ್ದರು, ನೂರಾರು ಜನ ಗಾಯಗೊಂಡಿದ್ದರು. ಹಸೀನಾ ಕೂಡ ದಾಳಿಯಲ್ಲಿ ಕೂದಲೆಳೆ ಅಂತರದಲ್ಲಿ ಪಾರಾಗಿದ್ದರು. 'ತನ್ನ ಹತ್ಯೆ ಪ್ರಯತ್ನ' ಎಂದು ಬಣ್ಣಿಸಿದ್ದ ಹಸೀನಾ, 2008ರ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದು ಪ್ರಧಾನಿ ಹುದ್ದೆಗೇರಿದ್ದರು.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries