ಕಾಸರಗೋಡು: ಮುಳಿಯಾರು ಪಂಚಾಯತಿ ಇರಿಯಣ್ಣಿಯ ಕುಣಿಯೇರಿಯಲ್ಲಿ ಮತ್ತೆ ಚಿರತೆ ಕಾಣಿಸಿಕೊಂಡಿದ್ದು, ಶನಿವಾರ ರಾತ್ರಿ ಎಂಟರ ವೇಳೆಗೆ ಕುಣಿಯೇರಿಯ ವೆಳ್ಳಾಟ್ ನಿವಾಸಿ ನಾರಾಯಣನ್ ಎಂಬವರ ಮನೆಯಂಗಳದಿಂದ ಅವರ ಸಾಕುನಾಯಿಯನ್ನು ಚಿರತೆ ಹೊತ್ತೊಯ್ಯುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ನಾಲ್ಕು ತಿಂಗಳು ಪ್ರಾಯದ, ಮನೆಯ ಸಾಕು ನಾಯಿ ನಾಪತ್ತೆಯಾಗಿದ್ದು, ಮನೆಯವರು ಹುಡುಕಾಡಿದರೂ ಪ್ರಯೋಜನವಾಗಿರಲಿಲ್ಲ. ನಂತರ ಸಿಸಿಟಿವಿ ತಪಾಸಣೆ ನಡೆಸಿದಾಗ, ನಾಯಿಯನ್ನು ಚಿರತೆ ಕಚ್ಚಿ ಹೊತ್ತೊಯ್ಯವ ದೃಶ್ಯ ಲಭ್ಯವಾಗಿದೆ.
ಈ ಪ್ರದೇಶದಲ್ಲಿ ತಿಂಗಳುಗಳ ಹಿಂದೆ ಚಿರತೆ ಸಂಚಾರ ಹೆಚ್ಚಾಗಿದ್ದು, ಇತ್ತೀಚೆಗೆ ಕೊಳತ್ತೂರಿನಿಂದ ಎರಡು ಚಿರತೆಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬೋನಿನ ಮೂಲಕ ಸೆರೆ ಹಿಡಿದಿದ್ದರು. ಕಾಡಿಗೆ ಹೊಂದಿಕೊಂಡಿರುವ ಜನವಾಸ ಪ್ರದೇಶ ಇದಾಗಿದ್ದು, ಚಿರತೆ ಸಂಚಾರದಿಂದ ಇಲ್ಲಿನ ಜನತೆ ಆತಂಕಕ್ಕೀಡಾಗಿದ್ದಾರೆ. ಈಪ್ರದೇಶಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಹುಡುಕಾಟ ನಡೆಸಿದ್ದಾರೆ.

