ಕಾಸರಗೋಡು: ಕೊಚ್ಚಿ ನೆಡುಂಬಾಶ್ಯೇರಿ ವಿಮಾನ ನಿಲ್ದಾಣದಲ್ಲಿ ದುಬೈಯಿಂದ ಬಂದಿಳಿದ ವ್ಯಕ್ತಿಯನ್ನು ಆರು ಮಂದಿಯ ತಂಡ ಕಾರಿನಲ್ಲಿ ಅಪಹರಿಸಿ, ಲಗ್ಗೇಜ್ ದೋಚಿ ಜೀವ ಬೆದರಿಕೆಯೊಡ್ಡಿ ಹಾದಿಮಧ್ಯೆ ಇಳಿಸಿ ಪರಾರಿಯಾದ ಘಟನೆ ನಡೆದಿದೆ. ಕಾಸರಗೋಡು ಕಿಳಕ್ಕೇಕರ ನಿವಾಸಿ ಮಹಮ್ಮದ್ ಶಾಪಿ(40)ದರೋಡೆಗೀಡಾದ ವ್ಯಕ್ತಿ.
ದುಬೈಯ ಅಜ್ಮಾನ್‍ನಲ್ಲಿ ಕ್ಯಾಂಟೀನ್ ಉದ್ಯೋಗಿಯಾಗಿರುವ ಮಹಮ್ಮದ್ ಶಾಫಿ ಶುಕ್ರವಾರ ಬೆಳಗಿನ ಜಾವ 12.30ಕ್ಕೆ ಕೊಚ್ಚಿ ಅಂತಾರಾಷ್ಟ್ರೀಯ ವಿಮಾಣ ನಿಲ್ದಾಣಕ್ಕೆಬಂದಿಳಿದಿದ್ದು, ಟ್ಯಾಕ್ಸಿ ಕೌಂಟರ್‍ಗೆ ತೆರಳುವ ಮಧ್ಯೆ ಹಿಂದಿನಿಂದ ಆಗಮಿಸಿದ ಮೂರು ಮಂದಿಯ ತಂಡ ಬಂದೂಕು ತೋರಿಸಿ ಕಾರಿನಲ್ಲಿ ಅಪಹರಿಸಿದೆ. ಕಾರಿನಲ್ಲಿ ಇನ್ನೂ ಮೂರು ಮಂದಿಯಿದ್ದರು. ಅವರು ಚಿನ್ನ ಎಲ್ಲಿ ಎಂದು ಪ್ರಶ್ನಿಸಿ ಹಲ್ಲೆ ನಡೆಸಿದ್ದು, ನಂತರ ಕೆಲವೊಂದು ಸಾಮಗ್ರಿ ಹೊಂದಿದ್ದ ಪೆಟ್ಟಿಗೆ, ಹ್ಯಾಂಡ್‍ಬ್ಯಾಗ್ ದೋಚಿ, ಆಲುವಾದ ಪರವೂರ್ ಎಂಬಲ್ಲಿ ಹಾದಿಮಧ್ಯೆ ಇಳಿಸಿ, ಕೃತ್ಯದ ಬಗ್ಗೆ ಮಾಹಿತಿ ನೀಡಿದಲ್ಲಿ ಕೊಲೆಗೈಯುವುದಾಗಿ ಬೆದರಿಕೆಯೊಡ್ಡಿ ಪರಾರಿಯಾಗಿದೆ. ಆಲುವಾ ಡಿವೈಎಸ್ಪಿ ರಾಜೇಶ್ ನೇತೃತ್ವದ ಪೊಲೀಸರ ತಂಡ ಆರೋಪಿಗಳ ಪತ್ತೆಗಾಗಿ ಹುಡುಕಾಟ ಆರಂಭಿಸಿದೆ.

