HEALTH TIPS

ನ್ಯಾಷನಲ್‌ ಹೆರಾಲ್ಡ್‌: ಬಿಜೆಪಿ -ಕಾಂಗ್ರೆಸ್‌ ವಾಗ್ದಾಳಿ

ನವದೆಹಲಿ: 'ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದಲ್ಲಿ ದೆಹಲಿಯ ವಿಚಾರಣಾ ನ್ಯಾಯಾಲಯ ಮಂಗಳವಾರ ಪ್ರಕಟಿಸಿದ ನಿರ್ಧಾರದ ಬಗ್ಗೆ ಕಾಂಗ್ರೆಸ್‌ - ಬಿಜೆಪಿ ನಡುವೆ ವಾಕ್ಸಮರ ತೀವ್ರಗೊಂಡಿದೆ.

'ಕಾಂಗ್ರೆಸ್‌ ದೇಶದ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ' ಎಂದು ಬಿಜೆಪಿ ಆರೋಪಿಸಿದೆ.

'ಬಿಜೆಪಿಯ ಸೇಡಿನ ರಾಜಕಾರಣಕ್ಕೆ ಸೋಲಾಗಿದೆ. ಪ್ರಧಾನಿ ನರೇದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ ರಾಜೀನಾಮೆ ನೀಡಬೇಕು' ಎಂದು ಕಾಂಗ್ರೆಸ್‌ ಮುಖಂಡರು ಒತ್ತಾಯಿಸಿದ್ದಾರೆ.

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ, 'ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದ ವಿಚಾರಣೆ ದೆಹಲಿ ಹೈಕೋರ್ಟ್‌ನಲ್ಲಿ ನಡೆಯುತ್ತಿದೆ. ವಿಚಾರಣಾ ನ್ಯಾಯಾಲಯವು ತಾಂತ್ರಿಕ ಕಾರಣಗಳಿಂದ ಜಾರಿ ನಿರ್ದೇಶನಾಲಯ ಸಲ್ಲಿಸಿದ್ದ ಆರೋಪ ಪಟ್ಟಿಯನ್ನು ಪರಿಗಣಿಸುವುದಿಲ್ಲ ಎಂದು ಹೇಳಿದೆಯಷ್ಟೇ. ಆದರೆ, ಕಾಂಗ್ರೆಸ್‌ ಈ ಪ್ರಕರಣದಲ್ಲಿ ಜನರ ದಿಕ್ಕು ತಪ್ಪಿಸುತ್ತಿದೆ. ಗಾಂಧಿ ಕುಟುಂಬವು ಮೋಸ, ವಂಚನೆಯಿಂದಲೇ ಅಭಿವೃದ್ಧಿ ಕಂಡಿದೆ' ಎಂದು ದೂರಿದರು.

'ತಾಂತ್ರಿಕ ಕಾರಣಕ್ಕೆ ಆರೋಪ ಪಟ್ಟಿ ಪರಿಗಣಿಸುತ್ತಿಲ್ಲ ಎಂದು ಹೇಳಿದ ಕೋರ್ಟ್‌, ಇ.ಡಿಗೆ ವಿಚಾರಣೆ ಮುಂದುವರಿಸುವಂತೆ ಸೂಚಿಸಿದೆಯೇ ಹೊರತು, ನ್ಯಾಷನಲ್‌ ಹೆರಾಲ್ಡ್‌ ಪ್ರಕರಣವನ್ನು ವಜಾಗೊಳಿಸಿಲ್ಲ. ವಿಚಾರಣೆ ಇನ್ನೂ ಮುಂದುವರಿಯಲಿದೆ. ಈ ಪ್ರಕರಣದಲ್ಲಿ ಈಗಲೂ ಕಾಂಗ್ರೆಸ್‌ ಮುಖಂಡರಾದ ಸೋನಿಯಾ ಗಾಂಧಿ ಮೊದಲನೆಯ ಹಾಗೂ ರಾಹುಲ್‌ ಗಾಂಧಿ ಎರಡನೆಯ ಆರೋಪಿಯಾಗಿಯೇ ಇದ್ದಾರೆ' ಎಂದು ಭಾಟಿಯಾ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, 'ಕಾಂಗ್ರೆಸ್‌ ನಾಯಕರಾದ ಸೋನಿಯಾ ಮತ್ತು ರಾಹುಲ್‌ ಗಾಂಧಿ ಸೇರಿದಂತೆ ಏಳು ಜನರ ವಿರುದ್ಧ ಇ.ಡಿ ಸಲ್ಲಿಸಿದ್ದ ಆರೋಪ ಪಟ್ಟಿಯನ್ನು ದೆಹಲಿ ಕೋರ್ಟ್‌ ತಿರಸ್ಕರಿಸಿದ್ದು, ಬಿಜೆಪಿಯ ಸೇಡಿನ ರಾಜಕಾರಣ ಬಹಿರಂಗಗೊಂಡಿದೆ. ವಿರೋಧ ಪಕ್ಷಗಳ ಮುಖಂಡರನ್ನು ಹತ್ತಿಕ್ಕಲು ಇ.ಡಿ ಸೇರಿದಂತೆ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಕೇಂದ್ರ ಸರ್ಕಾರ ವಿರುದ್ಧ ನಮ್ಮ ಶಕ್ತಿ ಪ್ರದರ್ಶಿಸುತ್ತೇವೆ' ಎಂದು ಎಚ್ಚರಿಕೆ ನೀಡಿದರು.

ಸಂಸತ್‌ ಆವರಣದಲ್ಲಿ ಕಾಂಗ್ರೆಸ್‌ ಪ್ರತಿಭಟನೆ

'ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದಲ್ಲಿ ಕೇಂದ್ರ ಬಿಜೆಪಿ ಸರ್ಕಾರವು ಜಾರಿ ನಿರ್ದೇಶನಾಲಯವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ' ಎಂದು ಆರೋಪಿಸಿ ಕಾಂಗ್ರೆಸ್‌ ಸಂಸದರು ಸಂಸತ್‌ ಆವರಣದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು. ಇ.ಡಿ ಸಲ್ಲಿಸಿದ್ದ ಆರೋಪ ಪಟ್ಟಿಯನ್ನು ತಿರಸ್ಕರಿಸುವ ಮೂಲಕ ಕೋರ್ಟ್‌ ಸತ್ಯವನ್ನು ಎತ್ತಿ ಹಿಡಿದಿದೆ ಎಂದ ಕಾಂಗ್ರೆಸ್‌ ಮುಖಂಡರು 'ಸತ್ಯಮೇವ ಜಯತೆ' ಎಂಬ ಬರಹದ ಬ್ಯಾನರ್‌ ಪ್ರದರ್ಶಿಸಿ ಮೋದಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ ವೇಣುಗೋಪಾಲ್‌ ಮುಕುಲ್‌ ವಾಸ್ನಿಕ್‌ ಸಂಸದರಾದ ಶಶಿ ತರೂರ್‌ ತಾರಿಖ್ ಅನ್ವರ್‌ ಕುಮಾರಿ ಸೆಲ್ಜಾ ಕೆ. ಸುರೇಶ್‌ ಮಾಣಿಕ್ಯಂ ಟ್ಯಾಗೋರ್‌ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

- ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಅಧ್ಯಕ್ಷ ಕೇಂದ್ರ ಸರ್ಕಾರ ಕಾಂಗ್ರೆಸ್‌ ಮುಖಂಡರ ವಿರುದ್ಧ ಸೇಡಿನ ರಾಜಕಾರಣ ಮಾಡುತ್ತಿದೆ. ನಾವು ಸದನದ ಒಳಗೂ- ಹೊರಗೂ ಹೋರಾಟ ನಡೆಸುತ್ತೇವೆ ಮತ್ತು ಅವರಿಗೆ ತಕ್ಕ ಪಾಠ ಕಲಿಸುತ್ತೇವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries