'ಕಾಯ್ದೆ ರದ್ದತಿ ಹಾಗೂ ತಿದ್ದುಪಡಿ ವಿಧೇಯಕ 2025' ಅನ್ನು ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ರಾಜ್ಯಸಭೆಯಲ್ಲಿ ಮಂಡಿಸಿದ್ದು, ಅದನ್ನು ಸದನವು ಧ್ವನಿಮತದಿಂದ ಆಂಗೀಕರಿಸಿದೆ.
ಇದಕ್ಕೂ ಮುನ್ನ ಈ ಮಸೂದೆಗೆ ಲೋಕಸಭೆ ಅನುಮೋದನೆ ನೀಡಿತ್ತು.
ರಾಜ್ಯಸಭೆಯಲ್ಲಿ ಮಸೂದೆ ಕುರಿತ ಚರ್ಚೆಗೆ ಉತ್ತರಿಸಿದ ಮೇಘವಾಲ್ ಅವರು, ಉದ್ಯಮ ನಡೆಸುವುದನ್ನು ಸುಗಮಗೊಳಿಸುವಂತೆಯೇ, ಜನಸಾಮಾನ್ಯರ ಬದುಕನ್ನು ಸಹ ಸುಗಮಗೊಳಿಸಲು ನಾವು ಆದ್ಯತೆ ನೀಡುತ್ತಿದ್ದೇವೆ ಎಂದರು.
ಈ ಮಸೂದೆಯಡಿ ತಿದ್ದುಪಡಿಗೊಳಿಸಲಿರುವ ಮಸೂದೆಗಳಲ್ಲಿ ಒಂದಾದ 1925ರ ಹಿಂದೂ ಉತ್ತರಾಧಿಕಾರ ಕಾಯ್ದೆಯಡಿ, ಹಿಂದೂ, ಬೌದ್ಧ, ಸಿಖ್ಖ್, ಜೈನ ಅಥವಾ ಫಾರಸಿ ಧರ್ಮೀಯನು ಉಯಿಲು ಮಾಡಿದ್ದಲ್ಲಿ, ಅದು ಮದ್ರಾಸ್, ಬಾಂಬೆ ಹಾಗೂ ಕೋಲ್ಕತಾ ಪ್ರಾಂತಗಳಲ್ಲಿ ಅದರ ಸಿಂಧುತ್ವವನ್ನು ಪರಿಶೀಲನೆಗೊಳಿಸಬೇಕಾಗುತ್ತಿತ್ತು. ಆದರೆ ಈ ನಿಬಂಧನೆಯು ಮುಸ್ಲಿಮರಿಗೆ ಅನ್ವಯವಾಗುತ್ತಿರಲಿಲ್ಲ ಎಂದು ಮೇಘವಾಲ್ ಹೇಳಿದರು. ಈಗ ನರೇಂದ್ರ ಮೋದಿ ಸರಕಾರವಿದ್ದು, ಸಂವಿಧಾನ ಪ್ರಕಾರವಾಗಿ ದೇಶವು ಕಾರ್ಯನಿರ್ವಹಿಸುತ್ತದೆ ಎಂದರು. ಧರ್ಮ, ಜಾತಿ ಹಾಗೂ ಲಿಂಗದ ಆಧಾರದಲ್ಲಿ ಯಾವುದೇ ತಾರತಮ್ಯ ಎಸಗುವುದನ್ನು ಸಂವಿಧಾನವು ತಡೆಯುತ್ತಿದೆ ಎಂದರು.
ಭಾರತೀಯ ಟ್ರಾಮ್‌ವೇಸ್ ಕಾಯ್ದೆ 1886, ಲೆವಿ ಸಕ್ಕರೆ ದರ ಸಮಾನೀಕರಣ ನಿಧಿ ಕಾಯ್ದೆ 1976 ಹಾಗೂ ಭಾರತ್ ಪೆಟ್ರೋಲ್ ಕಾರ್ಪೊರೇಶನ್ ಲಿಮಿಟೆಡ್ ( ಉದ್ಯೋಗಿಗಳ ಸೇವಾ ಶರತ್ತುಗಳಲ್ಲಿ ನಿರ್ಧಾರ) ಕಾಯ್ದೆ, 1888 ಸೇರಿದಂತೆ 71 ಕಾಯ್ದೆಗಳನ್ನು ರದ್ದುಪಡಿಸಲು ಈ ಮಸೂದೆಯು ಬಯಸಿದೆ.
ಸಾಮಾನ್ಯ ಪರಿಚ್ಚೇದಗಳ ಕಾಯ್ದೆ 1897, ನಾಗರಿಕ ಪ್ರಕ್ರಿಯಾ ಸಂಹಿತೆ 1908, ರಿಜಿಸ್ಟರ್ಡ್ ಪೋಸ್ಟ್ ವ್ಯವಸ್ಥೆಯಲ್ಲಿನ ಪರಿಭಾಷೆಗಳ ನವೀಕರಣ ಹಾಗೂ 1925ರ ಭಾರತೀಯ ಉತ್ತರಾಧಿಕಾರ ಕಾಯ್ದೆ ಇವು ಈ ಮಸೂದೆಯಡಿ ತಿದ್ದುಪಡಿಗೊಳ್ಳಲಿವೆ. 2005ರ ವಿಪತ್ತು ನಿರ್ವಹಣಾ ಕಾಯ್ದೆಯು ಈ ವಿಧೇಯಕದಡಿ ತಿದ್ದುಪಡಿಗೊಳ್ಳಲಿದೆ.

