ಕೇಂದ್ರ ಸರ್ಕಾರ MGNREGA ಯೋಜನೆಯನ್ನು 'ವಿಕ್ಷಿತ್ ಭಾರತ್-ಉದ್ಯೋಗ ಮತ್ತು ಜೀವನೋಪಾಯ ಗ್ಯಾರಂಟಿ ಮಿಷನ್' ಎಂದು ಮರುನಾಮಕರಣ ಮಾಡಿದ್ದು, ಇದನ್ನು VB-G RAM G ಎಂದು ಸಂಕ್ಷಿಪ್ತವಾಗಿ ಕರೆಯಲಾಗುತ್ತಿದೆ. ಯೋಜನೆಯ ಹೆಸರಿನಿಂದ ಮಹಾತ್ಮ ಗಾಂಧಿಯವರ ಹೆಸರನ್ನು ತೆಗೆದುಹಾಕಿರುವುದಕ್ಕೆ, ಕಾಂಗ್ರೆಸ್ ಸೇರಿದಂತೆ ಹಲವು ವಿರೋಧ ಪಕ್ಷಗಳು 'ರಾಷ್ಟ್ರಪಿತಗೆ ಮಾಡಿದ ಅವಮಾನ' ಎಂದು ಆರೋಪಿಸಿವೆ.
ಈ ಕುರಿತಂತೆ ಸಂಸತ್ತಿನ ಹೊರಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮಂಡಿ ಸಂಸದೆ ಕಂಗನಾ ರಾಣಾವತ್, ಮಹಾತ್ಮ ಗಾಂಧಿಯವರ ರಾಮಭಕ್ತಿಯನ್ನು ಉಲ್ಲೇಖಿಸಿ ಸರ್ಕಾರದ ನಿರ್ಧಾರವನ್ನು ಸಮರ್ಥಿಸಲು ಯತ್ನಿಸಿದರು.
"ಇದಕ್ಕೆ 'ರಾಮ್ ಜಿ' ಹೆಸರಿಟ್ಟರೆ ಗಾಂಧೀಜಿಗೆ ಹೇಗೆ ಅವಮಾನ ಮಾಡಿದಂತಾಗುತ್ತದೆ?" ಎಂದು ಪ್ರಶ್ನಿಸಿದ ಅವರು, "ದೇಶದಲ್ಲಿ ಏಕತೆಯನ್ನು ಹೆಚ್ಚಿಸಲು ಮಹಾತ್ಮ ಗಾಂಧಿ 'ರಘುಪತಿ ರಾಘವ್ ರಾಜಾ ರಾಮ್' ಗೀತೆಯನ್ನು ರಾಷ್ಟ್ರಗೀತೆಯನ್ನಾಗಿ ಮಾಡಿದ್ದರು. ಆದ್ದರಿಂದ ರಾಮನ ಹೆಸರಿನಿಂದ ಯೋಜನೆಯನ್ನು ಕರೆಯುವುದು ಗಾಂಧಿಯ ಕನಸನ್ನು ಈಡೇರಿಸುವುದಂತಾಗುತ್ತದೆಯೇ ಹೊರತು ಅವಮಾನ ಮಾಡಿದ ಹಾಗೆ ಆಗುವುದಿಲ್ಲ", ಎಂದು ಹೇಳಿದರು.
ರಾಷ್ಟ್ರಗೀತೆಗೆ ಸಂಬಂಧಿಸಿದಂತೆ ಕಂಗನಾ ರಾಣಾವತ್ ನೀಡಿದ ಹೇಳಿಕೆಯನ್ನು ವಿರೋಧ ಪಕ್ಷಗಳು ತಕ್ಷಣವೇ ಪ್ರತಿಕ್ರಿಯೆ ನೀಡಿವೆ. ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರಿನೇತ್ ಅವರು ಈ ಹೇಳಿಕೆಯ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು, "ಇಂದು ಹೊಸ ರಾಷ್ಟ್ರಗೀತೆಯನ್ನು ಕಲಿತೆವು! ಬಿಜೆಪಿ ಇಂತಹ 'ರತ್ನಗಳಿಂದ' ತುಂಬಿದೆ" ಎಂದು ವ್ಯಂಗ್ಯವಾಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲೂ ಮಂಡಿ ಸಂಸದೆ ಕಂಗನ ರಾಣಾವತ್ ಹೇಳಿಕೆಗೆ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದೆ. "2014 ನಂತರವೇ ಈ ಗೀತೆಯನ್ನು ರಾಷ್ಟ್ರಗೀತೆಯನ್ನಾಗಿ ಮಾಡಿದ್ದಾರೆ ಎಂದು ಹೇಳಲು ಮಾತ್ರ ಮರೆತಿದ್ದಾರೆ" ಎಂದು ಒಬ್ಬ ಬಳಕೆದಾರ ಟೀಕಿಸಿದ್ದರೆ, ಮತ್ತೊಬ್ಬರು, "ವಾಟ್ಸಾಪ್ ಸಂದೇಶಗಳನ್ನು ಹಂಚಿಕೊಳ್ಳುವ ಮೊದಲು ತಮ್ಮ ತಲೆ ಖರ್ಚು ಮಾಡುವುದಿಲ್ಲವೇ" ಎಂದು ಕಿಡಿಕಾರಿದ್ದಾರೆ.
ಇದಕ್ಕೆ ಪೂರಕವಾಗಿ ಹಿರಿಯ ಕಾಂಗ್ರೆಸ್ ನಾಯಕರು ಮರುನಾಮಕರಣದ ಸೈದ್ಧಾಂತಿಕ ಅಂಶಗಳನ್ನೂ ಪ್ರಶ್ನಿಸಿದ್ದಾರೆ. ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ,
"ಮಹಾತ್ಮ ಗಾಂಧಿಯವರು ರಾಮನ ಭಕ್ತರಾಗಿದ್ದರು; ಅವರ ಕೊನೆಯ ಕ್ಷಣಗಳಲ್ಲೂ 'ಹೇ ರಾಮ್' ಎಂದಿದ್ದರು. ಅದೇ ರಾಮನ ಹೆಸರನ್ನು ಮುಂದಿಟ್ಟು ಗಾಂಧಿಯವರ ಹೆಸರನ್ನು ಅಳಿಸುವ ಪ್ರಯತ್ನ ಕೇಂದ್ರ ಸರ್ಕಾರದಿಂದ ನಡೆಯುತ್ತಿದೆ. ಇದು ಅತ್ಯಂತ ಖಂಡನೀಯ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

