ಕಾಸರಗೋಡು: ಜಿಲ್ಲೆಯ 38 ಗ್ರಾಮ ಪಂಚಾಯಿತಿಗಳು, ಮೂರು ನಗರಸಭೆ, ಆರು ಬ್ಲಾಕ್ ಪಂಚಾಯಿತಿಗಳು ಮತ್ತು ಒಂದು ಜಿಲ್ಲಾ ಪಂಚಾಯಿತಿ ಸೇರಿದಂತೆ ಒಟ್ಟು 48 ಸ್ಥಳೀಯಾಡಳಿತ ಸಂಸ್ಥೆಗಳಿಗೆ ನಡೆದಿರುವ ಮತದಾನದ ಮತ ಎಣಿಕೆ ಕಾರ್ಯ ಡಿ. 13ರಂದು ಜಿಲ್ಲೆಯ ವಿವಿಧ ಕೇಂದ್ರಗಳಲ್ಲಿ ನಡೆಯಲಿದೆ. ಬೆಳಗ್ಗೆ 8ಕ್ಕೆ ಮತ ಎಣಿಕೆ ಆರಂಭಗೊಳ್ಳಲಿದ್ದು, ಮಧ್ಯಾಹ್ನದ ವೇಳೆಗೆ ಫಲಿತಾಂಶ ಹೊರಬೀಳುವ ಸಾಧ್ಯತೆಯಿದೆ.
ಮಂಜೇಶ್ವರ ಬ್ಲಾಕ್ ಪಂಚಾಯಿತಿ ಮತ್ತು ಅದರ ವ್ಯಾಪ್ತಿಯಲ್ಲಿರುವ ಗ್ರಾಮ ಪಂಚಾಯಿತಿಗಳ ಮತಎಣಿಕೆ ಕಾರ್ಯ ಕುಂಬಳೆ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ, ಕಾಸರಗೋಡು ಜಿಲ್ಲಾ ಪಂಚಾಯಿತಿ, ಕಾಸರಗೋಡು ಬ್ಲಾಕ್ ಪಂಚಾಯಿತಿ, ಇದರ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳು ಮತ್ತು ಕಾಸರಗೋಡು ನಗರಸಭೆಯ ಎಣಿಕೆ ಕಾರ್ಯ ಕಾಸರಗೋಡು ಸರ್ಕಾರಿ ಕಾಲೇಜಿನಲ್ಲಿ ಮತ್ತು ಕಾಞಂಗಾಡು ಬ್ಲಾಕ್ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳ ಎಣಿಕೆ ಕಾರ್ಯ ದುರ್ಗಾ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯಲಿದೆ.
ಪರಪ್ಪ ಬ್ಲಾಕ್ ವ್ಯಾಪ್ತಿಯ ಪಂಚಾಯಿತಿಗಳು, ಕಾಞಂಗಾಡ್ ನಗರಸಭೆಯ ಎಣಿಕೆ ಕಾರ್ಯ ಹೊಸದುರ್ಗ ಹೈಯರ್ ಸೆಕೆಂಡರಿ ಶಾಲೆ, ನೀಲೇಶ್ವರ ನಗರಸಭೆಯ ಎಣಿಕೆ ಕಾರ್ಯ ರಾಜಾಸ್ ಹೈಯರ್ ಸೆಕೆಂಡರಿ ಶಾಲೆ, ಕಾರಡ್ಕ ಬ್ಲಾಕ್ ಪಂಚಾಯಿತಿ ಹಾಗೂ ಇದರ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳ ಎಣಿಕೆ ಕಾರ್ಯ ಬೋವಿಕ್ಕಾನದ ಬಿಎಆರ್‍ಎಚ್‍ಎಸ್ಸೆಸ್‍ನಲ್ಲಿ, ನೀಲೇಶ್ವರ ಬ್ಲಾಕ್ ವಾಪ್ತಿಯ ಪಂಚಾಯಿತಿಗಳ ಮತಗಳ ಎಣಿಕೆ ಕಾರ್ಯ ಪಡನ್ನಕ್ಕಾಡ್ ನೆಹರೂ ಕಾಲೇಜಿನಲ್ಲಿ ನಡೆಯಲಿದೆ.
ಜಿಲ್ಲಾ ಪಂಚಾಯಿತಿಯ ಅಂಚೆ ಮತಗಳ ಎಣಿಕೆ ಕಾರ್ಯ ಆಯಾ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯಲಿದೆ. ಮತದಾನ ನಡೆದಿರುವ ಮತಯಂತ್ರಗಳನ್ನು ಆಯಾ ಕೇಂದ್ರಗಳ ಸ್ಟ್ರಾಂಗ್‍ರೂಮ್‍ಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್‍ನಲ್ಲಿ ಇರಿಸಲಾಗಿದೆ.
ಚಿತ್ರ: ಮತಯಂತ್ರಗಳನ್ನಿರಿಸಿರುವ ಕಾಸರಗೊಡು ಸರ್ಕಾರಿ ಕಾಲೇಜಿನ ಸ್ಟ್ರಾಂಗ್ ರೂಮ್‍ಗೆ ಬಿಗಿ ಪೊಲೀಸ್ ಕಾವಲು ಏರ್ಪಡಿಸಲಾಗಿದೆ.


