HEALTH TIPS

ಅಳುವ ಮಗುವಿಗೆ ವಿಂಡೋ ಸೀಟು ನಿರಾಕರಿಸಿದ ಮಹಿಳೆ: ವಿಮಾನಯಾನ ಸಂಸ್ಥೆಯ ವಿರುದ್ಧವೇ ದಾವೆ

ಬ್ರೆಸಿಲಿಯ: ಇತ್ತೀಚೆಗೆ ಮಾನವೀಯತೆ ಎನ್ನುವುದು ಮರೆಯಾಗಿದೆ. ಎಷ್ಟೊ ಬಾರಿ ಸಾರ್ವಜನಿಕ ಸಾರಿಗೆಯಲ್ಲಿ ಹಿರಿಯರಿಗೆ, ಗರ್ಭಿಣಿಯರಿಗೆ ಅಥವಾ ಅಂಗವಿಕಲರಿಗೆ ತಮ್ಮ ಆಸನವನ್ನು ಬಿಟ್ಟುಕೊಡಲು ನಿರಾಕರಿಸಿದ ಘಟನೆ ನಡೆದಿದೆ. ಸದ್ಯ‌ ಅಳುವ ಪುಟ್ಟ ಮಗುವಿಗೆ ಫ್ಲೈಟ್ ವಿಂಡೋ ಸೀಟನ್ನು ಬಿಟ್ಟುಕೊಡಲು ಮಹಿಳೆ ನಿರಾಕರಿಸಿದ್ದು ಈ ನಡೆ ಈಗ ಕೋರ್ಟ್ ಮೆಟ್ಟಿಲೇರಿದೆ.

ಅಳುವ ಪುಟ್ಟ ಮಗುವಿಗೆ ತನ್ನ ಸೀಟನ್ನು ಬಿಟ್ಟುಕೊಡಲು ನಿರಾಕರಿಸಿದ್ದಕ್ಕಾಗಿ ನೆಟ್ಟಿಗರು ಟೀಕಿಸಿದ್ದು, ರೆಜಿಲಿಯನ್ ಮಹಿಳೆ ವಿಮಾನಯಾನ ಸಂಸ್ಥೆಯ ವಿರುದ್ಧ ಮೊಕದ್ದಮೆ ಹೂಡಿದ್ದಾರೆ. ಸದ್ಯ ಈ ಸುದ್ದಿ ಭಾರಿ ವೈರಲ್ ಆಗಿದೆ.

ಜೆನಿಫರ್ ಕ್ಯಾಸ್ಟ್ರೋ ಎಂಬ ಮಹಿಳೆ‌ ಬೆಲೋ ಹಾರಿಜಾಂಟೆಗೆ ಜಿಒಎಲ್ ಏರ್‌ಲೈನ್ಸ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಅವರು ತಮ್ಮ ಪ್ರಯಾಣಕ್ಕಾಗಿ ಹಣ ಪಾವತಿಸಿ ವಿಂಡೋ ಸೀಟನ್ನು ಬುಕ್ ಮಾಡಿದ್ದರು. ಆದರೆ ಅವರು ವಿಮಾನ ಹತ್ತಿದಾಗ, ಅವರ ಸೀಟಿನಲ್ಲಿ ಒಂದು ಮಗು ಕುಳಿತಿದ್ದು ವಿಂಡೋ ಸೀಟ್‌ಗಾಗಿ ಹಠ ಹಿಡಿದಿದೆ. ಮಗುವಿನ ಪೋಷಕರು ಮತ್ತು ಸಹ-ಪ್ರಯಾಣಿಕರು ಸೀಟು ಬದಲಾಯಿಸಿಕೊಳ್ಳುವಂತೆ ವಿನಂತಿಸಿದರೂ, ಜೆನಿಫರ್ ಅದಕ್ಕೆ ಒಪ್ಪಲಿಲ್ಲ. ಇದು ತಾನು ಹಣ ನೀಡಿ ಪಡೆದ ಸೀಟಾಗಿದೆ ಎಂದು ಅವರು ವಾದಿಸಿದ್ದಾರೆ.

ಜೆನಿಫರ್ ಸೀಟು ಕೊಡಲು ನಿರಾಕರಿಸಿದಾಗ ಮಗು ಪ್ರಯಾಣದಾದ್ಯಂತ ಅಳುತ್ತಲೇ ಇತ್ತು. ಈ ಸಂದರ್ಭದಲ್ಲಿ ಮಗುವಿನ ತಾಯಿ ಮಹಿಳೆಯ ನಡೆಯ ಬಗ್ಗೆ ವಿಡಿಯೊ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೊ ಕ್ಷಣಾರ್ಧದಲ್ಲಿ ವೈರಲ್ ಆಗಿ, ಜೆನಿಫರ್ ಅವರ ವಿರುದ್ಧ ಭಾರೀ ಆಕ್ರೋಶ ವ್ಯಕ್ತಪಡಿಸಿ ಕೆಲವರು ಅವರಿಗೆ ಮಾನವೀಯತೆ ಅರಿಯದ ಮಹಿಳೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ಘಟನೆಯಿಂದ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿರುವುದಾಗಿ ಅವರು ದಾವೆ ಹೂಡಿದ್ದಾರೆ. ಸೋಶಿಯಲ್ ಮೀಡಿಯಾ ಟ್ರೋಲ್‌ಗಳಿಂದಾಗಿ ತನ್ನ ಮಾನಸಿಕ ಆರೋಗ್ಯ ಕೆಟ್ಟಿದೆ ಮತ್ತು ವೃತ್ತಿ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಪ್ರಯಾಣಿಕರು ತನಗೆ ತೊಂದರೆ ನೀಡುತ್ತಿದ್ದಾಗ ವಿಮಾನದ ಸಿಬ್ಬಂದಿ ಯಾವುದೇ ನೆರವು ನೀಡಲಿಲ್ಲ ಎಂದು ಅವರು ದಾವೆ ಹೂಡಿದ್ದಾರೆ.

ಅನುಮತಿಯಿಲ್ಲದೆ ವಿಡಿಯೊ ಮಾಡಿದ್ದಾಕ್ಕಾಗಿ ಮಗುವಿನ ತಾಯಿಯ ವಿರುದ್ಧವೂ ಕೇಸ್ ದಾಖಲಿಸಿದ್ದಾರೆ. ಇತ್ತ ಮಗುವಿನ ತಾಯಿ ಅಲಿನ್ ರಿಜ್ಜೊ ತಮ್ಮ ಮೇಲಿನ ಆರೋಪಗಳನ್ನು ತಳ್ಳಿ ಹಾಕಿದ್ದಾರೆ. "ನಾನು ನೇರವಾಗಿ ಅವರ ಬಳಿ‌ ಸೀಟು ಕೇಳಿರಲಿಲ್ಲ, ಮಗನನ್ನು ಅಲ್ಲಿಂದ ಎಬ್ಬಿಸುವವರೆಗೆ ಕಾಯಿರಿ ಎಂದು ಕೇಳಿದ್ದೆ ಅಷ್ಟೆ. ಈ ವಿಡಿಯೊದ ಆನ್‌ಲೈನ್ ಪ್ರತಿಕ್ರಿಯೆಗೆ ನಾನು ಜವಾಬ್ದಾರಿ ಹೊರುವುದಿಲ್ಲʼʼ ಎಂದು ಸ್ಪಷ್ಟಪಡಿಸಿದ್ದಾರೆ.

ಸದ್ಯ ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ವಿವಿಧ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಬಳಕೆದಾರರೊಬ್ಬರು ಮಹಿಳೆ ಹಣ ನೀಡಿದ್ದರೂ ಮಾನವೀಯತೆ ದೃಷ್ಟಿಯಿಂದ ಸೀಟು ನೀಡಬಹುದಿತ್ತು ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು ಮಗು ಅಷ್ಟು ಅಳುತ್ತಿದ್ದರೂ ಮಹಿಳೆಗೆ ಕನಿಕಾರ ಬಂದಿಲ್ಲವೆ? ಎಂದು ಬರೆದುಕೊಂಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries