HEALTH TIPS

ಅಮಿತ್‌ ಶಾ 'ಅಪಾಯಕಾರಿ': ಕೇಂದ್ರ ಗೃಹ ಸಚಿವರ ವಿರುದ್ಧ ಮಮತಾ ಬ್ಯಾನರ್ಜಿ ವಾಗ್ದಾಳಿ

ಕೃಷ್ಣನಗರ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೇಂದ್ರ ಗೃಹ ಸಚಿವ ಅಮಿತ್‌ ಶಾ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದು, ಅವರು 'ಅಪಾಯಕಾರಿ' ಎಂದು ಕರೆದಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯಲ್ಲಿ ಯಾವನೇ ಒಬ್ಬ ಅರ್ಹ ಮತದಾರನ ಹೆಸರನ್ನು ಪಟ್ಟಿಯಿಂದ ಕೈಬಿಟ್ಟರೆ ಧರಣಿ ನಡೆಸುವುದಾಗಿ ಅವರು ಎಚ್ಚರಿಸಿದರು.

ನಾದಿಯಾ ಜಿಲ್ಲೆಯ ಕೃಷ್ಣನಗರದಲ್ಲಿ ಗುರುವಾರ ನಡೆದ ಸಾರ್ವಜನಿಕ ಸಭೆಯಲ್ಲಿ ಶಾ ವಿರುದ್ಧ ಕಿಡಿಕಾರಿದ ಮಮತಾ, 'ದೇಶದ ಗೃಹ ಸಚಿವರು ಅಪಾಯಕಾರಿ ವ್ಯಕ್ತಿ. ನೀವು ಅದನ್ನು ಅವರ ಕಣ್ಣುಗಳಲ್ಲಿ ನೋಡಲು ಸಾಧ್ಯ. ಅವರ ಒಂದು ಕಣ್ಣಿನಲ್ಲಿ ನಿಮಗೆ 'ದುರ್ಯೋಧನ'ನನ್ನು ಹಾಗೂ ಇನ್ನೊಂದರಲ್ಲಿ 'ದುಶ್ಯಾಸನ'ನನ್ನು ನೋಡಬಹುದು' ಎಂದರು.

ಎಸ್‌ಐಆರ್‌ಗೆ ಸಂಬಂಧಿಸಿದ ಅರ್ಜಿ ನಮೂನೆಯನ್ನು ತಾನು ಇಲ್ಲಿಯವರೆಗೆ ಭರ್ತಿ ಮಾಡಿಲ್ಲ ಎಂದ ಅವರು, 'ಗಲಭೆ ಎಬ್ಬಿಸುವಂತಹ ಪಕ್ಷದವರಿಗೆ ನನ್ನ ಪೌರತ್ವವನ್ನು ಸಾಬೀತುಪಡಿಸಬೇಕೇ?' ಎಂದು ಬಿಜೆಪಿಯನ್ನು ಪರೋಕ್ಷವಾಗಿ ಪ್ರಶ್ನಿಸಿದರು.

ಕೇಂದ್ರ ಸರ್ಕಾರವು ಬಂಗಾಳಿ ಭಾಷೆ ಮಾತನಾಡುವವರನ್ನು ಗುರಿಯಾಗಿಸಿಕೊಂಡಿದೆ ಎಂದು ಅವರು ಆರೋಪಿಸಿದರು. 'ಬಂಗಾಳಿ ಭಾಷಿಕರಿಗೆ ಬಾಂಗ್ಲಾದೇಶೀಯರು ಎಂಬ ಹಣೆಪಟ್ಟಿ ಕಟ್ಟಿ ಜೈಲಿಗೆ ಕಳುಹಿಸಲು ಕೇಂದ್ರ ಗೃಹ ಸಚಿವರು ಏನು ಬೇಕಾದರೂ ಮಾಡಬಹುದು. ಆದರೆ, ಪಶ್ಚಿಮ ಬಂಗಾಳದಿಂದ ಯಾರನ್ನೂ ಹೊರಹಾಕಲು ನಾವು ಬಿಡುವುದಿಲ್ಲ. ಯಾರನ್ನಾದರೂ ಬಲ ಪ್ರಯೋಗಿಸಿ ಹೊರ ಹಾಕಿದರೆ ಅವರನ್ನು ಹೇಗೆ ಮರಳಿ ಕರೆತರಬೇಕು ಎಂಬುದು ನಮಗೆ ಚೆನ್ನಾಗಿ ತಿಳಿದಿದೆ' ಎಂದರು.

ಚುನಾವಣಾ ಆಯೋಗವು ಎಸ್‌ಐಆರ್‌ ಪ್ರಕ್ರಿಯೆಯ ಮೇಲೆ ಪ್ರಭಾವ ಬೀರಲು ಬಿಜೆಪಿಯೊಂದಿಗೆ ನಂಟು ಹೊಂದಿರುವ ಕೆಲವು ವ್ಯಕ್ತಿಗಳನ್ನು ನಿಯೋಜಿಸುತ್ತಿದೆ. ಅವರು ಜಿಲ್ಲಾಧಿಕಾರಿಗಳ ಕಾರ್ಯವೈಖರಿ ಮೇಲೆ ನಿಗಾ ಇಡುತ್ತಿದ್ದಾರೆ ಎಂದು ಆರೋಪಿಸಿದರು.

'ಇದು ಉತ್ತರ ಪ್ರದೇಶ ಅಲ್ಲ'

ಭಗವದ್ಗೀತೆಯ ಸಾಮೂಹಿಕ ಪಠಣ ಕಾರ್ಯಕ್ರಮದ ತಾಣದಲ್ಲಿ ಇಬ್ಬರು ವ್ಯಾಪಾರಿಗಳ ಮೇಲಿನ ಹಲ್ಲೆ ಘಟನೆಯನ್ನು ಮಮತಾ ಖಂಡಿಸಿದ್ದು 'ರಾಜ್ಯದಲ್ಲಿ ಇಂತಹ ಬೆದರಿಕೆ ಕೃತ್ಯಗಳನ್ನು ಸಹಿಸೆವು' ಎಂದಿದ್ದಾರೆ.

'ವ್ಯಾಪಾರಿಗಳ ಮೇಲೆ ಹಲ್ಲೆ ನಡೆಸಿದ ಎಲ್ಲ ಅರೋಪಿಗಳನ್ನು ಬಂಧಿಸಲಾಗಿದೆ. ಇದು ಉತ್ತರ ಪ್ರದೇಶ ಅಲ್ಲ, ಪಶ್ಚಿಮ ಬಂಗಾಳ' ಎಂದು ಹೇಳಿದ್ದಾರೆ.

ಭಗವದ್ಗೀತೆ ಪಠಣ ಕಾರ್ಯಕ್ರಮ ಡಿಸೆಂಬರ್‌ 7ರಂದು ಬ್ರಿಗೇಡ್‌ ಪರೇಡ್‌ ಮೈದಾನದಲ್ಲಿ ನಡೆದಿತ್ತು. ಈ ತಾಣದಲ್ಲಿ ಮಾಂಸಾಹಾರಿ ಖಾದ್ಯ ಮಾರಾಟಕ್ಕೆ ಬಂದಿದ್ದ ಇಬ್ಬರು ವ್ಯಾಪಾರಿಗಳ ಮೇಲೆ ಗುಂಪೊಂದು ಹಲ್ಲೆ ನಡೆಸಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries