HEALTH TIPS

ಮೀಸಲಾತಿ ವಿರೋಧಿ ಹೋರಾಟದ ನಾಯಕ ಹಾದಿ ಹತ್ಯೆ: ಬಾಂಗ್ಲಾ ಮತ್ತೊಮ್ಮೆ ಉದ್ವಿಗ್ನ

ಢಾಕಾ/ನವದೆಹಲಿ: ಮೀಸಲಾತಿ ವಿರೋಧಿ ಹೋರಾಟದ ಮುಂಚೂಣಿಯಲ್ಲಿದ್ದ 32 ವರ್ಷದ ಯುವ ನಾಯಕ ಶರೀಫ್‌ ಒಸ್ಮಾನಿ ಹಾದಿ ಅವರ ಸಾವಿನ ಬಳಿಕ ಬಾಂಗ್ಲಾದೇಶ ಮತ್ತೊಮ್ಮೆ ಹೊತ್ತಿ ಉರಿಯುತ್ತಿದೆ. ಶುಕ್ರವಾರ ಬೆಳಿಗ್ಗೆ ದೇಶವನ್ನು ಉದ್ದೇಶಿಸಿ ಮಾತನಾಡಿದ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮೊಹಮ್ಮದ್‌ ಯೂನುಸ್‌ ಅವರು ಹಾದಿ ಅವರ ಸಾವಿನ ವಿಚಾರವನ್ನು ತಿಳಿಸಿದರು..

'ಹಾದಿ ಅವರಿಗೆ ಗುಂಡಿಕ್ಕಿದ್ದ ಆರೋಪಿಗಳು ಭಾರತಕ್ಕೆ ಓಡಿ ಹೋಗಿದ್ದಾರೆ' ಎಂಬುದು ಪ್ರತಿಭಟನಕಾರರ ಆರೋಪ. ದೀಪು ಚಂದ್ರದಾಸ್‌ ಎಂಬ ಹಿಂದೂ ವ್ಯಕ್ತಿಯನ್ನು ಗುಂಪೊಂದು ಬೆಂಕಿ ಹಚ್ಚಿ ಹತ್ಯೆ ಮಾಡಿದೆ. ದೀಪು ಅವರ ಹತ್ಯೆ ಕುರಿತು ಭಾರತೀಯರು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶ ಹೊರಹಾಕಿದ್ದಾರೆ.

ಗುಂಡಿಕ್ಕಿದ ಘಟನೆ ಏನು?:

2026ರ ಫೆಬ್ರುವರಿ 12ರಂದು ಬಾಂಗ್ಲಾದಲ್ಲಿ ಸಾರ್ವತ್ರಿಕ ಚುನಾವಣೆ ಘೋಷಣೆಯಾಗಿದೆ. ಹಾದಿ ಅವರು ಚುನಾವಣೆಯಲ್ಲಿ ಸ್ಪರ್ಧಿಸುವ ಘೋಷಣೆ ಮಾಡಿದ್ದರು ಮತ್ತು ಪ್ರಚಾರ ಆರಂಭಿಸಿದ್ದರು. ಡಿ.12ರಂದು ಅವರು ಪ್ರಚಾರದಲ್ಲಿ ಇದ್ದರು. ಆಗ ಬೈಕ್‌ನಲ್ಲಿ ಬಂದ ಮುಸುಕುಧಾರಿ ವ್ಯಕ್ತಿಯೊಬ್ಬ ಅವರ ಮೇಲೆ ಗುಂಡು ಹಾರಿಸಿದ್ದಾನೆ. ತೀವ್ರ ಗಾಯಗೊಂಡಿದ್ದ ಹಾದಿ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಸೋಮವಾರ ಸಿಂಗಪುರಕ್ಕೆ ಕಳುಹಿಸಿಕೊಡಲಾಗಿತ್ತು.

ಹಾದಿ ಅವರು 'ಇನ್‌ಕ್ವಿಲಾಬ್‌ ಮಂಚ್' ಸಂಘಟನೆಯ ವಕ್ತಾರರಾಗಿದ್ದರು. ಮಾಜಿ ಪ್ರಧಾನಿ ಶೇಖ್ ಹಸೀನಾ ಮತ್ತು ಭಾರತವನ್ನು ತೀವ್ರವಾಗಿ ಟೀಕಿಸುತ್ತಿದ್ದರು ಮತ್ತು ಹೋರಾಟಗಳನ್ನು ಆಯೋಜಿಸುತ್ತಿದ್ದರು. 'ಭಾರತದ ಪ್ರಾಬಲ್ಯದ ವಿರುದ್ಧದ ಹೋರಾಟದಲ್ಲಿ, ಕ್ರಾಂತಿಕಾರಿ ಒಸ್ಮಾನ್‌ ಹಾದಿ ಅವರನ್ನು ಆ ದೇವರು ಹುತಾತ್ಮ ಎಂದು ಒಪ್ಪಿಕೊಂಡಿದ್ದಾರೆ' ಎಂದು ಗುರುವಾರ ರಾತ್ರಿ ಈ ಸಂಘಟನೆಯು ಪೋಸ್ಟ್ ಹಂಚಿಕೊಂಡಿತ್ತು.

 ಶಾರಿಫ್‌ ಒಸ್ಮಾನಿ ಹಾದಿ

'ಒಂದೊಮ್ಮೆ ಹತ್ಯೆ ಮಾಡಿದವರು ಭಾರತಕ್ಕೆ ಓಡಿ ಹೋಗಿದ್ದರೆ, ಭಾರತ ಸರ್ಕಾರದೊಂದಿಗೆ ಮಾತನಾಡಿ, ಆರೋಪಿಗಳನ್ನು ವಾಪಸು ಕರೆತಂದು ಬಂಧಿಸಲೇಬೇಕು' ಎಂದು ಸಂಘಟನೆ ಒತ್ತಾಯಿಸಿದೆ. 'ದೇಶದ ಚಟುವಟಿಕೆಗಳೇ ನಿಂತು ಹೋಗಲಿ, ನಮಗೆ ನ್ಯಾಯ ಬೇಕು. ಆದ್ದರಿಂದ ನಾವೆಲ್ಲರೂ ಒಟ್ಟಾಗಬೇಕು' ಎಂದೂ ಅದು ಹೇಳಿತ್ತು.

ಗುಂಡಿಕ್ಕಿದ ಪ್ರಕರಣದ ಮುಖ್ಯ ಶಂಕಿತ ಫೈಸಲ್‌ ಕರೀಮ್‌ ಮಸೂದ್‌ ಮತ್ತು ಆತನ ಪೋಷಕರು, ಹೆಂಡತಿ ಮತ್ತು ಸ್ನೇಹಿತೆಯನ್ನು ಪೊಲೀಸರು ಬಂಧಿಸಿದ್ದಾರೆ. ಹಾದಿ ಅವರ ಸಾವಿನ ಹಿನ್ನಲೆಯಲ್ಲಿ ‌ಶನಿವಾರದ ಮಧ್ಯಾಹ್ನದ ವರೆಗೆ ಶೋಕಾಚರಣೆ ಘೋಷಿಸಲಾಗಿದೆ.

ಮೊಹಮ್ಮದ್‌ ಯೂನುಸ್‌ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ದೇಶದ ಪ್ರಜಾಸತ್ತಾತ್ಮಕ ಪ್ರಗತಿಯನ್ನು ಬೆದರಿ‌ಕೆ ಉಗ್ರ ಚಟುವಟಿಕೆಗಳಿಂದ ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ. ನಾವು ತಾಳ್ಮೆಯಿಂದ ಇರೋಣ. ಶಾಂತಿ ಕಾಪಾಡಿ

ಭಾರತ ವಿರೋಧಿ ಘೋಷಣೆ

  • ಹಿಂದೂ ದೇವರುಗಳನ್ನು ನಿಂದಿಸಿ ದೀಪು ಚಂದ್ರ ದಾಸ್‌ ಎಂಬ ವ್ಯಕ್ತಿಯ ಮೇಲೆ ಗುಂಪು ಹಲ್ಲೆ ನಡೆಸಲಾಗಿದೆ. ಬಳಿಕ ಆತನ ದೇಹವನ್ನು ಮರಕ್ಕೆ ನೇತುಹಾಕಿ ಬೆಂಕಿ ಹಚ್ಚಿರುವ ಘಟನೆ ಮೈಮೆನ್‌ಶಿಂಘೋ ನಗರದಲ್ಲಿ ಗುರುವಾರ ರಾತ್ರಿ ನಡೆದಿದೆ. ಈ ಘಟನೆಯನ್ನು ಮುಖ್ಯ ಸಲಹೆಗಾರ ಯೂನುಸ್‌ ಅವರು ತೀವ್ರವಾಗಿ ಖಂಡಿಸಿದ್ದಾರೆ.

  • ಚಟ್ಟೋಗ್ರಾಮದಲ್ಲಿರುವ ಭಾರತದ ಸಹಾಯಕ ಹೈಕಮಿಷನ್‌ ಅವರ ಕಚೇರಿ ಎದುರು ನೂರಾರು ಸಂಖ್ಯೆಯಲ್ಲಿ ಶುಕ್ರವಾರ ಜಮಾಯಿಸಿದ್ದ ಪ್ರತಿಭಟನಕಾರರು ಕಲ್ಲು ತೂರಾಟ ನಡೆಸಿದರು. ಆದರೆ ಕಚೇರಿಗೆ ಯಾವುದೇ ಹಾನಿಯಾಗಲಿಲ್ಲ

  • ಶುಕ್ರವಾರ ಇಡೀ ದಿನ ದೇಶದ ವಿವಿಧ ಭಾಗಗಳಲ್ಲಿ ಪ್ರತಿಭಟನೆಗಳು ನಡೆದವು. ಎಲ್ಲ ಕಡೆಯಲ್ಲಿಯೂ ಭಾರತ ವಿರೋಧಿ ಘೋಷಣೆಗಳನ್ನು ಕೂಗಲಾಯಿತು. ಹಾದಿ ಅವರನ್ನು ಹತ್ಯೆ ಮಾಡಿದವರು ವಾಪಸು ಬರುವವರೆಗೂ ಭಾರತದ ಹೈಕಮಿಷನ್‌ ಕಚೇರಿಯನ್ನು ಬಂದ್‌ ಮಾಡುವಂತೆ ಒತ್ತಾಯಿಸಲಾಯಿತು. 'ನಾವು ಈಗ ಯುದ್ಧದಲ್ಲಿದ್ದೇವೆ' ಎಂದು ಎನ್‌ಸಿಪಿ ಪಕ್ಷದ ನಾಯಕರೊಬ್ಬರು ಹೇಳಿಕೆ ನೀಡಿದರು

  • ಹಾದಿ ಪರ ಪ್ರತಿಭಟನಕಾರರು ಢಾಕಾದಲ್ಲಿರುವ ಭಾರತದ ಹೈಕಮಿಷನ್‌ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದ್ದರು

  • ಭಾರತದ ಪರ ಇದ್ದಾರೆ ಎಂದು ಆರೋಪಿಸಿ ಬಾಂಗ್ಲಾದ 'ಡೈಲಿ ಸ್ಟಾರ್‌' ಮತ್ತು 'ಪ್ರೊಥೊಮ್‌ ಅಲೊ' ಪತ್ರಿಕಾ ಕಚೇರಿಗಳ ಮೇಲೆ ಪ್ರತಿಭಟನಕಾರರು ದಾಳಿ ನಡೆಸಿ ಬೆಂಕಿ ಹಚ್ಚಿದ್ದಾರೆ

ಸಮರ್ಪಕ ನಿರ್ವಹಣೆ ಅಗತ್ಯ: ವಿದೇಶಾಂಗ ಸಚಿವಾಲಯದ ಸಮಿತಿ ವರದಿ

ಭಾರತದ ವಿದೇಶಾಂಗ ಸಚಿವಾಲಯದ ಸಂಸತ್ತಿನ ಸ್ಥಾಯಿ ಸಮಿತಿಯು 'ಭಾರತ-ಬಾಂಗ್ಲಾದೇಶ ಸಂಬಂಧದ ಭವಿಷ್ಯ' ಎಂಬ ಹೆಸರಿನ ವರದಿಯನ್ನು ಸಂಸತ್ತಿನಲ್ಲಿ ಗುರುವಾರ ಮಂಡಿಸಿದೆ. ಕಾಂಗ್ರೆಸ್‌ ಸಂಸ‌ದ ಶಶಿ ತರೂರ್‌ ಅವರು ಸಮಿತಿಯ ಮುಖ್ಯಸ್ಥರಾಗಿದ್ದಾರೆ.

ಬಾಂಗ್ಲಾದಲ್ಲಿ ಪರಿಸ್ಥಿತಿಯು ಸಂಕೀರ್ಣವಾಗಿದೆ. ಚುನಾವಣೆ ನಡೆಯುವ ಬಗ್ಗೆ ಅನಿಶ್ಚಿತತೆ ಮೂಡಿದೆ. ಅಲ್ಪಸಂಖ್ಯಾತರ ಮೇಲಿನ ದಾಳಿ ಕುರಿತು ಕಳವಳ ವ್ಯಕ್ತಪಡಿಸುತ್ತಲೇ ಅಲ್ಲಿನ ಮಧ್ಯಂತರ ಸರ್ಕಾರದ ಜೊತೆ ಭಾರತವು ನಿರಂತರ ಸಂಪರ್ಕ ಮಾಡುತ್ತಿದೆ ಮತ್ತು ಸರ್ಕಾರಕ್ಕೆ ಬೆಂಬಲವನ್ನೂ ನೀಡುತ್ತಿದೆ

ಅವಾಮಿ ಲೀಗ್‌ ಪಕ್ಷದ ಪ್ರಾಬಲ್ಯ ತಗ್ಗಿದಾಗಿನಿಂದಲೂ ಹಲವು ಘಟನೆಗಳು ನಡೆಯುತ್ತಿವೆ. ಯುವ ಸಮೂಹದ ನೇತೃತ್ವದ ರಾಷ್ಟ್ರೀಯತೆ ಪರಿಕಲ್ಪನೆಯು ಉದಯವಾಗಿದೆ. ಇಸ್ಲಾಮಿಕ್‌ ಮೂಲಭೂತವಾದವು ಮತ್ತೊಮ್ಮೆ ಪ್ರವೇಶ ಪಡೆದಿದೆ. ಚೀನಾ ಮತ್ತು ಪಾಕಿಸ್ತಾನದ ಪ್ರಭಾವವು ಹೆಚ್ಚಳವಾಗಿದೆ. ಭಾರತವು ಈ ಎಲ್ಲವನ್ನು ತಕ್ಷಣವೇ ಸಮರ್ಪಕವಾಗಿ ನಿಭಾಯಿಸದೇ ಇದ್ದರೆ ಬಾಂಗ್ಲಾವನ್ನು ನಾವು ಕಳೆದುಕೊಳ್ಳಲಿದ್ದೇವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries