ಢಾಕಾ: ಭದ್ರತಾ ಕಾರಣಗಳಿಂದಾಗಿ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದ ಢಾಕಾದಲ್ಲಿರುವ ಭಾರತೀಯ ವೀಸಾ ಕೇಂದ್ರವು ಗುರುವಾರ ಮತ್ತೆ ತನ್ನ ಕಾರ್ಯಾಚರಣೆ ಆರಂಭಿಸಿದೆ.
ಭಾರತ ವಿರೋಧಿ ಗುಂಪಿನ ಪ್ರತಿಭಟನಕಾರರು ಬುಧವಾರ ಭಾರತೀಯ ಹೈಕಮಿಷನ್‌ನತ್ತ ಧಾವಿಸಿದ ಕಾರಣ ಎದುರಾಗಬಹುದಾದ ಭದ್ರತಾ ಸವಾಲುಗಳನ್ನು ಪರಿಗಣಿಸಿ, ಢಾಕಾದಲ್ಲಿನ ವೀಸಾ ಕೇಂದ್ರವು ತಾತ್ಕಾಲಿವಾಗಿ ಕಾರ್ಯಾಚರಣೆ ಸ್ಥಗಿತಗೊಳಿಸಿತ್ತು.
ಇದಕ್ಕೆ ಸಂಬಂಧಿಸಿದಂತೆ ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಬಾಂಗ್ಲಾ ರಾಯಭಾರಿಗೆ ಸಮನ್ಸ್ ನೀಡಿತ್ತು. ಬಳಿಕ ಗುರುವಾರ ಎಂದಿನಂತೆ ವೀಸಾ ಕೇಂದ್ರದ ಕಾರ್ಯಾಚರಣೆ ಆರಂಭವಾಗಿದೆ.
ಆದರೆ, ಖುಲ್ನಾ ಮತ್ತು ರಾಜಶಾಹಿ ಪ್ರದೇಶಗಳಲ್ಲಿರುವ ಭಾರತೀಯ ವೀಸಾ ಕೇಂದ್ರಗಳಲ್ಲಿ ಭದ್ರತಾ ಕಾರಣಗಳಿಂದ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ಈ ಕೇಂದ್ರಗಳಲ್ಲಿ ಗುರುವಾರದ ಸ್ಲಾಟ್ ಪಡೆದಿದ್ದ ಅರ್ಜಿದಾರರಿಗೆ ಬೇರೊಂದು ದಿನಾಂಕ ನಿಗದಿಪಡಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

