ಭೋಪಾಲ್: ಮಧ್ಯ ಪ್ರದೇಶದ ಕಟ್ನಿ ಜಿಲ್ಲೆಯ ಅಂಗನವಾಡಿಯೊಂದರಲ್ಲಿ ವಿದ್ಯಾರ್ಥಿಗಳ ಜೊತೆಗೆ ಸ್ಟೀಲ್ ಪ್ಲೇಟ್ ಗಳಿಂದ ಮೇಕೆಗಳು ಕೂಡಾ ಮಧ್ಯಾಹ್ನದ ಬಿಸಿಯೂಟ ಸೇವಿಸುತ್ತಿರುವ ವಿಡಿಯೊ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಬಗ್ಗೆ ತನಿಖೆಗೆ ಆದೇಶಿಸಿರುವ ಅಧಿಕಾರಿಗಳು, ಇದಕ್ಕೆ ಕಾರಣರಾದವರ ವಿರುದ್ಧ ಪ್ರಾಥಮಿಕ ಕ್ರಮ ಆರಂಭಿಸಿದ್ದಾರೆ.
ಎರಡು ಸಾಲಿನಲ್ಲಿ ಕುಳಿತಿರುವ ಅಂಗನವಾಡಿ ಮಕ್ಕಳಿಗೆ ಸ್ಟೀಲ್ ತಟ್ಟೆಗಳಲ್ಲಿ ಊಟ ಬಡಿಸಲಾಗಿದ್ದು, ಸರದಿಯ ಕೊನೆಯಲ್ಲಿ ಇಟ್ಟಿರುವ ಎರಡು ತಟ್ಟೆಗಳಿಂದ ಮೇಕೆಗಳು ತಿನ್ನುತ್ತಿರುವ ಹಲವು ವಿಡಿಯೊ ತುಣುಕುಗಳು ವೈರಲ್ ಆಗಿವೆ.
ಕೊತ್ವಿ ಗ್ರಾಮದ ಸೆಹ್ರಾ ಮೊಹಲ್ಲಾದಲ್ಲಿ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಅಂಗನವಾಡಿ ಕೇಂದ್ರಕ್ಕೆ ಸಂಬಂಧಿಸಿದ ವಿಡಿಯೊ ಇದಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ವಿಡಿಯೊ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಬೆನ್ನಲ್ಲೇ ಅಧಿಕಾರಿಗಳನ್ನು ಗ್ರಾಮಕ್ಕೆ ಕಳುಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅಶೀಶ್ ತಿವಾರಿ ಹೇಳಿದ್ದಾರೆ.
ಊಟ ಬಡಿಸುವ ವೇಳೆ ಅಂಗವಾಡಿ ಮೇಲ್ವಿಚಾರಕ, ಸಹಾಯಕ ಮತ್ತು ಕಾರ್ಯಕರ್ತೆ ಸ್ಥಳದಲ್ಲಿ ಇರಲಿಲ್ಲ ಎನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಅಂಗನವಾಡಿ ಮೇಲ್ವಿಚಾರಕದ ವೇತನ ಭಡ್ತಿಯನ್ನು ತಡೆಹಿಡಿಯಲಾಗಿದೆ ಹಾಗೂ ಸಹಾಯಕಿ ಹಾಗೂ ಕಾರ್ಯಕರ್ತೆಗೆ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ವಿವರಿಸಿದ್ದಾರೆ.
ಶಿವಪುರ ಜಿಲ್ಲೆಯ ವಿಜಯಪುರ ತಾಲೂಕಿನ ಹಲ್ಪುರ ಎಂಬ ಗ್ರಾಮದಲ್ಲಿ ವಿದ್ಯಾರ್ಥಿಯೊಬ್ಬನಿಗೆ ಚಿಂದಿ ಕಾಗದದಲ್ಲಿ ಊಟ ನೀಡುತ್ತಿರುವ ವಿಡಿಯೊ ವೈರಲ್ ಆದ ಸಂದರ್ಭ ರಾಷ್ಟ್ರಾದ್ಯಂತ ಆಕ್ರೋಶ ವ್ಯಕ್ತವಾದ ಘಟನೆಯ ಬೆನ್ನಲ್ಲೇ ಈ ಘಟನೆ ವರದಿಯಾಗಿದೆ.

