HEALTH TIPS

Indian Politics: ಪೊಲಿಟಿಕಲ್‌ನ 'ಗೇಮ್ ಆಫ್ ಥ್ರೋನ್ಸ್'! ಭಾರತದ ರಾಜಕೀಯ ಹಾದಿ ಬದಲಿಸಿದ 25 ವರ್ಷಗಳ ಫ್ಲ್ಯಾಶ್‌ ಬ್ಯಾಕ್!

ನವದೆಹಲಿ: 2025 ಮುಗಿದು 2026ರ ಹೊಸ ವರ್ಷಕ್ಕೆ ಕಾಲಿಡುವ ಹೊತ್ತಿನಲ್ಲಿ ನಾವಿದ್ದೇವೆ. ಅರ್ಥಾಥ್ 21ನೇ ಶತಮಾನದ ಮೊದಲ 25 ವರ್ಷಗಳನ್ನು(25 Years) ನಾವು ಹಲವಾರು ಏಳು ಬೀಳಿನ ಮಧ್ಯೆಯೇ ಯಶಸ್ವಿಯಾಗಿ ಪೂರೈಸಿದ್ದೇವೆ. ಈ 25 ವರ್ಷಗಳು ಭಾರತ ರಾಜಕೀಯಕ್ಕೆ (Indian Politics) ಕೇವಲ ಕಾಲಗಣನೆ ಅಲ್ಲ, ಬದಲಾವಣೆಯ ಯುಗ.

ಕಾಂಗ್ರೆಸ್‌ನ (Congress) ಏಕಾಧಿಪತ್ಯದಿಂದ ಬಿಜೆಪಿ (BJP) ಪ್ರಾಬಲ್ಯದವರೆಗೆ, ಯುಪಿಎ (UPA) ಉದಯದಿಂದ ಎನ್​ಡಿಎ (NDA) ಅಧಿಕಾರದವರೆಗೆ, ಅಟಲ್​ ಬಿಹಾರಿ ವಾಜಪೇಯಿಯಿಂದ ಮನಮಹೋನ್​ ಸಿಂಗ್ ಮೋದಿ ಹಾಗೂ ರಾಹುಲ್ ಗಾಂಧಿವರೆಗೆ ಹೀಗೆ ಈ 25 ವರ್ಷದ ಅವಧಿಯಲ್ಲಿ ನಡೆದ ರಾಜಕಾರಣವೇ ಒಂದು ಇತಿಹಾಸ ಆಗಿದೆ. ಈ ಹಿನ್ನೆಲೆಯಲ್ಲಿ, ಕಳೆದ 25 ವರ್ಷಗಳಲ್ಲಿ ಎದುರಾದ ರಾಜಕೀಯ ಏರುಪೇರುಗಳು, ಅಭಿವೃದ್ಧಿಯ ಹಂತಗಳು, ಭ್ರಷ್ಟಾಚಾರದ ಆರೋಪಗಳು, ಮತ್ತು ಈ ಎಲ್ಲದ ಮಧ್ಯೆ ಹುಟ್ಟಿಕೊಂಡ ಹೊಸ ತಲೆಮಾರಿನ ರಾಜಕೀಯ ಪಯಣವನ್ನು ಇಲ್ಲಿ ಅವಲೋಕಿಸುವ ಪ್ರಯತ್ನ ಇದಾಗಿದೆ.

ಎನ್​ಡಿಎ ಯುಗದ ಆರಂಭ! ವಾಜಪೇಯಿ ಕಾಲಘಟ್ಟ!
2000ನೇ ವರ್ಷದ ಜನವರಿಯಲ್ಲಿ ದೇಶ ರಾಜಕೀಯವಾಗಿ ಒಂದು ಹೊಸ ಹಂತಕ್ಕೆ ಕಾಲಿಟ್ಟಿತ್ತು.
ಎನ್​ಡಿಎ ಸರ್ಕಾರ ಅಧಿಕಾರ ವಹಿಸಿಕೊಂಡು ಒಂದು ವರ್ಷ ಪೂರೈಸಿತ್ತು. 70 ವರ್ಷಗಳ ಕಾಲ ದೇಶವನ್ನಾಳಿದ್ದ ಕಾಂಗ್ರೆಸ್ ಮಾಡಿದ ಪಾಪಕ್ಕೆ ವಿಪಕ್ಷ ಸ್ಥಾನದಲ್ಲಿ ಕುಳಿತುಕೊಳ್ಳುವಂಥ ಸ್ಥಿತಿ ನಿರ್ಮಾಣವಾಗಿತ್ತು . ಸದನದಲ್ಲಿ ಆಡಳಿತ ಪಕ್ಷ ಕೋಮುವಾದ ಭುಗಿಲೆದ್ದಿದೆ, ರಾಜಕಾರಣದಲ್ಲಿ ಆರ್‌ಎಸ್‌ಎಸ್ ಹಸ್ತಕ್ಷೇಪ ಮಾಡುತ್ತಿದೆ ಎಂಬ ಆರೋಪಗಳನ್ನ ಕಾಂಗ್ರೆಸ್ ಮಾಡಿದರೂ, ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಆಡಳಿತ ಶೈಲಿಯ ಮುಂದೆ ಆ ಟೀಕೆಗಳು ನಿರಾಯಾಸವಾಗಿ ವಿಫಲವಾದವವು. ವಾಜಪೇಯಿ ಸರ್ಕಾರ ದೇಶದ ಆಡಳಿತಾತ್ಮಕ ವ್ಯವಸ್ಥೆಯಲ್ಲಿ ದೊಡ್ಡ ಹೆಜ್ಜೆ ಇಟ್ಟಿತು. ಜಾರ್ಖಂಡ್, ಉತ್ತರಾಖಂಡ್, ಛತ್ತೀಸ್ಗಢ ಎಂಬ ಮೂರು ಹೊಸ ರಾಜ್ಯಗಳ ರಚನೆ ಮಾಡಿ, ದೇಶದ ಫೆಡರಲ್ ವ್ಯವಸ್ಥೆಗೆ ಹೊಸ ಆಯಾಮ ನೀಡಿತು. ಈ ಅವಧಿಯಲ್ಲಿ ಎನ್​ಡಿಎ ಸರ್ಕಾರ ಸ್ಥಿರತೆ ಮತ್ತು ಸಮತೋಲನದ ಸಂಕೇತವಾಗಿ ಕಾಣಿಸಿಕೊಂಡಿತು.

ಪಾರ್ಲಿಮೆಂಟ್ ಅಟ್ಯಾಕ್, ದೇಶದ ಹೃದಯವೇ ದಸಕ್!
2001ರ ಡಿಸೆಂಬರ್ 13ರಂದು ನಡೆದ ಸಂಸತ್ ದಾಳಿ ಇಡೀ ದೇಶವನ್ನೇ ಬೆಚ್ಚಿಬೀಳುವಂತೆ ಮಾಡಿತು. ಲಷ್ಕರ್-ಎ-ತೊಯ್ಬಾ ಮತ್ತು ಜೈಶ್-ಎ-ಮೊಹಮ್ಮದ್ ಉಗ್ರರ ದಾಳಿ ಭಾರತ-ಪಾಕಿಸ್ತಾನ ಸಂಬಂಧಗಳನ್ನು ಉದ್ವಿಗ್ನಗೊಳಿಸಿತು. ರಾಷ್ಟ್ರ ಭದ್ರತೆ, ಉಗ್ರವಾದ ಮತ್ತು ರಾಷ್ಟ್ರಭಾವನೆ ರಾಜಕೀಯದ ಕೇಂದ್ರಬಿಂದುವಾದವು. ವಾಜಪೇಯಿ ಅವರು ಇಂಥ ಸಂಕಷ್ಟದಲ್ಲೂ ಸಹ ಆಡಳಿತಾತ್ಮಕ ಹಿಡಿತ ತೋರ್ಪಡಿಸಿ, 20 ಪಕ್ಷಗಳನ್ನು ಒಟ್ಟುಗೂಡಿಸಿಕೊಂಡು, 5 ವರ್ಷ ಪೂರ್ಣಗೊಳಿಸಿ ಕಾಂಗ್ರೆಸೇತರ ಅಭ್ಯರ್ಥಿ ಎಂಬ ಖ್ಯಾತಿಗೆ ಪಾತ್ರರಾದರು.

ರಾಷ್ಟ್ರ ರಾಜಕೀಯಕ್ಕೆ ನಮೋ ಎಂಟ್ರಿ!
2002ರ ವರ್ಷ ಒಂದು ವ್ಯಕ್ತಿಯನ್ನು ರಾಷ್ಟ್ರ ರಾಜಕೀಯಕ್ಕೆ ಪರಿಚಯಿಸಿತು. ನರೇಂದ್ರ ಮೋದಿ. ಗೋದ್ರಾ ಹತ್ಯಾಕಾಂಡದ ನಂತರ ನಡೆದ ಗುಜರಾತ್ ಗಲಭೆಗಳು ದೇಶದ ರಾಜಕೀಯವನ್ನು ಕುದಿಸಿದವು. ಧರ್ಮಾಧಾರಿತ ರಾಜಕೀಯ, ಹಿಂಸಾಚಾರ, ನಾಯಕತ್ವ - ಈ ಎಲ್ಲದರ ನಡುವೆ ನಡೆದ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಭರ್ಜರಿ ಗೆಲುವು ಸಾಧಿಸಿದರು. ಇದೇ ಅವರ ರಾಜಕೀಯ ಬದುಕಿನ ಮಹತ್ವದ ತಿರುವು ಪಡೆಯಲು ಕಾರಣವಾಯಿತು.

2004ರಲ್ಲಿ ಬಿಜೆಪಿಗೆ ಅಲ್ಪ ಹಿನ್ನಡೆ, ಯುಪಿಎಗೆ ಗೆಲುವು!
2004ರ ಲೋಕಸಭೆ ಚುನಾವಣೆ ಭಾರತೀಯ ರಾಜಕೀಯದ ಅಚ್ಚರಿಯ ಅಧ್ಯಾಯ. 'ಇಂಡಿಯಾ ಶೈನಿಂಗ್' ಘೋಷಣೆಯೊಂದಿಗೆ ಚುನಾವಣೆಗೆ ಹೋದ ಎನ್​ಡಿಎಗೆ ಸೋಲು ಎದುರಾಯಿತು. ಎಲ್ಲರೂ ವಾಜಪೇಯಿ ಮತ್ತೆ ಪ್ರಧಾನಿಯಾಗುತ್ತಾರೆಂದುಕೊಂಡಿದ್ದಾಗ, ಫಲಿತಾಂಶ ಸಂಪೂರ್ಣ ಭಿನ್ನವಾಗಿತ್ತು. ಕಾಂಗ್ರೆಸ್ ನೇತೃತ್ವದ ಯುಪಿಎ 145 ಸ್ಥಾನಗಳನ್ನು ಪಡೆದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಸೋನಿಯಾ ಗಾಂಧಿ ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡ ತಂತ್ರ ಫಲ ನೀಡಿತು. ಇವಿಎಂ ಮೂಲಕ ನಡೆದ ಮೊದಲ ಚುನಾವಣೆ, ಮುಂಚಿತವಾಗಿ ಬೇಸಿಗೆಯಲ್ಲಿ ಚುನಾವಣೆಗೆ ಹೋಗಿದ್ದು, ಇವೆಲ್ಲ ಎನ್​​ಡಿಎ ಸೋಲಿಗೆ ಕಾರಣಗಳಾದವು. ಆದರೂ ಈ ಸೋಲಿನಲ್ಲಿ ಗುಜರಾತ ಗಲಭೆ ಪ್ರಮುಖ ಪಾತ್ರ ವಹಿಸಿದೆ ಎಂದು ವಾಜಪೇಯಿ ನಿರಾಶೆ ವ್ಯಕ್ತಪಡಿಸಿದ್ದರು.

ಮನಮೋಹನ್ ಸಿಂಗ್ ಯುಗ!
ಮನಮೋಹನ್ ಸಿಂಗ್ ಪ್ರಧಾನಿಯಾದ ಬಳಿಕ ಯುಪಿಎ ಸರ್ಕಾರ ಆರ್ಥಿಕ ಸ್ಥಿರತೆ, ಅಭಿವೃದ್ಧಿ ಮತ್ತು ಜನಪರ ಯೋಜನೆಗಳ ಮೇಲೆ ಗಮನಹರಿಸಿತು. 2007ರಲ್ಲಿ ಪ್ರತಿಭಾ ಸಿಂಗ್ ಪಾಟೀಲ್ ದೇಶದ ಮೊದಲ ಮಹಿಳಾ ರಾಷ್ಟ್ರಪತಿಯಾಗಿ ಆಯ್ಕೆಯಾದರು. ಆದರೆ ಅದೇ ಅವಧಿಯಲ್ಲಿ ಭೂ ಸ್ವಾಧೀನ ವಿರೋಧಿಸಿ ನಂದಿಗ್ರಾಂ, ಸಿಂಗೂರು ನಲ್ಲಿ ನಡೆದ ಹೋರಾಟಗಳು ಪಶ್ಚಿಮ ಬಂಗಾಳ ರಾಜಕೀಯವನ್ನು ಅಸ್ಥಿರಗೊಳಿಸಿತು. ಇಲ್ಲಿ ಬುದ್ದದ್ದೇವ್ ಬಟ್ಟಾಚಾರ್ಯ ತಾವು ಮುಖ್ಯಮಂತ್ರಿ ಆದ ಸಮಯದಲ್ಲಿ ಕೈಗಾರಿಕೆ ವೃದ್ಧಿಗೆ ಒತ್ತು ನೀಡಿದ್ದರು. ಅದೇ ಅವತ್ತು ಅವರಿಗೆ ಮುಳುವಾಗಿ ಪರಿಣಮಿಸಿತು. ಈ ಸಮಯದಲ್ಲಿ ನಡೆದ ಭೂ ಸ್ವಾಧೀನದ ವಿರುದ್ಧ ಬಂಡೆದ್ದ ನಂದಿಗ್ರಾಮ ಸಿಂಗನೂರ್​ ರೈತರ ಪರ ನಿಂತ ಮಮತಾ ಬ್ಯಾನರ್ಜಿ ಒಂದು ಇತಿಹಾಸ ನಿರ್ಮಿಸಿದರು.

ಅಣು ಒಪ್ಪಂದ ಮತ್ತು ವಿಶ್ವಾಸಮತ
!
2008ರಲ್ಲಿ ಅಮೆರಿಕದೊಂದಿಗೆ ಮಾಡಲಾದ ಅಣು ಒಪ್ಪಂದ ಯುಪಿಎ ಸರ್ಕಾರಕ್ಕೆ ದೊಡ್ಡ ಸವಾಲಾಯಿತು. ಎಡಪಕ್ಷಗಳು ಬೆಂಬಲ ಹಿಂತೆಗೆದುಕೊಂಡ ಕಾರಣ ವಿಶ್ವಾಸಮತ ಪರೀಕ್ಷೆ ಎದುರಿಸಬೇಕಾಯಿತು. ಆದರೂ ಕಾಂಗ್ರೆಸ್ ಸರ್ಕಾರಕ್ಕೆ ವಿಶ್ವಾಸ ಮತದಲ್ಲಿ ಜಯಗಳಿಸಿತು. ಈ ಘಟನೆ ಭಾರತವನ್ನು ಜಾಗತಿಕ ರಾಜಕೀಯ ವೇದಿಕೆಯಲ್ಲಿ ಹೊಸ ಸ್ಥಾನಕ್ಕೆ ಕೊಂಡೊಯ್ದರೂ, ರಾಜಕೀಯದಲ್ಲಿ ಗಂಭೀರ ಟೀಕೆ ಎದುರಿಸಲು ಕಾರಣವಾಯಿತು.

2009ರಲ್ಲಿ ಮತ್ತೆ ಯುಪಿಎಗೆ ಜಯ!
2009ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ 262 ಸ್ಥಾನಗಳನ್ನು ಗೆದ್ದು ಮತ್ತೆ ಅಧಿಕಾರಕ್ಕೆ ಬಂತು. ಕಾಂಗ್ರೆಸ್ ಒಂದೇ ಪಕ್ಷ 206 ಸ್ಥಾನಗಳನ್ನು ಪಡೆದು ಬಲಿಷ್ಠವಾಗಿ ಹೊರಹೊಮ್ಮಿತು. 'ಗರೀಬಿ ಹಟಾವೋ', NREGA ತರಹದ ಯೋಜನೆಗಳು ಗ್ರಾಮೀಣ ಭಾರತದಲ್ಲಿ ಕಾಂಗ್ರೆಸ್‌ಗೆ ಬಲ ನೀಡಿದವು. ಇದು ಕಾಂಗ್ರೆಸ್​ ಗೆಲುವಿಗೆ ಪ್ರಮುಖ ಪಾತ್ರವಹಿಸಿತು. ಇಲ್ಲಿ ಸಿಂಗ್ ಇಸ್​ ಕಿಂಗ್ ಎಂಬ ಉದ್ಘೋಷದ ಮಧ್ಯ ಮತ್ತೊಂದು ಬಾರಿ ಮನಮೋಹನ್​ ಸಿಂಗ್ ಪ್ರಧಾನ ಮಂತ್ರಿ ಸ್ಥಾನದ ಪದಗ್ರಹಣ ಮಾಡಿದ್ದರು.

ಕಾಂಗ್ರೆಸ್ ಪತನದ ಆರಂಭ!
2010ರಿಂದ ಕಾಂಗ್ರೆಸ್ ಸರ್ಕಾರಕ್ಕೆ ಸಂಕಷ್ಟಗಳ ಸರಣಿ ಶುರು ಆಯಿತು. 2ಜಿ ಸ್ಪೆಕ್ಟ್ರಮ್, ಕೋಲ್‌ಗೇಟ್ ಹಗರಣಗಳು ಸರ್ಕಾರದ ಮೇಲೆ ಭಾರೀ ಕಳಂಕ ತಂದವು. ಇದೇ ಸಮಯದಲ್ಲಿ ಬಿಹಾರದಲ್ಲಿ ನಿತೀಶ್ ಕುಮಾರ್ ಧರ್ಮ-ಜಾತಿ ರಾಜಕೀಯಕ್ಕೆ ಸವಾಲು ಒಡ್ಡಿ ದೊಡ್ಡ ಗೆಲುವು ಸಾಧಿಸಿದರು. ಅಲ್ಲದೇ ಕೆಲವು ರಾಜ್ಯಗಳಲ್ಲಿ ಕಾಂಗ್ರೆಸ್​ ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿತು. ಈ ಕಾಂಗ್ರೆಸ್​ ಹಿಂದಿನ ಭ್ರಷ್ಟಾಚಾರಕ್ಕೆ ಹಿಡಿದ ಕೈ ಗನ್ನಡಿಯಂತ್ತಾಗಿತ್ತು.

ಅಣ್ಣಾ ಹಜಾರೆ ಹೋರಾಟ, ರಾಜಕೀಯ ತಿರುವು!
2011ರಲ್ಲಿ ಅಣ್ಣ ಹಜಾರೆ ನೇತೃತ್ವದ ಜನಲೋಕಪಾಲ್ ಹೋರಾಟ ದೇಶವನ್ನೇ ಜನಾಂದಲೋನ ಗೊಳಿಸಿತ್ತು. ಭ್ರಷ್ಟಾಚಾರದ ವಿರುದ್ಧ ನಡೆದ ಈ ಹೋರಾಟಕ್ಕೆ ಕೋಟ್ಯಂತರ ಜನ ಬೆಂಬಲ ನೀಡಿದರು. ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರದ ಪ್ರತೀಕವಾಗಿ ಜನರ ಮುಂದೆ ಕಾಣಿಸಿತು. ಇದೇ ಹೋರಾಟ ಬಿಜೆಪಿ ಮತ್ತು ಹೊಸ ನಾಯಕರಿಗೆ ರಾಜಕೀಯ ಶಕ್ತಿ ನೀಡಿತು. ಮುಂದೆ ಆದದ್ದು ಇತಿಹಾಸ.

ಸರ್ಕಾರದ ಉಸಿರು ಘಟ್ಟಿಸಿದ ನಿರ್ಭಯ ಪ್ರಕರಣ!
2012ರ ದೆಹಲಿ ಗ್ಯಾಂಗ್ ರೇಪ್ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳುವಂತೆ ಮಾಡಿತು. ಕಾನೂನು ಸುವ್ಯವಸ್ಥೆ ಬಗ್ಗೆ ಗಂಭೀರ ಪ್ರಶ್ನೆಗಳು ಉದ್ಭವಿಸಿದವು. ಈ ಘಟನೆ ಕಾಂಗ್ರೆಸ್ ಆಡಳಿತದ ಮೇಲಿನ ಆಕ್ರೋಶವನ್ನು ಮತ್ತಷ್ಟು ಹೆಚ್ಚಿಸಿತು. ಹಲವಾರು ಕಡೆ ಪ್ರತಿಭಟನೆ ನಡೆದವು, ಕಾಲಾಂತರದಲ್ಲಿ ಈ ಎಲ್ಲ ಭ್ರಷ್ಟಾಚಾರ ಸಾಧನೆ, ಹದಗೆಟ್ಟ ಕಾನೂನು ಸುವ್ಯವಸ್ಥೆಯಿಂದ 2014ರಲ್ಲಿ ನೆಲಕಚ್ಚಿದ ಕಾಂಗ್ರೆಸ್​ ಇಂದಿನ ವರೆಗೂ ಮೇಲೆ ಏಳಲೇ ಇಲ್ಲ.

ಆಮ್ ಆದ್ಮಿ ಮತ್ತು ಮೋದಿ ಪರಿಚಯಿಸಿದ ರಾಜಕಾರಣ!
2013ರಲ್ಲಿ ಅರವಿಂದ್ ಕೇಜ್ರಿವಾಲ್ ಆಮ್ ಆದ್ಮಿ ಪಕ್ಷ ಸ್ಥಾಪಿಸಿ ದೆಹಲಿಯಲ್ಲಿ ಅಧಿಕಾರಕ್ಕೆ ಬಂದರು. ಇದೇ ಸಮಯದಲ್ಲಿ ಬಿಜೆಪಿ ನರೇಂದ್ರ ಮೋದಿ ಅವರನ್ನು ಪ್ರಧಾನಮಂತ್ರಿ ಅಭ್ಯರ್ಥಿಯಾಗಿ ಘೋಷಿಸಿತು. ಭ್ರಷ್ಟಾಚಾರ ರಹಿತ ಆಡಳಿತ, ಬಲಿಷ್ಠ ನಾಯಕತ್ವ ಎಂಬ ಇಮೇಜ್ ದೇಶದಾದ್ಯಂತ ಮೋದಿ ಪರ ಅಲೆ ಎಬ್ಬಿಸಿತು. ಈ ಎಲ್ಲ ಬೆಳವಣಿಗೆಗಳ ನಂತರ 2014ರ ಲೋಕಸಭೆ ಚುನಾವಣೆ ನಡೆಯಿತು. ಅದು ಕೇವಲ ಒಂದು ಚುನಾವಣೆ ಅಲ್ಲ, ಹೊಸ ಭಾರತದ ಆರಂಭ. ಕಾಂಗ್ರೆಸ್ ಯುಗದ ಅಂತ್ಯ ಮತ್ತು ಮೋದಿ ಯುಗದ ಉದಯಕ್ಕೆ ಅದೇ ಮುನ್ನುಡಿ ಬರೆದಿತ್ತು.

ಮೋದಿ ಮೇನಿಯಾ
ಕಾಂಗ್ರೆಸ್ ಕುಸಿತ ಮತ್ತು ನವ ಭಾರತದ ರಾಜಕೀಯ
2014ರ ಲೋಕಸಭೆ ಚುನಾವಣೆ ಭಾರತದ ರಾಜಕೀಯ ಇತಿಹಾಸದಲ್ಲೇ ದೊಡ್ಡ ತಿರುವು ತಂದ ಚುನಾವಣೆ. ಸ್ವಾತಂತ್ರ್ಯ ನಂತರ ಮೊದಲ ಬಾರಿಗೆ, ಕಾಂಗ್ರೇಸೆತರ ಪಕ್ಷವೊಂದು ತನ್ನದೇ ಶಕ್ತಿಯಿಂದ ಸಂಪೂರ್ಣ ಬಹುಮತ ಪಡೆದು ಅಧಿಕಾರಕ್ಕೆ ಬಂದದ್ದು ಇದೇ ಚುನಾವಣೆ. ನರೇಂದ್ರ ಮೋದಿ ನೇತೃತ್ವದ ಬಿಜೆಪಿ 282 ಸ್ಥಾನಗಳನ್ನು ಗೆದ್ದು, ಎನ್​ಡಿಎ ಒಟ್ಟಾರೆ 336 ಸ್ಥಾನಗಳನ್ನು ಪಡೆದಿತ್ತು. ಇದು ಕೇವಲ ಸರ್ಕಾರ ಬದಲಾವಣೆ ಅಲ್ಲ, ರಾಜಕೀಯ ಸಂಸ್ಕೃತಿಯ ಬದಲಾವಣೆ ಆಗಿತ್ತು.

ಮೋದಿ ವರ್ಚಸ್ಸು ಹೆಚ್ಚಿಸಿದ ಕಾಂಗ್ರೆಸ್ಸಿನ ಭ್ರಷ್ಟಾಚಾರ!
ಕಾಂಗ್ರೆಸ್ ವಿರುದ್ಧದ ಭ್ರಷ್ಟಾಚಾರ ಆರೋಪಗಳು, 2ಜಿ, ಕೋಲ್‌ಗೇಟ್, ಕಾಮನ್‌ವೆಲ್ತ್ ಹಗರಣಗಳು, ನಿರಂತರ ಬೆಲೆ ಏರಿಕೆ, ಈ ಎಲ್ಲವುಗಳ ನಡುವೆ ಅಚ್ಚೆ ದಿನ್ ಎಂಬ ಭರವಸೆಯೊಂದಿಗೆ ಮೋದಿ ಜನರ ಮುಂದೆ ಬಂದಿದ್ದರು. ಗುಜರಾತ್ ಮಾದರಿ ಅಭಿವೃದ್ಧಿ, ಬಲಿಷ್ಠ ನಾಯಕತ್ವ, ಭ್ರಷ್ಟಾಚಾರರಹಿತ ಆಡಳಿತ ಎಂಬ ಸಂದೇಶ ದೇಶದ ಜನರಿಗೆ ತಟ್ಟಿತ್ತು. ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಈ ಅಲೆಗೆ ತತ್ತರಿಸಿತು. ಕೇವಲ 44 ಸ್ಥಾನಗಳಿಗೆ ಕುಸಿದು, ಅಧಿಕೃತ ವಿಪಕ್ಷ ಸ್ಥಾನವನ್ನೂ ಕಳೆದುಕೊಂಡಿತು.

ಮೋದಿಯ ಮೊದಲ ಅವಧಿ (2014-2019): ನಿರ್ಧಾರಾತ್ಮಕ ಆಡಳಿತಮೋದಿಯ ಮೊದಲ ಅವಧಿ ಆರಂಭವಾದ ತಕ್ಷಣವೇ ಆಡಳಿತದ ಶೈಲಿಯಲ್ಲಿ ಬದಲಾವಣೆ ಕಾಣಿಸಿತು. ಮಿನಿಮಮ್ ಗವರ್ನ್ಮೆಂಟ್, ಮ್ಯಾಕ್ಸಿಮಮ್ ಗವರ್ನನ್ಸ್ ಎಂಬ ಘೋಷಣೆಯೊಂದಿಗೆ ಹಲವು ಯೋಜನೆಗಳು ಆರಂಭವಾದವು. ಸ್ವಚ್ಛ ಭಾರತ ಅಭಿಯಾನ, ಜನಧನ್ ಯೋಜನೆ, ಉಜ್ವಲ ಗ್ಯಾಸ್, ಮುದ್ರಾ ಸಾಲ ಯೋಜನೆ, ಇವೆಲ್ಲಾ ಗ್ರಾಮೀಣ ಮತ್ತು ಬಡ ವರ್ಗದ ಜನರನ್ನು ನೇರವಾಗಿ ತಲುಪಿದವು.

ಅಚ್ಚರಿ ನಿರ್ಧಾರ ನೋಟು ಅಮಾನ್ಯೀಕರಣ!
2016ರಲ್ಲಿ ಮೋದಿ ಸರ್ಕಾರ ತೆಗೆದುಕೊಂಡ ಅತಿದೊಡ್ಡ ಮತ್ತು ಅಚ್ಚರಿಯ ನಿರ್ಧಾರವೇ ನೋಟು ಅಮಾನ್ಯೀಕರಣ (ಡಿಮೊನೆಟೈಸೇಶನ್). ಕಪ್ಪುಹಣ ಮತ್ತು ನಕಲಿ ನೋಟುಗಳನ್ನು ತಡೆಗಟ್ಟುವ ಉದ್ದೇಶದಿಂದ 500 ಮತ್ತು 1000 ರೂಪಾಯಿ ನೋಟುಗಳನ್ನು ರದ್ದುಪಡಿಸಲಾಯಿತು. ಇದು ತಾತ್ಕಾಲಿಕವಾಗಿ ಜನರಿಗೆ ಕಷ್ಟ ತಂದರೂ, ದೇಶಕ್ಕಾಗಿ ತ್ಯಾಗ ಎಂಬ ಭಾವನೆ ಮೋದಿ ಪರ ವಾತಾವರಣವನ್ನು ಉಳಿಸಿತು. ಇದಲ್ಲದೇ 2017ರಲ್ಲಿ ಜಾರಿಗೆ ಬಂದ ಜಿಎಸ್‌ಟಿ (GST) ಭಾರತವನ್ನು 'ಒಂದು ದೇಶ ಒಂದು ತೆರಿಗೆ' ವ್ಯವಸ್ಥೆಗೆ ಕರೆದೊಯ್ದಿತು. ಆರಂಭದಲ್ಲಿ ವ್ಯಾಪಾರಿಗಳಲ್ಲಿ ಅಸಮಾಧಾನ ಇದ್ದರೂ, ದೀರ್ಘಾವಧಿಯಲ್ಲಿ ಇದು ದೊಡ್ಡ ಆರ್ಥಿಕ ಸುಧಾರಣೆ ಎಂದು ಗುರುತಿಸಲಾಯಿತು.

2ನೇ ಬಾರಿಗೆ ನಮೋ!
2019ರಲ್ಲಿ ಬಿಜೆಪಿ 303 ಸ್ಥಾನಗಳನ್ನು ಗೆದ್ದು, ಎನ್​ಡಿಎ 353 ಸ್ಥಾನಗಳೊಂದಿಗೆ ಅಧಿಕಾರಕ್ಕೆ ಬಂತು. ಇದು ಕಾಂಗ್ರೆಸ್‌ಗೆ ಮತ್ತೊಂದು ಭಾರೀ ಹೊಡೆತ. ರಾಹುಲ್ ಗಾಂಧಿ ಅಮೇಠಿಯಿಂದಲೂ ಸೋತರು. ಕಾಂಗ್ರೆಸ್ ನಾಯಕತ್ವ, ಸಂಘಟನೆ ಮತ್ತು ದಿಕ್ಕು ಎಲ್ಲವೂ ಪ್ರಶ್ನೆಯ ಅಡಿಯಲ್ಲಿತ್ತು. ದೇಶದ ಭದ್ರತೆ, ರಕ್ಷಣೆಗೆ ಮೋದಿ ಮತ್ತೊಮ್ಮೆ ಅಧಿಕಾರದ ಚುಕ್ಕಾಣೆ ಹಿಡಿದಿದ್ದರು.

ದೊಡ್ಡ ನಿರ್ಧಾರಗಳ ಜತೆ ಎದುರಾದ ವಿವಾದಗಳು!ಎರಡನೇ ಅವಧಿಯ ಆರಂಭದಲ್ಲೇ ಮೋದಿ ಸರ್ಕಾರ ತೆಗೆದುಕೊಂಡ ಐತಿಹಾಸಿಕ ನಿರ್ಧಾರವೇ 370ನೇ ವಿಧಿ ರದ್ದು. ಜಮ್ಮು- ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿ, ರಾಜ್ಯವನ್ನು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಲಾಯಿತು. ಬಿಜೆಪಿ ಬೆಂಬಲಿಗರು ಇದನ್ನು ರಾಷ್ಟ್ರೀಯ ಏಕತೆ ಎಂದು ಸಂಭ್ರಮಿಸಿದರೆ, ಪ್ರತಿಪಕ್ಷಗಳು ಸಂವಿಧಾನಾತ್ಮಕ ದಾಳಿ ಎಂದು ಟೀಕಿಸಿದವು. ಇದರ ನಂತರವೇ ನಾಗರಿಕತ್ವ ತಿದ್ದುಪಡಿ ಕಾಯ್ದೆ (CAA) ಜಾರಿಯಾಯಿತು. ದೇಶದ ಹಲವು ಭಾಗಗಳಲ್ಲಿ ಪ್ರತಿಭಟನೆಗಳು ನಡೆದವು. ಶಾಹೀನ್ ಬಾಗ್ ಹೋರಾಟ, ವಿದ್ಯಾರ್ಥಿಗಳ ಪ್ರತಿಭಟನೆಗಳು ಮೋದಿ ಸರ್ಕಾರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದವು.

2020ರಲ್ಲಿ ಬಂದ ಕೋವಿಡ್-19 ಮಹಾಮಾರಿ!
ಕೋವಿಡ್ ಮಹಾಮಾರಿ ದೇಶದ ರಾಜಕೀಯ, ಆರ್ಥಿಕತೆಯನ್ನು ತಲೆಕೆಳಗಾಗಿಸಿತು. ಲಾಕ್‌ಡೌನ್ ನಿರ್ಧಾರ, ವಲಸೆ ಕಾರ್ಮಿಕರ ಸಂಕಷ್ಟ, ಆರೋಗ್ಯ ವ್ಯವಸ್ಥೆಯ ಒತ್ತಡ, ಸರ್ಕಾರ ಭಾರೀ ಟೀಕೆಗೆ ಗುರಿಯಾಯಿತು. ಆದರೂ ಲಸಿಕೆ ಅಭಿಯಾನ ಮತ್ತು ಉಚಿತ ಆಹಾರ ಯೋಜನೆಗಳ ಮೂಲಕ ಮೋದಿ ಸರ್ಕಾರ ತನ್ನ ಹಿಡಿತ ಉಳಿಸಿಕೊಂಡಿತು. 2020ರಲ್ಲಿ ಜಾರಿಗೊಂಡ ಮೂರು ಕೃಷಿ ಕಾನೂನುಗಳು ಉತ್ತರ ಭಾರತದಲ್ಲಿ ಭಾರೀ ರೈತ ಹೋರಾಟಕ್ಕೆ ಕಾರಣವಾದವು. ಒಂದು ವರ್ಷಕ್ಕೂ ಹೆಚ್ಚು ಕಾಲ ನಡೆದ ಹೋರಾಟದ ನಂತರ, ಮೋದಿ ಸರ್ಕಾರ ಕಾನೂನುಗಳನ್ನು ಹಿಂತೆಗೆದುಕೊಳ್ಳಬೇಕಾಯಿತು. ಇದು ಮೋದಿ ಆಡಳಿತದ ಅಪರೂಪದ ಹಿನ್ನಡೆಯಾಗಿ ಗುರುತಿಸಲಾಯಿತು.

ಪ್ರತಿಪಕ್ಷಗಳ ಒಕ್ಕೂಟ ಮತ್ತು 2024 ಚುನಾವಣೆ!
ಈ ನಡುವೆ ಕಾಂಗ್ರೆಸ್ ಮತ್ತು ಇತರ ಪ್ರತಿಪಕ್ಷಗಳು ಮೋದಿ ವಿರುದ್ಧ ಏಕತೆ ಎಂಬ ಘೋಷಣೆಯೊಂದಿಗೆ INDIA ಮೈತ್ರಿಕೂಟ ರಚಿಸಿತು. ರಾಹುಲ್ ಗಾಂಧಿಯ ಭಾರತ್ ಜೋಡೋ ಯಾತ್ರೆ ಕಾಂಗ್ರೆಸ್‌ಗೆ ಹೊಸ ಜೀವ ತುಂಬುವ ಪ್ರಯತ್ನವಾಗಿತ್ತು. ಆದರೆ ನಾಯಕತ್ವದ ಗೊಂದಲ ಮತ್ತು ಪ್ರಾದೇಶಿಕ ಭಿನ್ನಾಭಿಪ್ರಾಯಗಳು ಮೈತ್ರಿಕೂಟವನ್ನು ದುರ್ಬಲಗೊಳಿಸಿದವು. 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಸಂಪೂರ್ಣ ಬಹುಮತ ಸ್ವಲ್ಪ ಕಡಿಮೆಯಾದರೂ, ಎನ್​​ಡಿಎ ಸರ್ಕಾರ ರಚಸಿತು. ಮೋದಿ ಮೂರನೇ ಬಾರಿ ಪ್ರಧಾನಿಯಾದರು ಇದು ನೆಹರೂ ನಂತರದ ದೊಡ್ಡ ರಾಜಕೀಯ ಸಾಧನೆ.

2025ರ ಹೊತ್ತಿಗೆ; ಹೊಸ ಪ್ರಶ್ನೆ!
2025ರ ವೇಳೆಗೆ ಭಾರತ ರಾಜಕೀಯ ಹೊಸ ಹಂತಕ್ಕೆ ಬಂದಿದೆ. ಬಿಜೆಪಿ ಇನ್ನೂ ಕೇಂದ್ರದ ಪ್ರಬಲ ಶಕ್ತಿ. ಕಾಂಗ್ರೆಸ್ ನಿಧಾನವಾಗಿ ಪುನರ್‌ಸಂಘಟನೆಯ ಪ್ರಯತ್ನದಲ್ಲಿದೆ. ಆಮ್ ಆದ್ಮಿ ಪಕ್ಷ, ಟಿಎಂಸಿ, ಡಿಎಂಕೆ ಸೇರಿ ಮೊದಲಾದ ಪ್ರಾದೇಶಿಕ ಪಕ್ಷಗಳು ತಮ್ಮ ತಮ್ಮ ರಾಜ್ಯಗಳಲ್ಲಿ ಬಲವಾಗಿ ನಿಂತಿವೆ. 25 ವರ್ಷಗಳ ಈ ಪಯಣದಲ್ಲಿ, ಕಾಂಗ್ರೆಸ್ ಅಧಿಪತ್ಯದಿಂದ ಮೋದಿ ಕೇಂದ್ರಿತ ರಾಜಕೀಯದವರೆಗೆ, ಭಾರತ ಬಹಳ ದೂರ ಬಂದಿದೆ. ಈಗ ಮುಂದಿನ 25 ವರ್ಷಗಳ ರಾಜಕಾರಣ ಮುನ್ನೋಟವಷ್ಟೇ ನಮ್ಮ ಮುಂದೆ ಉಳಿದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries