ನವದೆಹಲಿ: ರಾಷ್ಟ್ರೀಯ ಪಿಂಚಣಿ (National Pension System) ಯೋಜನೆಯ ಕಾನೂನಿಗೆ ಸಂಬಂಧಿಸಿದಂತೆ ಸರಕಾರ ಹಲವಾರು ಸಡಿಲಿಕೆಗಳನ್ನು (Relaxation) ನೀಡಿದೆ. ಹೂಡಿಕೆದಾರರು ಈ ಯೋಜನೆಯಿಂದ ಹೊರಬರುವ ಮತ್ತು ಹಣ ಹಿಂಪಡೆಯವ ವಿಧಾನಗಳನ್ನು ಸರಳಗೊಳಿಸಲಾಗಿದೆ.
ಈ ಮೂಲಕ ಪಿಂಚಣಿ ಯೋಜನೆಯನ್ನು ಇನ್ನಷ್ಟು ಆಕರ್ಷಣೀಯವನ್ನಾಗಿ ಮಾಡಲಾಗಿದೆ ಮತ್ತು ಹಿಂಪಡೆಯುವ ಮೊತ್ತದಲ್ಲೂ ಸುಧಾರಣೆ ಮಾಡಲಾಗಿದೆ. ರಾಷ್ಟ್ರೀಯ ಪಿಂಚಣಿ ಯೋಜನೆ (NPS) ಸಶಸ್ತ್ರ ಪಡೆಗಳನ್ನು ಹೊರತುಪಡಿಸಿ ಸಾರ್ವಜನಿಕ, ಖಾಸಗಿ ಹಾಗೂ ಅಸಂಘಟಿತ ವಲಯಗಳ ಎಲ್ಲ ಉದ್ಯೋಗಿಗಳಿಗೆ ಲಭ್ಯವಿದೆ. 2004ರಿಂದ ಕೇಂದ್ರ ಸರ್ಕಾರದ ನೌಕರರಿಗೆ ಈ ಯೋಜನೆ ಕಡ್ಡಾಯವಾಗಿದ್ದು, ಉದ್ಯೋಗದಲ್ಲಿರುವ ಅವಧಿಯಲ್ಲಿ ನಿಯಮಿತವಾಗಿ ಪಿಂಚಣಿ ಖಾತೆಗೆ ಹೂಡಿಕೆ ಮಾಡುವಂತೆ ಪ್ರೋತ್ಸಾಹಿಸುತ್ತದೆ. ನಿವೃತ್ತಿಯ ಬಳಿಕ ಚಂದಾದಾರರು ನಿಗದಿತ ಶೇಕಡಾವಾರು ಮೊತ್ತವನ್ನು ಒಟ್ಟುಗೂಡಿಸಿ ಪಡೆದುಕೊಳ್ಳಬಹುದಾಗಿದ್ದು, ಉಳಿದ ಹಣವನ್ನು ಮಾಸಿಕ ಪಿಂಚಣಿಯಾಗಿ ಪಡೆಯುವ ವ್ಯವಸ್ಥೆ ಈ ಯೋಜನೆಯಲ್ಲಿ ಇದೆ.
ಇದು ಸರಕಾರೇತರ ಉದ್ಯೋಗಿಗಳಿಗೆ ಅತೀ ಹೆಚ್ಚು ಪ್ರಯೋಜನಕಾರಿ ಎಂದು ವಿಶ್ಲೇಷಿಸಲಾಗುತ್ತಿದೆ. ಪಿ.ಎಫ್.ಆರ್.ಡಿ.ಎ. (ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ನಿರ್ಗಮನ ಮತ್ತು ಹಿಂಪಡೆಯುವಿಕೆ) ತಿದ್ದುಪಡಿ ನಿಯಂತ್ರಕ 2025ರಲ್ಲಿರುವ ಪ್ರಮುಖ ಬದಲಾವಣೆಗಳ ಅಂಶಗಳು ಇಲ್ಲಿವೆ.
ಇದರಲ್ಲಿ ಪ್ರಮುಖವಾದುದು ನಿವೃತ್ತಿಯ ಸಮಯದಲ್ಲಿ ನಿರ್ದಿಷ್ಟ ಜಮಾ ಮೊತ್ತದ ಕಡ್ಡಾಯ ಖರೀದಿ. ಇದಕ್ಕೂ ಮೊದಲು ಎನ್.ಪಿ.ಎಸ್.ಗೆ ನೋಂದಾಯಿಸಿಕೊಂಡವರು ನಿರ್ದಿಷ್ಟ ಮೊತ್ತವನ್ನು ಖರೀದಿಸಲು ತಮ್ಮ ಒಟ್ಟು ಮೊತ್ತದ ಕನಿಷ್ಟ ಶೇ. 40ರಷ್ಟು ವಿನಿಯೋಗಿಸಬೇಕಿತ್ತು. ಇದು ನಿವೃತ್ತಿಯ ಬಳಿಕ ನಿರಂತರ ಪಿಂಚಣಿಯನ್ನು ಒದಗಿಸುತ್ತದೆ.
ಇದೀಗ ಪರಿಷ್ಕೃತ ಕಾನೂನಿನಲ್ಲಿ ಈ ಮೊತ್ತವನ್ನು ಶೇ. 20ಕ್ಕೆ ಇಳಿಸಲಾಗಿದೆ. ಅಂದರೆ ಇದೀಗ ನೋಂದಾವಣಿದಾರರು ತಮ್ಮ ನಿವೃತ್ತಿಯ ಉಳಿಕೆ ಮೊತ್ತದಲ್ಲಿ ಶೇ. 80ರಷ್ಟು ಪಾಲನ್ನು ಒಮ್ಮೆಲೇ ಪಡೆದುಕೊಳ್ಳಬಹುದಾಗಿದೆ. ಇದು ನಿವೃತ್ತಿಯ ಬಳಿಕ ಅವರು ತಮ್ಮ ಮೊತ್ತವನ್ನು ಹೇಗೆ ವಿನಿಯೋಗಿಸುತ್ತಾರೆ ಎಂಬುದರ ಮೇಲೆ ಅವರಿಗೆ ಸಂಪೂರ್ಣ ನಿಯಂತ್ರಣವನ್ನು ನೀಡುತ್ತದೆ.
ಪರಿಷ್ಕೃತ ಕಾನೂನಿನಡಿ 8 ಲಕ್ಷ ರುಪಾಯಿಗಿಂತ ಅಧಿಕ ಮೊತ್ತ ಸಂಗ್ರಹಗೊಂಡಿದ್ದಲ್ಲಿ ಮತ್ತು ಇದು 12 ಲಕ್ಷ ರುಪಾಯಿ ಮೀರದಿದ್ದಲ್ಲಿ ಅಂತವರು 6 ಲಕ್ಷ ರುಪಾಯಿ ಒಮ್ಮೆಗೆ ತೆಗೆಯಬಹುದು. ಉಳಿದ ಮೊತ್ತವನ್ನು ವಾರ್ಷಿಕ ಜಮೆ ಖರೀದಿಗೆ ಬಳಸುವುದು ಕಡ್ಡಾಯ. ಇಲ್ಲಿ ಕನಿಷ್ಠ ವಾರ್ಷಿಕ ಜಮಾ ಮೊತ್ತದ ಅವಧಿ ಆರು ವರ್ಷ.
ಮತ್ತೊಂದು ಪ್ರಮುಖ ಬದಲಾವಣೆಯಲ್ಲಿ, ಎನ್.ಪಿ.ಎಸ್.ಗೆ ನೋಂದಾಯಿಸಿಕೊಂಡ 15 ವರ್ಷಗಳ ಬಳಿಕ ಅಥವಾ 60 ವರ್ಷ ಪ್ರಾಯದಲ್ಲಿ ಸಹಜ ನಿರ್ಗಮನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇದು ನೋಂದಣಿದಾರರಿಗೆ ತಮ್ಮ ನಿವೃತ್ತ ಜೀವನದಲ್ಲಿ ಸರಿಯಾದ ಹಣಕಾಸು ಯೋಜನೆಗೆ ಸಹಕಾರಿಯಾಗಲಿದೆ.
ಇನ್ನು ಹೊಸ ಕಾನೂನಿನ ಪ್ರಕಾರ ಇದೀಗ ನೋಂದಣಿದಾರರು ತಮ್ಮ 85 ವರ್ಷ ಪ್ರಾಯದವರೆಗೆ ಇಲ್ಲಿ ಹೂಡಿಕೆ ಮಾಡಲು ಅವಕಾಶವಿದೆ. ಅವರು ಶೀಘ್ರ ನಿರ್ಗಮನವನ್ನು ಆಯ್ಕೆ ಮಾಡಿಕೊಳ್ಳದೇ ಇದ್ದಲ್ಲಿ ಮಾತ್ರ ಈ ಸೌಲಭ್ಯ ಲಭ್ಯವಾಗಲಿದೆ. ಈ ಮೂಲಕ ಈ ಯೋಜನೆಯಲ್ಲಿ ದೀರ್ಘಕಾಲೀನ ಹೂಡಿಕೆಗೆ ಅವಕಾಶ ಮಾಡಿಕೊಡಲಾಗಿದೆ.

