ನಾಗ್ಪುರ: ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌ಎಸ್) ತನ್ನ ಚಟುವಟಿಕೆಗಳ ಮೂಲಕ ಯುವಕರನ್ನು ಭಾರತೀಯ ಪರಂಪರೆ, ಇತಿಹಾಸ ಹಾಗೂ ಸಂಸ್ಕೃತಿಯೊಂದಿಗೆ ಬೆಸೆಯುವಂತೆ ಮಾಡಿದೆ ಎಂದು ಇಸ್ರೇಲ್ ರಾಜತಾಂತ್ರಿಕ ಅಧಿಕಾರಿ ಯಾನಿವ್ ರೆವಾಚ್ ತಿಳಿಸಿದ್ದಾರೆ.
ನಾಗ್ಪುರದಲ್ಲಿರುವ ಆರ್‌ಎಸ್‌ಎಸ್ ಸಂಸ್ಥಾಪಕ ಡಾ.ಕೇಶವ್ ಬಲಿರಾಮ್ ಹೆಡಗೇವಾರ್ ಅವರ ಸ್ಮರಣಾರ್ಥ ನಿರ್ಮಿಸಲಾಗಿರುವ ಸ್ಮೃತಿ ಮಂದಿರಕ್ಕೆ ಯಾನಿವ್ ರೆವಾಚ್ ಅವರು ಸೋಮವಾರ ಭೇಟಿ ನೀಡಿದ್ದರು. ಈ ವೇಳೆ ಅವರಿಗೆ ಹೆಗ್ಡೆವಾರ್ ಅವರ ಜೀವನ ಮತ್ತು ಕೆಲಸಗಳ ಕುರಿತು ಮಾಹಿತಿ ನೀಡಲಾಗಿದೆ ಎಂದು ಆರ್‌ಎಸ್‌ಎಸ್ ತಿಳಿಸಿದೆ.
'ಆರ್‌ಎಸ್‌ಎಸ್ ಶತಮಾನೋತ್ಸವ ವರ್ಷದಲ್ಲೇ ಅದರ ಮುಖ್ಯಕಚೇರಿಗೆ ಭೇಟಿ ನೀಡಿದ್ದು ನನ್ನ ಸೌಭಾಗ್ಯ. ಸ್ಮೃತಿ ಮಂದಿರವು ಭಾರತದಲ್ಲಿರುವ ಲಕ್ಷಾಂತರ ಯುವಕರಿಗೆ ಸ್ಪೂರ್ತಿಯಾಗಿದೆ' ಎಂದು ಯಾನಿವ್ ರೆವಾಚ್ ಹೇಳಿದ್ದಾರೆ.
ಭಾರತ ಮತ್ತು ಇಸ್ರೇಲ್ ದೇಶಗಳು ತಮ್ಮ ಗಡಿಯಲ್ಲಿ ಭಯೋತ್ಪಾದನೆಯ ವಿರುದ್ಧ ಹೋರಾಟ ಮಾಡುತ್ತಿವೆ ಎಂದು ತಿಳಿಸಿದ್ದಾರೆ.

