ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಮಸೂದೆಯನ್ನು ಮಂಡಿಸಿದರು. ನರೇಗಾ ಕಾಯ್ದೆಯ ಹೆಸರನ್ನು ಬದಲಿಸಿ 'ಪೂಜ್ಯ ಬಾಪು ಗ್ರಾಮೀಣ ರೋಜಗಾರ್ ಯೋಜನೆ' ಎಂಬ ಹೆಸರಿಡಲು ಈ ಮೊದಲು ಕೇಂದ್ರ ಸರ್ಕಾರ ನಿರ್ಧರಿಸಿತ್ತು. ಆದರೆ, ಅಂತಿಮವಾಗಿ ಕೇಂದ್ರವು ನರೇಗಾ ಕಾಯ್ದೆಯನ್ನೇ ಹಿಂಪಡೆಯಲು ಹೊಸ ಮಸೂದೆ ಮಂಡಿಸಿದೆ.
ಈ ಹೊಸ ಮಸೂದೆಯಲ್ಲಿ ವರ್ಷದಲ್ಲಿ 100 ದಿನಗಳ ಕೆಲಸದ ಅವಧಿಯನ್ನು 125 ದಿನಕ್ಕೆ ಹೆಚ್ಚಿಸಲಾಗಿದೆ.
2009ರಲ್ಲಿ ಮಹಾತ್ಮಗಾಂಧಿಗೆ ಗೌರವ ಸೂಚಕವಾಗಿ ಆಗಿನ ಯುಪಿಎ ಸರ್ಕಾರ ನರೇಗಾ ಯೋಜನೆಗೆ ಮಹಾತ್ಮ ಗಾಂಧಿ ಹೆಸರನ್ನು ಸೇರಿಸಿತ್ತು. ಆಗಿನ ಪ್ರಧಾನಿ ಮನಮೋಹನ ಸಿಂಗ್ ಅವರು ಈ ಘೋಷಣೆ ಮಾಡಿದ್ದರು.
ಕೇಂದ್ರ ಸರ್ಕಾರ ಮಂಡಿಸಿರುವ ಹೊಸ ಮಸೂದೆಯಲ್ಲಿ ಒಂದಷ್ಟು ಬದಲಾವಣೆಗಳನ್ನೂ ಮಾಡಿದೆ. ಅವುಗಳ ಬಗ್ಗೆ ಮಾಹಿತಿ ಇಲ್ಲಿದೆ.




ಈ ಮಸೂದೆ ಉದ್ಯೋಗದ ಸೃಷ್ಟಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ದೀರ್ಘಕಾಲದ ಸೌಕರ್ಯಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ ಎಂದು ಕೇಂದ್ರ ಹೇಳಿದೆ. ಅದರಲ್ಲಿ ಮುಖ್ಯವಾಗಿ ನೀರಿನ ಕೊರತೆಯನ್ನು ನೀಗಿಸುವ ಕೆಲಸಗಳು, ಮೂಲಸೌಕರ್ಯಗಳು ಮತ್ತು ದೈನಂದಿನ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಹಾಗೂ ಪ್ರಕೃತಿ ವಿಕೋಪಗಳನ್ನು ತಗ್ಗಿಸುವ ಕ್ರಮಗಳ ಜಾರಿಗೆ ಒತ್ತು ನೀಡಲಾಗಿದೆ.

