ಭೋಪಾಲ್: "ಭಾರತದ ಅತ್ಯಂತ ಸ್ವಚ್ಛ ನಗರ" ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು 14-15 ಜನ ಸಾವಿನ ನಂತರ ಡಾ. ಮೋಹನ್ ಯಾದವ್ ನೇತೃತ್ವದ ಮಧ್ಯ ಪ್ರದೇಶದ ಸರ್ಕಾರದ ವಿರುದ್ಧ ಬಿಜೆಪಿಯ ಫೈರ್‌ಬ್ರಾಂಡ್ ಹಿರಿಯ ನಾಯಕಿ ಉಮಾ ಭಾರತಿಯವರು ಶುಕ್ರವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಇಂದೋರ್‌ನ ಭಾಗೀರಥಪುರ ಪ್ರದೇಶದಲ್ಲಿ 14-15 ಜೀವಗಳನ್ನು ಬಲಿ ಪಡೆದಿರುವ ದುರಂತದ ಕುರಿತು X ನಲ್ಲಿ ಸರಣಿ ಪೋಸ್ಟ್ ಮಾಡಿರುವ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಉಮಾ ಭಾರತಿ ಅವರು, ಈ ದುರಂತಕ್ಕೆ ಸರ್ಕಾರ ಮತ್ತು ಜಿಲ್ಲಾಡಳಿತವನ್ನು ನೇರ ಹೊಣೆಗಾರರನ್ನಾಗಿ ಮಾಡಿದ್ದಾರೆ.
"2025 ರ ಕೊನೆಯಲ್ಲಿ ಇಂದೋರ್‌ನಲ್ಲಿ ಕಲುಷಿತ ನೀರಿನಿಂದ ಉಂಟಾದ ಸಾವುಗಳು ನಮ್ಮ ರಾಜ್ಯ, ನಮ್ಮ ಸರ್ಕಾರ ಮತ್ತು ನಮ್ಮ ಇಡೀ ವ್ಯವಸ್ಥೆ ನಾಚಿಕೆಪಡುವಂತೆ ಮಾಡಿದೆ. ಇದು ಕರಾಳ ಘಟನೆ. ಅತ್ಯಂತ ಸ್ವಚ್ಛ ಎಂದು ಪ್ರಶಸ್ತಿ ಪಡೆದ ನಗರದಲ್ಲಿ, ಅಂತಹ ಕೊಳಕು - ವಿಷ ಮಿಶ್ರಿತ ನೀರು ಹಲವಾರು ಜೀವಗಳನ್ನು ಬಲಿ ಪಡೆದಿರುವುದು ನಾಚಿಕೆಗೇಡಿನ ಸಂಗತಿ. ಸಾವಿನ ಸಂಖ್ಯೆ ಹೆಚ್ಚುತ್ತಿದೆ" ಎಂದು ಉಮಾ ಭಾರ್ತಿ ಬರೆದಿದ್ದಾರೆ.
ಇನ್ನು ಪರಿಹಾರದ ವಿಚಾರಕ್ಕೂ ಸ್ವಪಕ್ಷದ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಮಾಜಿ ಸಿಎಂ, "ಮನುಷ್ಯನ ಜೀವದ ಬೆಲೆ 2 ಲಕ್ಷ ರೂ. ಅಲ್ಲ. ಕುಟುಂಬಗಳು ಶಾಶ್ವತವಾಗಿ ದುಃಖದಲ್ಲಿ ಬದುಕುತ್ತವೆ. ಈ ಪಾಪವು ಆಳವಾದ ಪಶ್ಚಾತ್ತಾಪವನ್ನು ಬಯಸುತ್ತದೆ. ಬಲಿಪಶುಗಳಿಗೆ ಕ್ಷಮೆ ಕೇಳಬೇಕು ಮತ್ತು ತಪ್ಪಿತಸ್ಥರೆಲ್ಲರಿಗೂ ಗರಿಷ್ಠ ಶಿಕ್ಷೆ ನೀಡಬೇಕು" ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
1990ರ ದಶಕದ ಅಯೋಧ್ಯಾ ದೇವಾಲಯ ಚಳವಳಿಯ ಪ್ರಮುಖ ನಾಯಕರಲ್ಲಿ ಒಬ್ಬರಾದ ಉಮಾ ಭಾರತಿ, ಈ ಬಿಕ್ಕಟ್ಟು ಪ್ರಸ್ತುತ ರಾಜ್ಯ ನಾಯಕತ್ವಕ್ಕೆ ನಿರ್ಣಾಯಕ ಕ್ಷಣ. "ಇದು ಮೋಹನ್ ಯಾದವ್ ಜಿ ಅವರಿಗೆ ಪರೀಕ್ಷೆಯ ಸಮಯ" ಎಂದು ಅವರು ಬರೆದಿದ್ದಾರೆ.

