HEALTH TIPS

ರಾಜ್ಯಸಭೆ: ಮಾರ್ಚ್ 16ಕ್ಕೆ ಚುನಾವಣೆ, ಹಿಗ್ಗಲಿದೆ ಎನ್‌ಡಿಎ ಮೈತ್ರಿ ಬಲ

ನವದೆಹಲಿ: ಏಪ್ರಿಲ್‌ನಲ್ಲಿ ತೆರವಾಗಲಿರುವ 10 ರಾಜ್ಯಗಳ 37 ರಾಜ್ಯಸಭಾ ಸ್ಥಾನಗಳ ಚುನಾವಣೆಗೆ ಭಾರತೀಯ ಚುನಾವಣಾ ಆಯೋಗ ಬುಧವಾರ ವೇಳಾಪಟ್ಟಿ ಪ್ರಕಟಿಸಿದ್ದು, ಮಾ.16ರಂದು ಮತದಾನ ನಡೆಯಲಿದೆ.

ಮಹಾರಾಷ್ಟ್ರ, ಬಿಹಾರ ಹಾಗೂ ಒಡಿಶಾ ವಿಧಾನಸಭಾ ಚುನಾವಣೆಗಳಲ್ಲಿ ಪ್ರಚಂಡ ಜಯ ಗಳಿಸಿರುವುದರಿಂದ ಬಿಜೆಪಿ ನೇತೃತ್ವದ ಎನ್‌ಡಿಎ ಕೂಟವು ರಾಜ್ಯಸಭಾ ಚುನಾವಣೆಯಲ್ಲಿ ಗಣನೀಯ ಲಾಭ ಗಳಿಸಬಹುದು ಎಂದು ಹೇಳಲಾಗಿದೆ.

ಎನ್‌ಡಿಎ ಮೈತ್ರಿಕೂಟದ 15 ಸದಸ್ಯರು ಹಾಗೂ ಇಂಡಿಯಾ ಮೈತ್ರಿಕೂಟದ 19 ಸದಸ್ಯರ ಅವಧಿ ಏಪ್ರಿಲ್‌ನಲ್ಲಿ ಮುಗಿಯಲಿದೆ. ಎನ್‌ಡಿಎ 25 ಸ್ಥಾನಗಳಲ್ಲಿ ಗೆಲ್ಲುವುದು ಬಹುತೇಕ ಖಚಿತ. ಇಂಡಿಯಾ ಬಣವು 10 ಸ್ಥಾನಗಳನ್ನು ಗಳಿಸಬಹುದು.

ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌, ಎನ್‌ಸಿಪಿ (ಎಸ್‌ಪಿ) ಹಾಗೂ ಶಿವಸೇನಾ (ಯುಬಿಟಿ) ಮೈತ್ರಿಕೂಟದ ನಾಲ್ವರು ಸದಸ್ಯರು ನಿವೃತ್ತರಾಗುತ್ತಿದ್ದಾರೆ. 2024ರ ವಿಧಾನಸಭಾ ಚುನಾವಣೆಯಲ್ಲಿ ಮೈತ್ರಿಕೂಟವು ಹೀನಾಯ ಪ್ರದರ್ಶನ ನೀಡಿತ್ತು. ಯಾವುದೇ ಪಕ್ಷವು ಸ್ವತಂತ್ರವಾಗಿ ಒಂದು ಸ್ಥಾನ ಗೆಲ್ಲುವಷ್ಟು ಶಾಸಕರನ್ನು ಹೊಂದಿಲ್ಲ. ಮೂರೂ ಪಕ್ಷಗಳು ಜತೆಗೂಡಿ ಸ್ಪರ್ಧಿಸಿದರಷ್ಟೇ ಒಂದು ಸ್ಥಾನ ಗೆಲ್ಲಬಹುದು. ಶರದ್‌ ಪವಾರ್‌ ಅವರು ಮೈತ್ರಿಕೂಟದಿಂದ ಮತ್ತೆ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿದರೆ, ಆ ಸ್ಥಾನ ಅವರ ಪಾಲಾಗಲಿದೆ.

ಬಿಹಾರದಲ್ಲಿ ಐದು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಜೆಡಿಯು ಮತ್ತು ಆರ್‌ಜೆಡಿಯ ತಲಾ ಇಬ್ಬರು ಹಾಗೂ ಆರ್‌ಎಲ್‌ಎಂನ ಒಬ್ಬರು ನಿವೃತ್ತರಾಗುತ್ತಿದ್ದಾರೆ. ಬಿಜೆಪಿ ಹಾಗೂ ಜೆಡಿಯು ಆರಾಮವಾಗಿ ತಲಾ ಎರಡು ಸ್ಥಾನಗಳನ್ನು ಗೆಲ್ಲಲಿವೆ. ಆದರೆ, ಇಂಡಿಯಾ ಮೈತ್ರಿಕೂಟವು ಒಂದು ಸ್ಥಾನ ಗೆಲ್ಲಲು ಹೆಣಗಾಡಬೇಕಾಗುತ್ತದೆ. ಏಕೆಂದರೆ, ಶಾಸಕರ ಬಲಾಬಲದ ಆಧಾರದಲ್ಲಿ ಒಂದು ಸ್ಥಾನ ಗೆಲ್ಲಲು ಮೈತ್ರಿಕೂಟಕ್ಕೆ ಆರು ಮತಗಳ ಕೊರತೆ ಉಂಟಾಗಿದೆ.

ಒಡಿಶಾದಲ್ಲಿ ನಾಲ್ಕು ಸ್ಥಾನಗಳಲ್ಲಿ ಬಿಜೆಪಿ ಮೂರು ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ. ನಾಲ್ಕನೇ ಸ್ಥಾನ ಬಿಜೆಡಿ ಪಾಲಾಗಬಹುದು. ಜಂಟಿ ಸ್ವತಂತ್ರ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಬಿಜೆಡಿ ಜತೆಗೆ ಮಾತುಕತೆ ನಡೆಸುವುದಾಗಿ ಕಾಂಗ್ರೆಸ್‌ ಹೇಳಿದೆ.

ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ನಾಲ್ಕು ಸ್ಥಾನಗಳನ್ನು ಉಳಿಸಿಕೊಳ್ಳಲು ಸಜ್ಜಾಗಿದ್ದರೆ, ಬಿಜೆಪಿ ಐದನೇ ಸ್ಥಾನ ಪಡೆಯುವ ಸಂಭವ ಇದೆ. ಕಳೆದ ಚುನಾವಣೆಯಲ್ಲಿ ಸಿಪಿಎಂ ಒಂದು ಸ್ಥಾನ ಗೆದ್ದಿತ್ತು. ಈ ಸಲ ಆ ಸ್ಥಾನವನ್ನು ಕಳೆದುಕೊಳ್ಳಲಿದೆ. ಸಿಪಿಎಂ ನೇತೃತ್ವದ ಎಡರಂಗವು ಪ್ರಸ್ತುತ ಪಶ್ಚಿಮ ಬಂಗಾಳದಿಂದ ಲೋಕಸಭಾ ಸದಸ್ಯರನ್ನು ಹೊಂದಿಲ್ಲ. ವಿಧಾನಸಭೆಯಲ್ಲಿಯೂ ಪ್ರಾತಿನಿಧ್ಯ ಹೊಂದಿಲ್ಲ.

ತಮಿಳುನಾಡಿನಲ್ಲಿ ನಾಲ್ಕು ಸ್ಥಾನಗಳನ್ನು ಉಳಿಸಿಕೊಳ್ಳಲು ಡಿಎಂಕೆ ಸಜ್ಜಾಗಿದೆ. ಇನ್ನೊಂದೆಡೆ, ಒಂದು ಸ್ಥಾನಕ್ಕಾಗಿ ಕಾಂಗ್ರೆಸ್‌ ಬೇಡಿಕೆ ಇಟ್ಟಿದೆ. ವಿಧಾನಸಭಾ ಚುನಾವಣೆಯ ಸೀಟು ಹಂಚಿಕೆ ಸಂಬಂಧ ಮೈತ್ರಿಕೂಟದಲ್ಲಿ ಬಿಕ್ಕಟ್ಟು ಉಂಟಾಗಿದೆ. ಇಂತಹ ಸನ್ನಿವೇಶದಲ್ಲಿ, ಕಾಂಗ್ರೆಸ್‌ನ ಬೇಡಿಕೆಗೆ ಡಿಎಂಕೆ ಒಪ್ಪುತ್ತದೆಯೇ ಎಂಬುದನ್ನು ಕಾದು ನೋಡಬೇಕು. ಎಐಎಡಿಎಂಕೆ ಮೈತ್ರಿಕೂಟ ಎರಡು ಸ್ಥಾನಗಳಲ್ಲಿ ಗೆಲ್ಲಲಿದೆ. ಇದರಲ್ಲಿ ಒಂದು ಸ್ಥಾನದ ಮೇಲೆ ಬಿಜೆಪಿ ಕಣ್ಣಿಟ್ಟಿದೆ. ಆದರೆ, ಎರಡನೇ ಸ್ಥಾನವನ್ನು ಪ್ರಸ್ತುತ ತಮಿಳು ಮಾನಿಲಾ ಕಾಂಗ್ರೆಸ್‌ನ ಜಿ.ಕೆ. ವಾಸನ್ ಹೊಂದಿದ್ದಾರೆ.

ಹರಿಯಾಣದಲ್ಲಿ ಬಿಜೆಪಿಯು ಎರಡು ಸ್ಥಾನಗಳಲ್ಲಿ ಒಂದನ್ನು ಕಳೆದುಕೊಳ್ಳಲಿದೆ. ಛತ್ತೀಸಗಢದಲ್ಲಿ ಕಾಂಗ್ರೆಸ್‌ಗೆ ಇದೇ ಪರಿಸ್ಥಿತಿ ಇದೆ. ತೆಲಂಗಾಣದಲ್ಲಿ ಕಾಂಗ್ರೆಸ್ ಮತ್ತು ಬಿಆರ್‌ಎಸ್ ತಲಾ ಒಂದು ಸ್ಥಾನ ಗೆಲ್ಲಲಿವೆ. ಕಾಂಗ್ರೆಸ್‌ನಿಂದ ಅಭಿಷೇಕ್‌ ಮನು ಸಿಂಘ್ವಿ ಅವರನ್ನು ಮರುನಾಮಕರಣ ಮಾಡುವ ಸಾಧ್ಯತೆಯಿದೆ.

ಯಾವ ರಾಜ್ಯದಿಂದ ಎಷ್ಟು ಸದಸ್ಯರು ನಿವೃತ್ತಿ?

ಮಹಾರಾಷ್ಟ್ರ (7), ತಮಿಳುನಾಡು (6), ಬಿಹಾರ ಮತ್ತು ಪಶ್ಚಿಮ ಬಂಗಾಳ (ತಲಾ 5), ಒಡಿಶಾ (4), ಅಸ್ಸಾಂ (3), ತೆಲಂಗಾಣ, ಛತ್ತೀಸಗಢ ಮತ್ತು ಹರಿಯಾಣ (ತಲಾ 2) ಮತ್ತು ಹಿಮಾಚಲ ಪ್ರದೇಶ (ಒಂದು ಸ್ಥಾನ).

*ಏಪ್ರಿಲ್‌ 7 ಮತ್ತು 9: ಹಾಲಿ ಸದಸ್ಯರ ಅವಧಿ ಮುಕ್ತಾಯ

ನಿವೃತ್ತರಾಗುತ್ತಿರುವ ಪ‍್ರಮುಖರು

*ಉಪಸಭಾಪತಿ ಹರಿವಂಶ್ (ಜೆಡಿಯು), ಕೇಂದ್ರ ಸಚಿವ ರಾಮದಾಸ್ ಆಠವಳೆ (ಆರ್‌ಪಿಐ-ಎ), ಶರದ್ ಪವಾರ್ (ಎನ್‌ಸಿಪಿ-ಎಸ್‌ಪಿ), ಅಭಿಷೇಕ್ ಮನು ಸಿಂಘ್ವಿ (ಕಾಂಗ್ರೆಸ್), ಎಂ. ತಂಬಿದೊರೆ (ಎಐಎಡಿಎಂಕೆ), ತಿರುಚ್ಚಿ ಶಿವ (ಡಿಎಂಕೆ), ಉಪೇಂದ್ರ ಕುಶ್ವಾಹ (ಆರ್‌ಎಲ್‌ಎಂ), ಸಾಕೇತ್‌ ಗೋಖಲೆ (ಟಿಎಂಸಿ).

ಯಾವ ಪಕ್ಷದಿಂದ ಎಷ್ಟು ಸದಸ್ಯರು ನಿವೃತ್ತಿ

*ಎನ್‌ಡಿಎ ಮೈತ್ರಿಕೂಟ: ಬಿಜೆಪಿ-9, ಜೆಡಿಯು-2, ಆರ್‌ಪಿಐ, ಎಐಎಡಿಎಂಕೆ, ತಮಿಳು ಮನಿಲಾ ಕಾಂಗ್ರೆಸ್ ಮತ್ತು ಆರ್‌ಎಲ್‌ಎಂ; ತಲಾ 1.

*ಇಂಡಿಯಾ ಮೈತ್ರಿಕೂಟ: ಕಾಂಗ್ರೆಸ್, ಡಿಎಂಕೆ ಮತ್ತು ತೃಣಮೂಲ ಕಾಂಗ್ರೆಸ್ (ತಲಾ 4), ಎನ್‌ಸಿಪಿ (ಎಸ್‌ಪಿ) ಮತ್ತು ಆರ್‌ಜೆಡಿ (ತಲಾ 2) ಮತ್ತು ಶಿವಸೇನಾ (ಯುಬಿಟಿ), ಸಿಪಿಐ(ಎಂ) ಮತ್ತು ಪಕ್ಷೇತರ (ತಲಾ 1).

*ಬಿಜೆಡಿ-2, ಬಿಆರ್‌ಎಸ್‌-1.

ಚುನಾವಣಾ ವೇಳಾಪಟ್ಟಿ

ಫೆ.26;ಚುನಾವಣೆಗೆ ಅಧಿಸೂಚನೆ

ಮಾರ್ಚ್ 5;ನಾಮಪತ್ರ ಸಲ್ಲಿಕೆಗೆ ಕೊನೆ ದಿನ

ಮಾರ್ಚ್‌ 6;ನಾಮಪತ್ರ ಪರಿಶೀಲನೆ

ಮಾರ್ಚ್‌ 16 (ಬೆಳಿಗ್ಗೆ 9ರಿಂದ ಸಂಜೆ 4);ಮತದಾನ

ಮಾರ್ಚ್‌ 16 (ಸಂಜೆ 5ರಿಂದ);ಮತ ಎಣಿಕೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries