ನ್ಯೂಯಾರ್ಕ್: ಕಳೆದ ವರ್ಷ(2025) ಪತ್ರಕರ್ತರಿಗೆ ಅತ್ಯಂತ ಮಾರಣಾಂತಿಕ ವರ್ಷವಾಗಿದ್ದು 129 ಪತ್ರಕರ್ತರ ಹತ್ಯೆಯಾಗಿದೆ. ಇದರಲ್ಲಿ 89 ಹತ್ಯೆಗಳಿಗೆ ಇಸ್ರೇಲ್ ಹೊಣೆಯಾಗಿದೆ ಎಂದು ಜಾಗತಿಕ ಮಾಧ್ಯಮ ಕಾವಲು ಸಮಿತಿ `ದಿ ಕಮಿಟಿ ಟು ಪ್ರೊಟೆಕ್ಟ್ ಜರ್ನಲಿಸ್ಟ್'(ಸಿಪಿಜೆ) ಬುಧವಾರ ಬಿಡುಗಡೆಗೊಳಿಸಿದ ವಾರ್ಷಿಕ ವರದಿ ತಿಳಿಸಿದೆ.
ಪತ್ರಕರ್ತರನ್ನು ಇಸ್ರೇಲ್ ನಿರಂತರ ಗುರಿಯಾಗಿಸಿದ ಕಾರಣ 2025 ಸತತ ಎರಡನೇ ವರ್ಷ ದಾಖಲೆ ಪತ್ರಕರ್ತರ ಸಾವಿಗೆ ಸಾಕ್ಷಿಯಾಗಿದೆ. ಪತ್ರಕರ್ತರ ರಕ್ಷಣೆಯಲ್ಲಿ ಸರಕಾರದ ನಾಯಕರ ನಿರಂತರ ವೈಫಲ್ಯದಿಂದಾಗಿ ಭಾರತ ಸೇರಿದಂತೆ ಯುದ್ದ ನಡೆಯುತ್ತಿಲ್ಲದ ರಾಷ್ಟ್ರಗಳಲ್ಲೂ ಪತ್ರಕರ್ತರ ಸಾವು ಸಂಭವಿಸಿದೆ ಎಂದು ವರದಿ ತಿಳಿಸಿದೆ. ಛತ್ತೀಸ್‍ಗಢದ ಬಿಜಾಪುರ್ ಜಿಲ್ಲೆಯಲ್ಲಿ 2025ರ ಜನವರಿ 1ರಂದು ಸಂಭವಿಸಿದ ಪತ್ರಕರ್ತ ಮುಕೇಶ್ ಚಂದ್ರಾಕರ್ ಅವರ ಹತ್ಯೆಯನ್ನೂ ವರದಿ ಉಲ್ಲೇಖಿಸಿದೆ. ರಸ್ತೆ ನಿರ್ಮಾಣ ಯೋಜನೆಯಲ್ಲಿ ಅವ್ಯವಹಾರದ ಬಗ್ಗೆ ವರದಿ ಮಾಡಿದ್ದಕ್ಕಾಗಿ ಚಂದ್ರಾಕರ್ ಅವರನ್ನು ಹತ್ಯೆ ಮಾಡಿರುವುದಾಗಿ ಆರೋಪಿಸಲಾಗಿದೆ. ಗುತ್ತಿಗೆದಾರರಿಗೆ ಸಂಬಂಧಿಸಿದ ಸ್ಥಳದಲ್ಲಿದ್ದ ತ್ಯಾಜ್ಯದ ತೊಟ್ಟಿಯಲ್ಲಿ ಚಂದ್ರಾಕರ್ ಮೃತದೇಹ ಪತ್ತೆಯಾಗಿತ್ತು.
ಸುಡಾನ್‍ನಲ್ಲಿ 9 ಪತ್ರಕರ್ತರು, ಉಕ್ರೇನ್‍ನಲ್ಲಿ 4 ಪತ್ರಕರ್ತರ ಹತ್ಯೆಯಾಗಿದೆ. ವಿಶ್ವದಾದ್ಯಂತ ಹೆಚ್ಚುತ್ತಿರುವ ಸಂಘರ್ಷದ ಸಂದರ್ಭದಲ್ಲಿ ಪತ್ರಕರ್ತರ ಬದುಕಿನ ಬಗ್ಗೆ ಮತ್ತು ಅವರನ್ನು ರಕ್ಷಿಸಲು ಉದ್ದೇಶಿಸಿರುವ ಅಂತಾರಾಷ್ಟ್ರೀಯ ಕಾನೂನುಗಳ ಬಗ್ಗೆ ಇಸ್ರೇಲ್ ಅಪಾರ ನಿರ್ಲಕ್ಷ್ಯ ತೋರುತ್ತಿದೆ. ಅನೇಕ ಸಮಕಾಲೀನ ಪುರಾವೆಗಳು ಈಗ ನಾಶವಾಗಿರುವುದರಿಂದ ಗಾಝಾದಲ್ಲಿ ಇಸ್ರೇಲ್ ಉದ್ದೇಶಪೂರ್ವಕವಾಗಿ ಗುರಿಯಾಗಿಸಿದ ಫೆಲೆಸ್ತೀನಿಯನ್ ಪತ್ರಕರ್ತರ ಸಂಖ್ಯೆ ಎಂದಿಗೂ ತಿಳಿಯದಿರಬಹುದು ಎಂದು ವರದಿ ಹೇಳಿದೆ.
ಮಾಧ್ಯಮದ ಮೇಲಿನ ದಾಳಿಗಳು ಇತರ ಸ್ವಾತಂತ್ರ್ಯಗಳ ಮೇಲಿನ ದಾಳಿಯ ಪ್ರಮುಖ ಸೂಚಕವಾಗಿದೆ ಮತ್ತು ಈ ಹತ್ಯೆಗಳನ್ನು ತಡೆಗಟ್ಟಲು ಮತ್ತು ಅಪರಾಧಿಗಳನ್ನು ಶಿಕ್ಷಿಸಲು ಇನ್ನೂ ಹೆಚ್ಚಿನದನ್ನು ಮಾಡಬೇಕಿದೆ. ಸುದ್ದಿಯನ್ನು ವರದಿ ಮಾಡಿದ್ದಕ್ಕಾಗಿ ಪತ್ರಕರ್ತರ ಹತ್ಯೆಯಾದಾಗ ನಮಗೆಲ್ಲರಿಗೂ ಅಪಾಯವಿದೆ' ಎಂದು `ಸಿಪಿಜೆ'ಯ ಸಿಇಒ ಜೂಡಿ ಗಿನ್ಸ್‍ಬರ್ಗ್ ಹೇಳಿದ್ದಾರೆ.

