ಜೆರುಸಲೆಮ್: ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರುವರಿ 25 ರಿಂದ 26ರವರೆಗೆ ಎರಡು ದಿನಗಳ ಕಾಲ ಇಸ್ರೇಲ್ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಮೂಲಗಳು ಸೋಮವಾರ ತಿಳಿಸಿವೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಭಾನುವಾರ ನಡೆದ ಅಮೆರಿಕದ ಯಹೂದಿ ಸಂಘಟನೆಗಳ ಮುಖ್ಯಸ್ಥರ ಸಮ್ಮೇಳನದಲ್ಲಿ ಮಾತನಾಡುತ್ತಾ, ಮೋದಿ ಅವರ ಭೇಟಿಯನ್ನು ಮೊದಲು ಬಹಿರಂಗಪಡಿಸಿದ್ದಾರೆ.
'ಮುಂದಿನ ವಾರ ಇಲ್ಲಿಗೆ ಆಗಮಿಸಲಿರುವ ನರೇಂದ್ರ ಮೋದಿ ಅವರು ಸಂಸತ್ ಉದ್ದೇಶಿಸಿ ಮಾತನಾಡಲಿದ್ದಾರೆ' ಎಂದು ನೆತನ್ಯಾಹು ಅವರು ಹೇಳಿದ್ದಾರೆ.
'ಇಸ್ರೇಲ್ ಮತ್ತು ಭಾರತದ ನಡುವೆ ಅತ್ಯದ್ಭುತ ಮೈತ್ರಿ ಬೆಸೆದುಕೊಂಡಿದೆ. ನಾವು ಎಲ್ಲ ಬಗೆಯ ಸಹಕಾರ ಕುರಿತಂತೆ ಚರ್ಚಿಸಲಿದ್ದೇವೆ. ಭಾರತ ಇಂದು ಸಣ್ಣ ರಾಷ್ಟ್ರವಾಗಿ ಉಳಿದಿಲ್ಲ. 140 ಕೋಟಿ ಜನರನ್ನು ಹೊಂದಿದೆ. ಅತ್ಯಂತ ಪ್ರಬಲ ಮತ್ತು ಪ್ರಖ್ಯಾತ ದೇಶವಾಗಿದೆ' ಎಂದು ಬಣ್ಣಿಸಿದರು.

