ವಾಷಿಂಗ್ಟನ್: ಒಂದು ವೇಳೆ ಅಮೆರಿಕ ಮತ್ತು ಇರಾನ್ ನಡುವಿನ ಪರಮಾಣು ಮಾತುಕತೆ ವಿಫಲವಾದರೆ ಇರಾನ್‍ನ ಬ್ಯಾಲಿಸ್ಟಿಕ್ ಕ್ಷಿಪಣಿ ಯೋಜನೆಯ ಮೇಲಿನ ಇಸ್ರೇಲ್ ದಾಳಿಯನ್ನು ಬೆಂಬಲಿಸುವುದಾಗಿ ಕಳೆದ ಡಿಸೆಂಬರ್ ನಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜೊತೆ ನಡೆಸಿದ ಸಭೆಯಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್ ಹೇಳಿದ್ದರು ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿ ಸಿಬಿಎಸ್ ನ್ಯೂಸ್ ವರದಿ ಮಾಡಿದೆ.
ಒಂದು ವೇಳೆ ದಾಳಿ ನಡೆದರೆ ಇಸ್ರೇಲ್‍ಗೆ ಯಾವ ರೀತಿಯಲ್ಲಿ ಸಹಾಯ ಮಾಡಬಹುದು ಎಂಬ ಬಗ್ಗೆ ಅಮೆರಿಕದ ರಾಷ್ಟ್ರೀಯ ಭದ್ರತಾ ವ್ಯವಸ್ಥೆಯೊಳಗೆ ನಡೆದ ಚರ್ಚೆಯಲ್ಲಿ ಪರಿಶೀಲನೆ ನಡೆಸಲಾಗಿದೆ. ಉನ್ನತ ಮಿಲಿಟರಿ ಮತ್ತು ಗುಪ್ತಚರ ಅಧಿಕಾರಿಗಳು ಪಾಲ್ಗೊಂಡಿದ್ದ ಸಭೆಯಲ್ಲಿನ ಚರ್ಚೆಗಳು ಅಮೆರಿಕ ಯಾವ ಬೆಂಬಲವನ್ನು ನೀಡಬಹುದು ಎಂಬ ಬಗ್ಗೆ ಹೆಚ್ಚು ಕೇಂದ್ರೀಕೃತಗೊಂಡಿತ್ತು. ಇಸ್ರೇಲಿ ವಿಮಾನಗಳಿಗೆ ಇಂಧನ ಮರು ತುಂಬಿಸುವುದು, ಸಂಭವನೀಯ ವಿಮಾನ ಮಾರ್ಗದಲ್ಲಿ ದೇಶಗಳಿಂದ ವಿಮಾನ ಹಾರಾಟಕ್ಕೆ ಅನುಮತಿ ಪಡೆಯುವ ಸೂಕ್ಷ್ಮ ವಿಷಯಗಳ ಬಗ್ಗೆ ಚರ್ಚೆ ನಡೆದಿದೆ ಎಂದು ವರದಿ ಹೇಳಿದೆ. ಆದರೆ ಯಾವ ದೇಶಗಳು ತಮ್ಮ ವಾಯುಪ್ರದೇಶಗಳ ಬಳಕೆಗೆ ಅವಕಾಶ ನೀಡಬಹುದು ಎಂಬುದು ಸ್ಪಷ್ಟವಾಗಿಲ್ಲ. ಇರಾನ್‍ನ ಮೇಲೆ ದಾಳಿ ನಡೆಸಲು ಅಥವಾ ಇರಾನ್‍ನಿಂದ ದಾಳಿ ನಡೆಸಲು ತಮ್ಮ ವಾಯುಪ್ರದೇಶ ಬಳಸಲು ಅವಕಾಶ ನೀಡುವುದಿಲ್ಲ ಎಂದು ಜೋರ್ಡಾನ್, ಸೌದಿ ಅರೆಬಿಯಾ ಮತ್ತು ಯುಎಇ ಬಹಿರಂಗವಾಗಿ ಹೇಳಿಕೆ ನೀಡಿವೆ.
ಇರಾನ್‍ನ ಪರಮಾಣು ಕಾರ್ಯಕ್ರಮಗಳ ಬಗ್ಗೆ ಇರಾನ್-ಅಮೆರಿಕ ಪರೋಕ್ಷ ಮಾತುಕತೆ ಪುನರಾರಂಭಗೊಂಡಿರುವ ಸಂದರ್ಭದಲ್ಲಿ ಈ ವರದಿ ಪ್ರಕಟಗೊಂಡಿದೆ.

