HEALTH TIPS

ಸಾವಿರಕ್ಕೂ ಮಿಕ್ಕಿ ಕಾಗೆಗಳ ಹಠಾತ್ ಸಾವು: ತಮಿಳುನಾಡಿನಲ್ಲಿ ಹಕ್ಕಿ ಜ್ವರ ಭೀತಿ, 'ಹೈ ಅಲರ್ಟ್'

ಚೆನ್ನೈ: ತಮಿಳುನಾಡು ರಾಜಧಾನಿ ಚೆನ್ನೈ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ 1,500ಕ್ಕೂ ಹೆಚ್ಚು ಕಾಗೆಗಳು ಮೃತಪಟ್ಟಿದ್ದು, ಹಕ್ಕಿ ಜ್ವರ ಹರಡುವ ಭೀತಿ ಎದುರಾಗಿದೆ. ಹೀಗಾಗಿ ರಾಜ್ಯದಾದ್ಯಂತ ಸರ್ಕಾರ 'ಹೈ ಅಲರ್ಟ್' ಘೋಷಿಸಿದೆ.

ಕಾಗೆಗಳಿಗೆ ಹಕ್ಕಿಜ್ವರ (ಎಚ್‌5ಎನ್‌1) ಸೊಂಕು ತಗುಲಿರುವುದು ಪರೀಕ್ಷೆಯಲ್ಲಿ ದೃಢಪಟ್ಟಿದೆ.

ಸೊಂಕು ಮತ್ತಷ್ಟು ಹರಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಕಣ್ಗಾವಲು ಮತ್ತು ರೋಗ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಅಡ್ಯಾರ್, ಗಾಂಧಿ ನಗರ, ಪಲ್ಲಿಕರಣೈ, ವೇಲಾಚೇರಿ, ತಿರುವನ್ಮಿಯೂರ್, ಪೂರ್ವ ಕರಾವಳಿ ರಸ್ತೆ ಮತ್ತು ಹಳೆಯ ಮಹಾಬಲಿಪುರಂ ರಸ್ತೆಯಲ್ಲಿ ಕಾಗೆಗಳ ಹಠಾತ್ ಸಾವು ವರದಿಯಾಗಿದೆ.

ಪಶುಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಇಲಾಖೆ ವತಿಯಿಂದ ರಾಜ್ಯದಾದ್ಯಂತ ಕೋಳಿ ಸಾಕಣೆದಾರರು ಮತ್ತು ಕಾಡು ಪಕ್ಷಿಗಳ ನಿರ್ವಾಹಕರು ಕಠಿಣ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚನೆ ನೀಡಲಾಗಿದೆ.

ಆರೋಗ್ಯ ಇಲಾಖೆಯಿಂದ ಈಗಾಗಲೇ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದ್ದು, ತಪ್ಪದೆ ನಿಯಮಗಳನ್ನು ಪಾಲಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ ಎಂದು ಸಾರ್ವಜನಿಕ ಆರೋಗ್ಯ ನಿರ್ದೇಶಕ ಡಾ. ಎ. ಸೋಮಸುಂದರಂ ಹೇಳಿದ್ದಾರೆ.

ಕೆಮ್ಮು, ಶೀತ, ಜ್ವರ ಅಥವಾ ಉಸಿರಾಟದ ತೊಂದರೆ ಸೇರಿದಂತೆ ಜ್ವರದ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ. ಕಸಾಯಿಖಾನೆಗಳಲ್ಲಿ ಕೆಲಸ ಮಾಡುವವರು, ಅನಾರೋಗ್ಯ ಪೀಡಿತ ಅಥವಾ ಸತ್ತ ಪಕ್ಷಿಗಳನ್ನು ನಿರ್ವಹಿಸುವ ಸಿಬ್ಬಂದಿಗೂ ಎಚ್ಚರಿಕೆ ವಹಿಸುವಂತೆ ಅವರು ಮನವಿ ಮಾಡಿದ್ದಾರೆ.

ಹಕ್ಕಿ ಜ್ವರ ಎಂದರೇನು?

ಇದು ಹಕ್ಕಿಗಳನ್ನು ಬಾಧಿಸುವ ಮತ್ತು ಬಹುಬೇಗ ಹರಡುವ ಜ್ವರ. ಇದಕ್ಕೆ ಎಚ್‌5ಎನ್‌1 ವೈರಸ್‌ ಕಾರಣ. ಮನುಷ್ಯರು ಮತ್ತು ಪ್ರಾಣಿಗಳಲ್ಲಿ ಈ ಸೋಂಕು ಕಾಣಿಸಿಕೊಳ್ಳುವುದು ಅಪರೂಪ. ಸೋಂಕಿತ ಹಕ್ಕಿಗಳ ಎಂಜಲು, ಲೋಳೆ, ಹಿಕ್ಕೆಯಲ್ಲಿ ವೈರಸ್‌ಗಳಿರುತ್ತವೆ. ಹೆಬ್ಬಾತು, ಬಾತುಕೋಳಿಯಂತಹ ಕಾಡಿನ ಕೆಲವು ಪಕ್ಷಿಗಳಿಗೆ ಸೋಂಕು ತಗುಲಿದರೂ ಅವುಗಳ ಆರೋಗ್ಯದ ಮೇಲೆ ಹೆಚ್ಚು ಪರಿಣಾಮವಾಗುವುದಿಲ್ಲ. ಆದರೆ, ಕೋಳಿಗಳಿಗೆ ಈ ಸೋಂಕು ಕಂಟಕವಾಗಿದ್ದು, ತೀವ್ರ ಅನಾರೋಗ್ಯದ ಜೊತೆಗೆ ಅವುಗಳ ಪ್ರಾಣಕ್ಕೂ ಕುತ್ತು ತರುತ್ತದೆ.

1996ರಲ್ಲಿ ಚೀನಾದಲ್ಲಿ ಮೊದಲು ಹಕ್ಕಿ ಜ್ವರ ಕಾಣಿಸಿಕೊಂಡಿತ್ತು. 2021ರವರೆಗೂ ಇದು ಗಂಭೀರ ಕಾಯಿಲೆಯಾಗಿರಲಿಲ್ಲ. ಆ ಬಳಿಕ ವೈರಸ್‌ ರೂಪಾಂತರಗೊಂಡು ಪಕ್ಷಿ, ಪ್ರಾಣಿಗಳನ್ನು ತೀವ್ರವಾಗಿ ಕಾಡಲು ಆರಂಭಿಸಿದೆ.

ರೋಗ ಲಕ್ಷಣ ಏನೇನು?

ಮನುಷ್ಯರಲ್ಲಿ ಸಾಮಾನ್ಯ ಜ್ವರದ ಲಕ್ಷಣಗಳೇ ಕಾಣಿಸಿಕೊಳ್ಳುತ್ತವೆ. ತೀವ್ರ ಜ್ವರ, ಚಳಿಯ ಅನುಭವ, ತಲೆ ನೋವು, ಮೈಕೈ ನೋವು, ಕೆಮ್ಮು, ಉಸಿರಾಟ ತೊಂದರೆ, ಗಂಟಲು ನೋವು, ಭೇದಿ, ಹೊಟ್ಟೆನೋವು, ಮೂಗು / ಒಸಡಿನಲ್ಲಿ ರಕ್ತ ಸ್ರಾವ, ಕೆಂಗಣ್ಣು ಬಾಧಿಸುತ್ತದೆ.

ಕೋಳಿಗಳಲ್ಲಿ ಸೋಂಕಿನ ಲಕ್ಷಣಗಳು ತಕ್ಷಣಕ್ಕೆ ಕಾಣಿಸಿಕೊಳ್ಳುವುದಿಲ್ಲ. ಅವು ಬಹುಬೇಗ ಹರಡುವುದರಿಂದ ರೋಗ ಪತ್ತೆ ಕಷ್ಟ. ಸಾಮಾನ್ಯವಾಗಿ ಸೋಂಕಿತ ಕೋಳಿಗಳು ಆಹಾರ ತಿನ್ನುವುದಿಲ್ಲ. ಮೊಟ್ಟೆ ಉತ್ಪಾದನೆ ಕಡಿಮೆಯಾಗುತ್ತದೆ. ಹೆಚ್ಚು ಓಡಾಡುವುದಿಲ್ಲ. ಕಣ್ಣುಗಳು ತೇವಗೊಂಡಿರುತ್ತವೆ. ರೆಕ್ಕೆಗಳು ಕೆದರಿರುತ್ತವೆ. ನೆತ್ತಿ ಮತ್ತು ಜೋಲು ದೊಗಲುವಿನಲ್ಲಿ (ಕುತ್ತಿಗೆಯಲ್ಲಿ ಜೋಲಾಡುವ ಭಾಗ) ದ್ರವ ಸಂಗ್ರಹವಾಗುತ್ತದೆ. ಕೆಮ್ಮೂ ಕಾಡಬಹುದು. ತಲೆ ಭಾಗ ಊದಿಕೊಳ್ಳುತ್ತದೆ. ಕಾಲಿನ ಚರ್ಮದ ಅಡಿಯಲ್ಲಿ ರಕ್ತಸ್ರಾವವೂ ಕಾಣಿಸಿಕೊಳ್ಳಬಹುದು. ದಿಢೀರ್‌ ಸಾವು ಕೂಡ ಸಂಭವಿಸುತ್ತದೆ.

ಸದ್ಯ ಹಕ್ಕಿಜ್ವರಕ್ಕೆ ಲಸಿಕೆ ಇಲ್ಲ. ವಿವಿಧ ಕಂಪನಿಗಳು ಲಸಿಕೆಯ ತಯಾರಿಕೆಯಲ್ಲಿ ತೊಡಗಿವೆ. ಲಸಿಕೆ ಅಭಿವೃದ್ಧಿಗೆ ಇನ್ನಷ್ಟು ವೇಗ ನೀಡುವುದಕ್ಕಾಗಿ ಅಮೆರಿಕವು ಕಂಪನಿಗಳಿಗೆ ಆರ್ಥಿಕವಾಗಿ ನೆರವು ನೀಡಲು ಮುಂದಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries