ಜಮ್ಮು: ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ ಉಮರ್ ಅಬ್ದುಲ್ಲಾ ಸರ್ಕಾರದ ಮೇಲೆ ವಾಗ್ದಾಳಿ ನಡೆಸಲು ಸಿಗುವ ಒಂದು ಅವಕಾಶವನ್ನೂ ತಪ್ಪಿಸಿಕೊಳ್ಳದ ಬಿಜೆಪಿ ಶಾಸಕರು, ವಾರ್ಷಿಕ ಅಮರನಾಥ ಯಾತ್ರೆಗೆ ಅನುದಾನ ಹಂಚಿಕೆ ಮಾಡಿದ ಮುಖ್ಯಮಂತ್ರಿಯ ಕ್ರಮವನ್ನು ಶುಕ್ರವಾರ ಮುಕ್ತಕಂಠದಿಂದ ಶ್ಲಾಘಿಸಿದ ಅಪರೂಪದ ಪ್ರಸಂಗ ವರದಿಯಾಗಿದೆ.
"ನಮ್ಮ ಮುಖ್ಯಮಂತ್ರಿ ವಾರ್ಷಿಕ ಅಮರನಾಥ ಯಾತ್ರೆಗೆ 180 ಕೋಟಿ ರೂಪಾಯಿ ಹಂಚಿಕೆ ಮಾಡಿರುವುದು ಧನಾತ್ಮಕ ಹೆಜ್ಜೆ" ಎಂದು ಉಧಾಂಪುರ ಪಶ್ಚಿಮ ಕ್ಷೇತ್ರದ ಬಿಜೆಪಿ ಶಾಸಕ ಪವನ್ ಗುಪ್ತಾ ಹೇಳಿಕೆ ನೀಡಿದ್ದಾರೆ. ಇದು ಜಮ್ಮು ಮತ್ತು ಕಾಶ್ಮೀರದಲ್ಲಿ ಬದಲಾವಣೆಯ ಕಾಲಘಟ್ಟದ ಪ್ರತಿಬಿಂಬ ಎಂದು ಅವರು ಬಣ್ಣಿಸಿದ್ದಾರೆ.
ಇದು ಈ ಪ್ರದೇಶದಲ್ಲಿ ಆಗುತ್ತಿರುವ ರಾಜಕೀಯ ಮತ್ತು ಸಾಮಾಜಿಕ ಬದಲಾವಣೆಯ ಸಂಕೇತ ಎಂದು ಅಭಿಪ್ರಾಯಪಟ್ಟಿರುವ ಅವರು, "ದಿನದ ಕೊನೆಗೆ ನಮ್ಮ ಆಸೆ ಜಮ್ಮು ಮತ್ತು ಕಾಶ್ಮೀರ ಮುಖ್ಯವಾಹಿನಿಯಲ್ಲಿ ಸೇರಬೇಕು ಎನ್ನುವುದು. ನಿಧಾನವಾಗಿ ಇದು ಆಗುತ್ತಿದೆ. ಇಂದು ವಿಧಾನಸಭೆಯಲ್ಲಿ ನಾವು ಹೆಮ್ಮೆಯ ಭಾರತೀಯರು ಎಂದು ಸದಸ್ಯರು ಹೇಳಿದ್ದನ್ನು ಕೇಳಿದ್ದೀರಿ. ಈಮೊದಲು ಬಹುತೇಕ ಮಂದಿ ವಿಶೇಷ ಸ್ಥಾನಮಾನದ ಬಗ್ಗೆ ಹೇಳುತ್ತಿದ್ದುದು ಕೇಳಿಬರುತ್ತಿತ್ತು" ಎಂದರು.
ಬಿಜೆಪಿ ಹಲವು ವಿಚಾರಗಳಲ್ಲಿ ಸರ್ಕಾರವನ್ನು ಟೀಕಿಸುತ್ತಾ ಬಂದಿದೆ; ಆದರೆ ಒಳ್ಳೆಯ ಹಾಗೂ ರಚನಾತ್ಮಕ ನಿರ್ಧಾರಗಳನ್ನು ಗೌರವಿಸಬೇಕು ಎಂದು ಅಭಿಪ್ರಾಯಪಟ್ಟರು.
ಗುಹಾ ಮಂದಿರಕ್ಕೆ ಭೇಟಿ ನೀಡುವ ಯಾತ್ರಿಗಳ ಸುರಕ್ಷೆ, ಅನುಕೂಲತೆ ಮತ್ತು ಆಧ್ಯಾತ್ಮಿಕ ಅನುಭವವನ್ನು ಖಾತರಿಪಡಿಸಲು ತಮ್ಮ ಸರ್ಕಾರ ಬದ್ಧವಾಗಿದೆ. ಯಾತ್ರಾ ಮೂಲಸೌಕರ್ಯಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ಸಲುವಾಗಿ 2026-27ರ ಬಜೆಟ್‍ನಲ್ಲಿ 180 ಕೋಟಿ ರೂಪಾಯಿಗಳನ್ನು ಹಂಚಿಕೆ ಮಾಡಲಾಗುತ್ತಿದೆ. ಗಡಿ ರಸ್ತೆ ಸಂಸ್ಥೆಯ ಪಾಲುದಾರಿಕೆಯಲ್ಲಿ ರಸ್ತೆ ಸಂಪರ್ಕ, ತುರ್ತು ಸ್ಪಂದನೆ ವ್ಯವಸ್ಥೆ ಮತ್ತು ಲಾಜಿಸ್ಟಿಕ್ ಬೆಂಬಲವನ್ನು ಉನ್ನತೀಕರಿಸಲಾಗುತ್ತಿದೆ ಎಂದು ಕಳೆದ ವಾರ ಉಮರ್ ಅಬ್ದುಲ್ಲಾ ಬಜೆಟ್ ಭಾಷಣದಲ್ಲಿ ಹೇಳಿದ್ದರು.

