ನವದೆಹಲಿ: ಭಾರತ-ಅಮೆರಿಕ ನಡುವಿನ ವ್ಯಾಪಾರ ಒಪ್ಪಂದ ಕುರಿತು ಪ್ರಸ್ತಾಪಿಸುವ ಮೂಲಕ ಕೇಂಧ್ರ ಸರ್ಕಾರದ ವಿರುದ್ಧ ಚಾಟಿ ಬೀಸಲು ವಿರೋಧ ಪಕ್ಷಗಳು ಸಜ್ಜಾಗಿವೆ. ಹೀಗಾಗಿ, ಸೋಮವಾರದಿಂದ ಮತ್ತೆ ಆರಂಭವಾಗಲಿರುವ ಸಂಸತ್‌ನ ಬಜೆಟ್ ಅಧಿವೇಶನ ಕಾವೇರಿದ ಚರ್ಚೆ, ಗದ್ದಲಕ್ಕೆ ಸಾಕ್ಷಿಯಾಗುವ ಎಲ್ಲ ಸಾಧ್ಯತೆಗಳಿವೆ.
ಭಾರತವು ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸುವ ಬಗ್ಗೆ ಅಮೆರಿಕ ನೀಡುತ್ತಿರುವ ಸೂಚನೆಗಳು, ಚೀನಾ ಜೊತೆಗಿನ ಸಂಘರ್ಷಕ್ಕೆ ಸಂಬಂಧಿಸಿ ಸೇನೆಯ ಮಾಜಿ ಮುಖ್ಯಸ್ಥ ಜನರಲ್ ಎಂ.ಎಂ.ನರವಣೆ ಅವರ ಅಭಿಪ್ರಾಯಗಳ ಕುರಿತು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಪ್ರಶ್ನೆ ಕೇಳುವುದಕ್ಕೆ ಅವಕಾಶ ನೀಡದಿರುವ ವಿಚಾರವನ್ನು ಕೂಡ ವಿಪಕ್ಷಗಳು ಪ್ರಸ್ತಾಪಿಸುವ ನಿರೀಕ್ಷೆ ಇದೆ.
ಅಮೆರಿಕದೊಂದಿಗಿನ ವ್ಯಾಪಾರ ಒಪ್ಪಂದವು ದೇಶದ ರೈತರ ಹಿತಾಸಕ್ತಿಗೆ ವಿರುದ್ಧವಾಗಿದೆ. ಈ ಕಾರಣಕ್ಕೆ ಈ ಒಪ್ಪಂದದ ವಿರುದ್ಧ ಅಧಿವೇಶನದಲ್ಲಿ ಧ್ವನಿ ಎತ್ತಲಾಗುವುದು ಎಂಬ ಸುಳಿವನ್ನು ವಿಪಕ್ಷಗಳ ನಾಯಕರು ನೀಡಿದ್ದಾರೆ. ಭಾರತವು ರಷ್ಯಾದಿಂದ ತೈಲ ಖರೀದಿ ವಿಚಾರವಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಾರ್ಯಕಾರಿ ಆದೇಶ ಹೊರಡಿಸುತ್ತಿರುವ ಬಗ್ಗೆಯೂ ಪ್ರಶ್ನೆ ಎತ್ತಲಾಗುವುದು. ಟ್ರಂಪ್ ನಡೆ ಭಾರತದ ಸಾರ್ವಭೌಮತೆ ಮೇಲಿನ ದಾಳಿ ಎಂದೂ ವಿರೋಧ ಪಕ್ಷಗಳು ಹೇಳುತ್ತಿವೆ.
ಸುಗಮ ಕಲಾಪ ಸಂಶಯ?: ಲೋಕಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆ ಕಳೆದ ಗುರುವಾರವೇ ಆರಂಭವಾಗಬೇಕಿತ್ತು. ವಿಪಕ್ಷಗಳ ಪ್ರತಿಭಟನೆಯಿಂದಾಗಿ ನಡೆಯಲಿಲ್ಲ.
'ಸೋಮವಾರದಿಂದ ಆರಂಭವಾಗುವ ಕಲಾಪವು ಸುಗಮವಾಗಲು ಬಿಡುವಿರಾ' ಎಂಬ ಪ್ರಶ್ನೆಗೆ,'ಈ ಬಗ್ಗೆ ನಾಳೆಯೇ ನಮಗೆ ಗೊತ್ತಾಗಲಿದೆ' ಎಂದು ವಿರೋಧ ಪಕ್ಷದ ಹಿರಿಯ ನಾಯಕರೊಬ್ಬರು ಪ್ರತಿಕ್ರಿಯಿಸಿದರು.
ಚೀನಾದೊಂದಿಗಿನ ಸಂಘರ್ಷ ಕುರಿತಂತೆ ರಾಹುಲ್ ಗಾಂಧಿ ಅವರಿಗೆ ಮಾತನಾಡಲು ಅವಕಾಶ ನೀಡದ್ದನ್ನು ವಿರೋಧಿಸಿ ಕಾಂಗ್ರೆಸ್ ನೇತೃತ್ವದಲ್ಲಿ ವಿಪಕ್ಷಗಳ ಸಂಸದರು ಪ್ರತಿಭಟಿಸಿದರು. ಇದರಿಂದಾಗಿ, ರಾಷ್ಟ್ರಪತಿಗಳ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲಿನ ಚರ್ಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ವಾರ ಲೋಕಸಭೆಯಲ್ಲಿ ಉತ್ತರ ನೀಡಲಿಲ್ಲ.
ರಾಹುಲ್ ಅವರಿಗೆ ಮಾತನಾಡಲು ಅವಕಾಶ ನೀಡದ್ದನ್ನು ಪ್ರತಿಭಟಿಸಿದ್ದಕ್ಕಾಗಿ 8 ಸಂಸದರನ್ನು ಅಮಾನತು ಮಾಡಲಾಗಿದೆ. ಈ ಕುರಿತ ಹೋರಾಟದಿಂದ ವಿಪಕ್ಷಗಳ ಸಂಸದರು ಹಿಂದೆ ಸರಿಯುವ ಸಾಧ್ಯತೆಯೂ ಕಡಿಮೆ.
ಬಜೆಟ್ ಅಧಿವೇಶನದ ಮೊದಲ ಹಂತವು ಇದೇ ಶುಕ್ರವಾರ ಅಂತ್ಯಗೊಳ್ಳಲಿದೆ. ನಂತರ, ವಿವಿಧ ಸಚಿವಾಲಯಗಳ ಬೇಡಿಕೆಗಳ ಕುರಿತು ಚರ್ಚೆ ನಡೆಯಲಿದ್ದು, ಏಪ್ರಿಲ್ 12ರಂದು ಅಧಿವೇಶನ ಮುಕ್ತಾಯವಾಗಲಿದೆ.

