ಲಂಡನ್: ಬ್ರಿಟನ್‌ನ ಮಾಜಿ ರಾಜಕುಮಾರ ಆಯಂಡ್ರೂ ಮೌಂಟ್‌ಬ್ಯಾಟನ್-ವಿಂಡ್ಸರ್ ಅವರು ಈ ಹಿಂದೆ ವಾಸವಿದ್ದ ನಿವಾಸದಲ್ಲಿ ಪೊಲೀಸರು ಶುಕ್ರವಾರ ಶೋಧ ನಡೆಸಿದರು.
ಲೈಂಗಿಕ ಅಪರಾಧಿ ಎಪ್‌ಸ್ಟೈನ್ ಜತೆಗಿನ ನಂಟಿಗೆ ಸಂಬಂಧಿಸಿದಂತೆ, ಸರ್ಕಾರಿ ಹುದ್ದೆಯಲ್ಲಿದ್ದಾಗ ಅನುಚಿತವಾಗಿ ವರ್ತಿಸಿರುವ ಶಂಕೆಯ ಮೇರೆಗೆ ಆಯಂಡ್ರೂ ಅವರನ್ನು ಗುರುವಾರ ಬಂಧಿಸಿ, 11 ತಾಸಿನ ಬಳಿಕ ಬಿಡುಗಡೆ ಮಾಡಲಾಯಿತು.
ಆಯಂಡ್ರೂ ಅವರು ಶುಕ್ರವಾರ ಸ್ಯಾಂಡ್ರಿಗಮ್ ಎಸ್ಟೇಟ್‌ನಲ್ಲಿರುವ ನೂತನ ನಿವಾಸಕ್ಕೆ ಮರಳಿದರು. ಇದೇ ಸಂದರ್ಭದಲ್ಲಿ ಪೊಲೀಸರು ವಿಂಡ್ಸರ್ ಕ್ಯಾಸಲ್‌ನಲ್ಲಿರುವ 30 ಕೋಣೆಗಳ ನಿವಾಸದಲ್ಲಿ ಶೋಧ ನಡೆಸಿದರು.
ಸರ್ಕಾರಿ ಹುದ್ದೆಯಲ್ಲಿದ್ದಾಗ ಅನುಚಿತ ವರ್ತನೆಯ ಜತೆಗೆ 2010ರಲ್ಲಿ ಸರ್ಕಾರದ ಕೆಲವು ಗೋಪ್ಯ ಮಾಹಿತಿಗಳನ್ನು ಎಪ್‌ಸ್ಟೈನ್ ಜತೆಗೆ ಆಯಂಡ್ರೂ ಹಂಚಿಕೊಂಡಿದ್ದಾರೆ ಎಂದು ಅಮೆರಿಕದ ನ್ಯಾಯಾಂಗ ಇಲಾಖೆಯು ಬಿಡುಗಡೆ ಮಾಡಿದ ವರದಿಯಲ್ಲಿ ಆರೋಪಿಸಲಾಗಿದೆ.
ಎಪ್‌ಸ್ಟೈನ್ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಆರೋಪಗಳನ್ನೂ ಆಯಂಡ್ರೂ ನಿರಾಕರಿಸಿದ್ದಾರೆ.

