ಅಬುಧಾಬಿ: ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ದೇಶವನ್ನು ಗುರಿಯಾಗಿಸಿಕೊಂಡು ಹಾರಿಸಲಾದ ಹಲವಾರು ಇರಾನಿನ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಯಶಸ್ವಿಯಾಗಿ ತಡೆಹಿಡಿಯಲಾಗಿದೆ ಎಂದು ಯುಎಇ ರಕ್ಷಣಾ ಸಚಿವಾಲಯ (MoD) ಶುಕ್ರವಾರ ಘೋಷಿಸಿದೆ.
ಶನಿವಾರ ನಡೆದ ದಾಳಿಯಲ್ಲಿ ಇರಾನ್ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸಿದ್ದು, ಯುಎಇ ವಾಯು ರಕ್ಷಣಾ ವ್ಯವಸ್ಥೆಗಳು ಹೆಚ್ಚಿನ ದಕ್ಷತೆಯೊಂದಿಗೆ ಅವುಗಳನ್ನು ನಿಷ್ಕ್ರಿಯಗೊಳಿಸಿ ಹಲವಾರು ಕ್ಷಿಪಣಿಗಳನ್ನು ಮಧ್ಯಾಕಾಶದಲ್ಲೇ ಹೊಡೆದುರುಳಿಸಿವೆ ಎಂದು ಸಚಿವಾಲಯ ತಿಳಿಸಿದೆ.
ತಡೆಹಿಡಿದ ಕ್ಷಿಪಣಿಗಳ ಅವಶೇಷಗಳು ಕೆಲವು ವಸತಿ ಪ್ರದೇಶಗಳಲ್ಲಿ ಪತನಗೊಂಡಿದ್ದು, ಇದರಿಂದ ವಸ್ತು ಹಾನಿ ಸಂಭವಿಸಿದೆ. ಬಿದ್ದ ಅವಶೇಷಗಳಿಂದ ಏಷ್ಯನ್ ಪ್ರಜೆಯೊಬ್ಬರು ಸಾವನ್ನಪ್ಪಿರುವುದು ದೃಢಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯುಎಇಯಲ್ಲಿ ಭದ್ರತಾ ಪರಿಸ್ಥಿತಿ ಸ್ಥಿರವಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಸಂಬಂಧಪಟ್ಟ ಎಲ್ಲಾ ಸಂಸ್ಥೆಗಳು ದಿನದ 24 ಗಂಟೆಯೂ ಬೆಳವಣಿಗೆಗಳನ್ನು ಮೇಲ್ವಿಚಾರಣೆ ಮಾಡುತ್ತಿದ್ದು, ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.
ರಕ್ಷಣಾ ಸಚಿವಾಲಯವು ಈ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದು, ನಾಗರಿಕ ಆಸ್ತಿಪಾಸ್ತಿ, ಸಾರ್ವಜನಿಕ ಸೌಲಭ್ಯಗಳು ಹಾಗೂ ರಾಷ್ಟ್ರೀಯ ಸಂಸ್ಥೆಗಳನ್ನು ಗುರಿಯಾಗಿಸಿಕೊಳ್ಳುವುದನ್ನು ಯುಎಇ ಸ್ಪಷ್ಟವಾಗಿ ತಿರಸ್ಕರಿಸುತ್ತದೆ ಎಂದು ಹೇಳಿದೆ. ಇಂತಹ ಕೃತ್ಯಗಳು ಉದ್‌ವಿಗ್ನತೆಗೂ ಕಾರಣವಾಗುವುದಲ್ಲದೆ, ನಾಗರಿಕರ ಸುರಕ್ಷತೆಗೆ ಬೆದರಿಕೆ ಹಾಕಿ ದೇಶದ ಸ್ಥಿರತೆಯನ್ನು ಹಾಳು ಮಾಡುವ ಹೇಡಿತನದ ಕ್ರಮಗಳಾಗಿವೆ ಎಂದು ಒತ್ತಿ ಹೇಳಿದೆ.
ರಾಷ್ಟ್ರೀಯ ಸಾರ್ವಭೌಮತ್ವ ಮತ್ತು ಅಂತರರಾಷ್ಟ್ರೀಯ ಕಾನೂನಿನ ಸ್ಪಷ್ಟ ಉಲ್ಲಂಘನೆಯೇ ಈ ದಾಳಿ ಎಂದು ರಕ್ಷಣಾ ಸಚಿವಾಲಯ ಅಭಿಪ್ರಾಯಪಟ್ಟಿದೆ. ಈ ಬೆಳವಣಿಗೆಗೆ ಪ್ರತಿಕ್ರಿಯಿಸಲು ಹಾಗೂ ತನ್ನ ಪ್ರದೇಶ, ನಾಗರಿಕರು ಮತ್ತು ನಿವಾಸಿಗಳನ್ನು ರಕ್ಷಿಸಲು, ತನ್ನ ಸಾರ್ವಭೌಮತ್ವ, ಭದ್ರತೆ ಮತ್ತು ಸ್ಥಿರತೆಯನ್ನು ಕಾಪಾಡಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುವ ಸಂಪೂರ್ಣ ಹಕ್ಕು ಯುಎಇ ಕಾಯ್ದಿರಿಸಿದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.
ಯಾವುದೇ ಬೆದರಿಕೆಗಳನ್ನು ಎದುರಿಸಲು ಸಂಪೂರ್ಣ ಸಿದ್ಧತೆ ಮತ್ತು ಸನ್ನದ್ಧತೆ ಇದೆ ಎಂದು ಸಚಿವಾಲಯ ಪುನರುಚ್ಚರಿಸಿದೆ. ದೇಶದ ಭದ್ರತೆ ಮತ್ತು ಸ್ಥಿರತೆಯನ್ನು ದುರ್ಬಲಗೊಳಿಸುವ ಯಾವುದೇ ಪ್ರಯತ್ನಗಳನ್ನು ಕಟ್ಟುನಿಟ್ಟಾಗಿ ಎದುರಿಸಲಾಗುತ್ತದೆ ಎಂದು ಎಚ್ಚರಿಸಿದೆ.
ಮಾಹಿತಿಗಾಗಿ ಅಧಿಕೃತ ಮೂಲಗಳನ್ನು ಮಾತ್ರ ಅವಲಂಬಿಸುವಂತೆ ಹಾಗೂ ವದಂತಿಗಳು ಅಥವಾ ಪರಿಶೀಲಿಸದ ವರದಿಗಳನ್ನು ಹರಡುವುದನ್ನು ತಪ್ಪಿಸುವಂತೆ ಸಚಿವಾಲಯ ಸಾರ್ವಜನಿಕರನ್ನು ಒತ್ತಾಯಿಸಿದೆ. ಯುಎಇಯೊಳಗಿನ ಅಧಿಕೃತ ಮೂಲಗಳಿಂದಲೇ ಮಾಹಿತಿ ಪಡೆಯುವಂತೆ ಮನವಿ ಮಾಡಿದೆ.

