ಬರೇಲಿ: ಉತ್ತರ ಪ್ರದೇಶದ ಬರೇಲಿಯ ಕ್ವಿಲಾ ಪ್ರದೇಶದಲ್ಲಿ ಮನಕಲಕುವ ಘಟನೆಯೊಂದು ನಡೆದಿದ್ದು, ಒಂದು ತಿಂಗಳ ಹಸುಗೂಸು ಹಸಿವಿನಿಂದ ಮೃತಪಟ್ಟಿದೆ.
ಶಾದಾಬ್ ಮತ್ತು ಹೀನಾ (ಪೋಷಕರು) ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಭಿಕ್ಷೆ ಬೇಡಿ ಜೀವನ ಕಟ್ಟಿಕೊಂಡಿದ್ದವರು. ಅಂದು (ಶನಿವಾರ) ಘಟನೆ ನಡೆದ ದಿನ ತಮ್ಮ ಮೂವರು ಮಕ್ಕಳೊಂದಿಗೆ ಭಿಕ್ಷೆ ಬೇಡಲು ಹೋಗಿದ್ದರು.
ನವಜಾತ ಶಿಶುವನ್ನು ಮನೆಯೊಳಗೆ ಬಿಟ್ಟು ಬೀಗ ಹಾಕಿ ಹೋಗಿದ್ದರು.
ಸಂಜೆ ಪೋಷಕರು ಮನೆಗೆ ಮರಳಿದಾಗ ಮಗು ಮೃತಪಟ್ಟಿರುವುದು ಕಂಡುಬಂದಿದೆ.
ವರದಿಗಳ ಪ್ರಕಾರ, ಮಗು ಅವಧಿಗೂ ಮುನ್ನವೇ ಜನಿಸಿದ್ದು, ಅತ್ಯಂತ ಅಶಕ್ತವಾಗಿತ್ತು. ಶಿಶು ದೀರ್ಘಕಾಲ ಹಸಿವಿನಿಂದಾಗಿ ಮೃತಪಟ್ಟಿದೆ ಎಂದು ಶಂಕಿಸಲಾಗಿದೆ.
ಪೊಲೀಸ್ ಅಧಿಕಾರಿಗಳ ಪ್ರಕಾರ, ಮಗು ತೀವ್ರ ಅಪೌಷ್ಟಿಕತೆಯಿಂದ ಕೂಡಿತ್ತು. ಆದರೂ, ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವಷ್ಟೇ ನಿಖರ ಕಾರಣ ತಿಳಿಯಲಿದೆ.
ಈ ಕುಟುಂಬವು ತೀವ್ರ ಬಡತನದಲ್ಲಿತ್ತು. ಭಿಕ್ಷಾಟನೆಯಿಂದಲೇ ಜೀವನ ಸಾಗಿಸುತ್ತಿತ್ತು. ಅಲ್ಲದೆ, ಪೋಷಕರು ಮಾನಸಿಕವಾಗಿ ಅಸ್ವಸ್ಥರಾಗಿದ್ದರು. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

