ರಿಯಾದ್: ಇರಾನ್ ನಡೆಸಿದ ಡ್ರೋನ್ ದಾಳಿಯಲ್ಲಿ ರಿಯಾದ್‌ನಲ್ಲಿರುವ ಅಮೆರಿಕದ ರಾಯಭಾರ ಕಚೇರಿಗೆ ಅಲ್ಪ ಪ್ರಮಾಣದ ಹಾನಿಯಾಗಿದೆ.
ಪಶ್ಚಿಮ ಏಷ್ಯಾ ವಲಯದಲ್ಲಿ ರಾಜತಾಂತ್ರಿಕ ಮತ್ತು ಕೈಗಾರಿಕಾ ನೆಲೆಗಳನ್ನು ಗುರಿಯಾಗಿಸಿ ಇರಾನ್ ದಾಳಿ ನಡೆಸುತ್ತಿರುವುದರಿಂದ, ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳುವಂತೆ ಅಮೆರಿಕವು ತನ್ನ ಪ್ರಜೆಗಳಿಗೆ ಸೂಚಿಸಿದೆ.
'ಸೌದಿ ರಾಜಧಾನಿಯಲ್ಲಿರುವ ಅಮೆರಿಕದ ರಾಯಭಾರ ಕಚೇರಿಯ ಚಾವಣಿ ಮತ್ತು ಗೋಡೆಗೆ ಹೊಗೆಯಿಂದ ಹಾನಿಯಾಗಿದೆ' ಎಂದು ಎಎಫ್‌ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.
ರಾಯಭಾರ ಕಚೇರಿಯ ಆವರಣದಲ್ಲಿ ಭದ್ರತೆ, ತಪಾಸಣೆ ಬಿಗಿಗೊಳಿಸಲಾಗಿದೆ. ರಾಯಭಾರ ಕಚೇರಿಯನ್ನು ಸಂಪರ್ಕಿಸುವ ರಸ್ತೆ ಮತ್ತು ಸುತ್ತಲಿನ ರಸ್ತೆಗಳಲ್ಲಿ ಸಂಚಾರ ನಿರ್ಬಂಧಿಸಲಾಗಿದೆ.
ರಾಯಭಾರ ಕಚೇರಿ ಮೇಲಿನ ದಾಳಿಯ ಬೆನ್ನಲ್ಲೇ, 'ಇರಾನ್ ವಿರುದ್ಧದ ದಾಳಿಯನ್ನು ಇನ್ನಷ್ಟು ತೀವ್ರಗೊಳಿಸುತ್ತೇವೆ' ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ್ದಾರೆ.
'ಗಂಭೀರ ಭದ್ರತಾ ಸಮಸ್ಯೆ ಇರುವುದರಿಂದ ತಕ್ಷಣವೇ ಅಮೆರಿಕನ್ನರು ಪಶ್ಚಿಮ ಏಷ್ಯಾ ದೇಶಗಳನ್ನು ತೊರೆಯಿರಿ' ಎಂದೂ ಟ್ರಂಪ್ ಸೂಚಿಸಿದ್ದಾರೆ.
ಲೆಬನಾನ್ ಮೇಲೆ ಇಸ್ರೇಲ್ ದಾಳಿ ತೀವ್ರಗೊಳಿಸಿದೆ. ಇನ್ನೊಂದೆಡೆ ಒಮಾನ್‌ನ ಬಂದರು, ತೈಲ ಮತ್ತು ಅನಿಲ ಘಟಕಗಳನ್ನು ಗುರಿಯಾಗಿಸಿ ಇರಾನ್ ದಾಳಿ ಮುಂದುವರಿಸಿದೆ. ಯುದ್ಧದ ಬೆನ್ನಲ್ಲೇ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆಯಲ್ಲಿ ಏರಿಕೆಯಾಗಿದೆ.

