ಬೀಜಿಂಗ್: ಮುಂದಿನ ಐದು ವರ್ಷದಲ್ಲಿ 'ಮಕ್ಕಳ ಜನನಕ್ಕೆ ಪೂರಕವಾದ ಸಮಾಜ' ನಿರ್ಮಾಣ ಮಾಡುವುದಾಗಿ ಗುರುವಾರ ಚೀನಾ ಘೋಷಿಸಿದೆ. ಉದ್ಯೋಗ, ಶಿಕ್ಷಣ, ಆರೋಗ್ಯ ಹಾಗೂ ಆದಾಯದ ಬಗ್ಗೆ ಇರುವ ಆತಂಕಗಳನ್ನು ನಿವಾರಿಸುವುದಾಗಿಯೂ ಸರ್ಕಾರದ ವರದಿಯೊಂದು ಹೇಳಿದೆ.
ಅಧಿಕಾರಿಗಳು ಜನಸಂಖ್ಯೆ ಸಂಬಂಧಿತ ಸೇವೆಗಳನ್ನು ಸುಧಾರಿಸಲಿದ್ದಾರೆ.
ಜನಸಂಖ್ಯೆಯ ವಯಸ್ಸಾಗುವಿಕೆಯ ಸವಾಲುಗಳಿಗೆ ಸ್ಪಂದಿಸಲಿದ್ದಾರೆ. ಇದರಲ್ಲಿ ಉತ್ತಮ ಗುಣಮಟ್ಟದ, ಪೂರ್ಣ ಉದ್ಯೋಗವನ್ನು ಉತ್ತೇಜಿಸುವುದು, ಆದಾಯ ವಿತರಣಾ ವ್ಯವಸ್ಥೆಯನ್ನು ಸುಧಾರಿಸುವುದು ಮತ್ತು ಸಾಮಾಜಿಕ ಭದ್ರತಾ ವ್ಯವಸ್ಥೆಯನ್ನು ಪರಿಷ್ಕರಿಸುವುದು ಸೇರಿದೆ ಎಂದು ಅದು ತಿಳಿಸಿದೆ.
ಚೀನಾದ ಜನಸಂಖ್ಯೆ ಸತತ ಐದನೇ ವರ್ಷವೂ ಇಳಿಕೆ ಕಂಡು, ಜನನ ಪ್ರಮಾಣ ಐತಿಹಾಸಿಕ ಇಳಿಕೆ ಕಂಡ ಬೆನ್ನಲ್ಲೇ ಸರ್ಕಾರದಿಂದ ಈ ನಿರ್ಧಾರ ಪ್ರಕಟವಾಗಿದೆ.
ಜನನ ಪ್ರಮಾಣ ಇನ್ನೂ ಇಳಿಕೆಯಾಗಲಿದೆ ಎಂದು ತಜ್ಞರು ಸರ್ಕಾರವನ್ನು ಎಚ್ಚರಿಸಿದ್ದಾರೆ.
2022ರಿಂದ ಈಚೆಗೆ ಚೀನಾದ ಜನಸಂಖ್ಯೆ ಭಾರಿ ಪ್ರಮಾಣದಲ್ಲಿ ಕುಸಿತ ಕಾಣುತ್ತಿದ್ದು, ದೇಶದಲ್ಲಿ ವೃದ್ಧರ ಸಂಖ್ಯೆ ಹೆಚ್ಚುತ್ತಿದೆ. ಇದು ದೇಶೀಯ ಬಳಕೆಯನ್ನು ಹೆಚ್ಚಿಸುವ ಮತ್ತು ಸಾಲವನ್ನು ನಿಯಂತ್ರಿಸುವ ಯೋಜನೆಗಳಿಗೆ ಅಡ್ಡಿಯುಂಟು ಮಾಡುತ್ತಿದೆ.
ಸಿಲ್ವರ್ ಆರ್ಥಿಕತೆಯ ( 60 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟವರ ಅಗತ್ಯಗಳನ್ನು ಪೂರೈಸುವ ಆರ್ಥಿಕ ಚಟುವಟಿಕೆಗಳು) ಗುಣಮಟ್ಟದ ಅಭಿವೃದ್ಧಿಗೆ, ಹಿರಿಯ ಕಾಳಜಿ ಸೇವೆಗಳನ್ನು ಹೆಚ್ಚಿಸುವುದು ಹೊಸ ನೀತಿಯಲ್ಲಿ ಇರಲಿದೆ. ಇದು ಪ್ರಮುಖವಾಗಿ ಗ್ರಾಮೀಣ ಪ್ರದೇಶಗಳ ಬಗ್ಗೆ ಹೆಚ್ಚು ಗಮನಹರಿಸಲಿದೆ ಎಂದು ವರದಿ ಹೇಳಿದೆ.
ಪಿಂಚಣಿ ಹಣಕಾಸು, ಕ್ಷೇಮ ಮತ್ತು ಆರೈಕೆ ಸೇರಿದಂತೆ ಹಿರಿಯ ನಾಗರಿಕರಿಗಾಗಿ ಇರುವ ನೀತಿಗಳನ್ನು ಸುಧಾರಿಸಲು ಅಧಿಕಾರಿಗಳು ಕ್ರಮಗಳನ್ನು ರೂಪಿಸುತ್ತಾರೆ ಎಂದು ಅದು ಹೇಳಿದೆ.
2035ರ ವೇಳೆಗೆ ಚೀನಾದಲ್ಲಿ 60ಕ್ಕಿಂತ ಹೆಚ್ಚು ಪ್ರಾಯವಾದವರ ಸಂಖ್ಯೆ 40 ಕೋಟಿಗೆ ತಲುಪಲಿದೆ. ಇದು ಸರಿಸುಮಾರು ಅಮೆರಿಕ ಹಾಗೂ ಇಟಲಿಯ ಒಟ್ಟು ಜನಸಂಖ್ಯೆಗೆ ಸಮ. ಲಕ್ಷಾಂತರ ಜನ ಕೆಲಸದಿಂದ ನಿವೃತ್ತಿಯಾಗುತ್ತಿದ್ದು, ಪಿಂಚಣಿ ಬಜೆಟ್ ಕೂಡ ಹೆಚ್ಚಳವಾಗುತ್ತಿದೆ.
ಚೀನಾ ಈಗಾಗಲೇ ನಿವೃತ್ತಿ ವಯಸ್ಸನ್ನು 60ರಿಂದ 63ಕ್ಕೆ ಹೆಚ್ಚಿಸಿದೆ. ಮಹಿಳೆಯರ ನಿವೃತ್ತಿ ವಯಸ್ಸನ್ನು 55ರಿಂದ 58ಕ್ಕೆ ಏರಿಸಿದೆ.
ಮದುವೆ ಹಾಗೂ ಮಕ್ಕಳನ್ನು ಹೆರುವ ಬಗ್ಗೆ ಸಕಾರಾತ್ಮಕ ಮನೋಭಾವವನ್ನು ಚೀನಾ ಬೆಳೆಸುತ್ತಿದೆ ಎಂದು ವರದಿ ಹೇಳಿದ್ದು, ಮಕ್ಕಳಿರುವ ಕುಟುಂಬಗಳಿಗೆ ವಸತಿ ಬೆಂಬಲವನ್ನು ಹೆಚ್ಚಿಸುತ್ತದೆ ಎಂದಿದೆ.
ಸಂತಾನೋತ್ಪತ್ತಿ ಹಾಗೂ ಮಹಿಳೆಯರಿಗೆ ಗರ್ಭಾವಸ್ಥೆಯ ಆರಂಭದಲ್ಲಿ ಬೇಕಾಗುವ ಆರೋಗ್ಯ ಸೇವೆಯನ್ನು ಸುಧಾರಿಸುವುದರ ಜೊತೆಗೆ ಶಿಶು ಮರಣ ಪ್ರಮಾಣ ಇಳಿಕೆ ಮಾಡುವ ಗುರಿಯನ್ನೂ ಚೀನಾ ಇಟ್ಟುಕೊಂಡಿದೆ.
ಉಚಿತ ಪೂರ್ವ ಪ್ರಾಥಮಿಕ ಶಿಕ್ಷಣದ ನೀತಿಗಳನ್ನು ಅಧಿಕಾರಿಗಳು ಪರಿಷ್ಕರಿಸಲಿದ್ದು, ಸಾಮಾನ್ಯ ಪ್ರೌಢಶಿಕ್ಷಣದ ಸೀಟುಗಳ ಲಭ್ಯತೆಯನ್ನು ಹೆಚ್ಚಿಸಲಿದ್ದಾರೆ. ಶಿಕ್ಷಣದ ಮೇಲಿನ ಸರ್ಕಾರದ ವೆಚ್ಚವನ್ನು ಒಟ್ಟು ದೇಶೀಯ ಉತ್ಪನ್ನದ (ಜಿಡಿಪಿ) ಶೇ 4ಕ್ಕಿಂತ ಹೆಚ್ಚಿರಬೇಕು ಎಂದು ಕಡ್ಡಾಯಗೊಳಿಸಲಾಗಿದೆ ಎಂದು ವರದಿ ಹೇಳಿದೆ.

