ಕೊಚ್ಚಿ: ಕೊಚ್ಚಿಯ ದಕ್ಷಿಣ ನೌಕಾ ನೆಲೆಯಲ್ಲಿ ನಿಲುಗಡೆಗೊಂಡಿರುವ ಇರಾನಿನ ಹಡಗು ಐರಿಸ್ ಲಾವನ್‌ನ ದೃಶ್ಯಗಳನ್ನು ಸೆರೆಹಿಡಿಯಲು ನಿರ್ಬಂಧಿತ ವಲಯಕ್ಕೆ ಪ್ರವೇಶಿಸಿದ ಆರೋಪದಲ್ಲಿ ಪತ್ರಕರ್ತ ಸೇರಿದಂತೆ ಮೂವರನ್ನು CISF ಅಧಿಕಾರಿಗಳು ಬಂಧಿಸಿದ್ದಾರೆ.
ಬಂಧಿತರಲ್ಲಿ ರಿಪಬ್ಲಿಕ್ ಟಿವಿಯ ವರದಿಗಾರ, ಕ್ಯಾಮೆರಾಮನ್ ಮತ್ತು ಅವರು ಪ್ರಯಾಣಿಸುತ್ತಿದ್ದ ದೋಣಿಯ ಚಾಲಕ ಸೇರಿದ್ದಾರೆ.
ಅಮೆರಿಕದಿಂದ ಸಂಭವನೀಯ ದಾಳಿಯ ಭೀತಿಯ ಹಿನ್ನೆಲೆಯಲ್ಲಿ ಈ ಹಡಗು ಕೊಚ್ಚಿಗೆ ಆಗಮಿಸಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಡಗಿನ ದೃಶ್ಯಗಳನ್ನು ಸೆರೆಹಿಡಿಯಲು ಮಾಧ್ಯಮ ತಂಡವು ಮೆರೈನ್ ಡ್ರೈವ್‌ನಿಂದ ದೋಣಿಯನ್ನು ಬಾಡಿಗೆಗೆ ಪಡೆದು ಸಮುದ್ರ ಮಾರ್ಗವಾಗಿ ತೆರಳಿತ್ತು. ಈ ವೇಳೆ ಅವರು ನಿರ್ಬಂಧಿತ ವಲಯಕ್ಕೆ ಪ್ರವೇಶಿಸಿದುದನ್ನು ಗಮನಿಸಿದ CISF ಅಧಿಕಾರಿಗಳು ಅವರನ್ನು ತಡೆದು ವಶಕ್ಕೆ ಪಡೆದರು. ಬಳಿಕ ಮೂವರನ್ನೂ ಪೊಲೀಸರಿಗೆ ಒಪ್ಪಿಸಲಾಯಿತು. ಪತ್ರಕರ್ತರ ಕ್ಯಾಮೆರಾಗಳನ್ನೂ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಬಂಧಿತ ಮೂವರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಇಸ್ಲಾಮಿಕ್ ಗಣರಾಜ್ಯದ ಕೋರಿಕೆಯ ಮೇರೆಗೆ ಬುಧವಾರ ಇರಾನಿನ ಯುದ್ಧನೌಕೆಗೆ ಕೊಚ್ಚಿಯಲ್ಲಿ ಆಶ್ರಯ ನೀಡಲಾಗಿತ್ತು. ಭಾರತೀಯ ನೌಕಾಪಡೆಯ ಭದ್ರತೆಯಲ್ಲಿ ಹಡಗಿನಲ್ಲಿದ್ದ 183 ನಾವಿಕರಿಗೆ ವಸತಿ ವ್ಯವಸ್ಥೆ ಮಾಡಲಾಗಿದೆ.
ಇದಕ್ಕೂ ಮೊದಲು ಶ್ರೀಲಂಕಾ ಸಮೀಪದಲ್ಲಿ ಇರಾನಿಗೆ ಸೇರಿದ ಐರಿಸ್ ದೇನಾ ಹಡಗನ್ನು ಅಮೆರಿಕ ನೌಕಾಪಡೆಯು ಟಾರ್ಪಿಡೊ ಮೂಲಕ ದಾಳಿ ಮಾಡಿತ್ತು. ಹಿಂದೂ ಮಹಾಸಾಗರ ಪ್ರದೇಶದಲ್ಲಿದ್ದ ಐರಿಸ್ ಲಾವನ್ ಮೇಲೂ ದಾಳಿ ನಡೆಯುವ ಸಾಧ್ಯತೆ ಇರುವ ಭೀತಿಯ ಹಿನ್ನೆಲೆಯಲ್ಲಿ ಇರಾನ್ ಫೆಬ್ರವರಿ 28ರಂದು ಭಾರತದಿಂದ ಆಶ್ರಯ ಕೋರಿತ್ತು ಎಂದು ನೌಕಾಪಡೆಯ ವಕ್ತಾರರು ತಿಳಿಸಿದ್ದಾರೆ.
ಹಡಗಿಗೆ ವಿಶೇಷ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ.

