ಅಬುಧಾಬಿ: ಇರಾನ್ ವಿರುದ್ಧ ಅಮೆರಿಕ-ಇಸ್ರೇಲ್ ಸಂಘರ್ಷದಿಂದ ಗಲ್ಫ್ ಪ್ರದೇಶದಲ್ಲಿ ಉಂಟಾದ ಉದ್ವಿಗ್ನತೆಯ ನಡುವೆಯೂ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಸುರಕ್ಷಿತ ವಾಯು ಮಾರ್ಗ ತೆರೆದಿದೆ ಎಂದು ಆರ್ಥಿಕ ಮತ್ತು ಪ್ರವಾಸೋದ್ಯಮ ಸಚಿವ ಅಬ್ದುಲ್ಲಾ ಬಿನ್ ತೌಕ್ ಅಲ್ ಮರ್ರಿ ಮಂಗಳವಾರ ತಿಳಿಸಿದ್ದಾರೆ ಎಂದು gulfnews.com ವರದಿ ಮಾಡಿದೆ.
ಪ್ರಸ್ತುತ ಈ ಮಾರ್ಗಗಳ ಮೂಲಕ ಗಂಟೆಗೆ 48 ವಿಮಾನಯಾನಗಳನ್ನು ನಿರ್ವಹಿಸುವ ಸಾಮರ್ಥ್ಯವಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಗಲ್ಫ್ ರಾಷ್ಟ್ರಗಳೊಂದಿಗೆ ಸಮನ್ವಯ ಸಾಧಿಸಿ ಈ ಕ್ರಮ ಕೈಗೊಳ್ಳಲಾಗಿದೆ. ಆರ್ಥಿಕ ಮತ್ತು ಪ್ರವಾಸೋದ್ಯಮ ಚಟುವಟಿಕೆಗಳಿಗೆ ಬೆಂಬಲ ನೀಡುವುದು ಇದರ ಉದ್ದೇಶ ಎಂದು ಸಚಿವರು ಸ್ಪಷ್ಟಪಡಿಸಿದರು. ಇರಾನ್‌ನೊಂದಿಗಿನ ಅಮೆರಿಕ -ಇಸ್ರೇಲ್ ಸಂಘರ್ಷ ನಾಲ್ಕನೇ ದಿನಕ್ಕೆ ಕಾಲಿಟ್ಟಿರುವ ಹಿನ್ನೆಲೆಯಲ್ಲಿ, ಪ್ರಾದೇಶಿಕ ಪರಿಣಾಮಗಳನ್ನು ಮನಗಂಡು ಸರ್ಕಾರ ಕ್ರಮೇಣ ಕಾರ್ಯಾಚರಣೆಗಳನ್ನು ಪುನರಾರಂಭಿಸುತ್ತಿದೆ.
ಮಾರ್ಚ್ 1ರಿಂದ ಮಾರ್ಚ್ 3ರವರೆಗೆ 60 ವಿಮಾನಗಳ ಮೂಲಕ 17,498 ಪ್ರಯಾಣಿಕರು ಸಂಚರಿಸಿದ್ದಾರೆ. ಮುಂದಿನ ಹಂತದಲ್ಲಿ ರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳೊಂದಿಗೆ 80 ವಿಮಾನಗಳನ್ನು ನಿಗದಿಪಡಿಸಲಾಗಿದ್ದು, 27,000 ಪ್ರಯಾಣಿಕರಿಗೆ ಸೇವೆ ನೀಡುವ ಯೋಜನೆ ಇದೆ ಎಂದು ಅಲ್ ಮರ್ರಿ ಮಾಹಿತಿ ನೀಡಿದರು.

