ಮುಂಬೈ: ವಿದ್ಯಾರ್ಥಿಗಳ ಶೈಕ್ಷಣಿಕ ಏಕಾಗ್ರತೆ ಹೆಚ್ಚಿಸಲು ಮತ್ತು ಅತಿಯಾದ ಸ್ಕ್ರೀನ್ ಟೈಮ್ (ಮೊಬೈಲ್/ಟಿವಿ ಬಳಕೆ) ಕುರಿತಾದ ಆತಂಕ ಹೋಗಲಾಡಿಸಲು ಮಹಾರಾಷ್ಟ್ರದ ಧಾರಾಶಿವ್ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಪ್ರತಿದಿನ ಎರಡು ಗಂಟೆ ಮೊಬೈಲ್ ಮತ್ತು ಟಿವಿಯನ್ನು ಕಡ್ಡಾಯವಾಗಿ ಆಫ್ ಮಾಡುವಂತೆ ಆದೇಶಿಸಲಾಗಿದೆ.
ಹಿಂದೆ ಒಸ್ಮಾನಾಬಾದ್ ಎಂದು ಕರೆಯಲ್ಪಡುತ್ತಿದ್ದ ಧಾರಾಶಿವ್ ಜಿಲ್ಲೆಯು 5ನೇ ಶತಮಾನದ ಧಾರಾಶಿವ್ ಗುಹೆಗಳು ಮತ್ತು ಭವಾನಿ ದೇವಸ್ಥಾನಕ್ಕೆ ಹೆಸರುವಾಸಿಯಾಗಿದೆ.
'ನೋ ಟಿವಿ, ನೋ ಮೊಬೈಲ್' ಎಂಬ ಈ ಅಭಿಯಾನವು ಜಿಲ್ಲೆಯ 712 ಗ್ರಾಮ ಪಂಚಾಯತಿಗಳಲ್ಲಿ ಪ್ರತಿದಿನ ಸಂಜೆ 7ರಿಂದ ರಾತ್ರಿ 9 ಗಂಟೆಯವರೆಗೆ ಜಾರಿಯಲ್ಲಿರಲಿದೆ.
'ವಿಶೇಷವಾಗಿ ಶಾಲಾ ಮಕ್ಕಳಲ್ಲಿ ಮೊಬೈಲ್ ಮತ್ತು ಟಿವಿ ಅವಲಂಬನೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ' ಎಂದು ಧಾರಾಶಿವ್ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಅರ್ಚನಾ ಪಾಟೀಲ್ ತಿಳಿಸಿದ್ದಾರೆ.
'ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಸಂಜೆ 7ಗಂಟೆಗೆ ಸೈರನ್ ಮೊಳಗಿಸಲಾಗುತ್ತದೆ. ಸಂಜೆ 7ರಿಂದ 9ರವರೆಗೆ ಟಿವಿ ಮತ್ತು ಮೊಬೈಲ್ ಫೋನ್‌ಗಳನ್ನು ಸ್ವಿಚ್ ಆಫ್ ಮಾಡಬೇಕಾಗುತ್ತದೆ. ಈ ಅವಧಿಯಲ್ಲಿ ನಿಯಮ ಪಾಲನೆಯಾಗುತ್ತಿದೆಯೇ ಎಂದು ಖಚಿತಪಡಿಸಿಕೊಳ್ಳಲು ಸುಮಾರು 750 ಸರ್ಕಾರಿ ಸಿಬ್ಬಂದಿಯನ್ನು ನಿಯೋಜಿಸಲಾಗುವುದು' ಎಂದು ಪಾಟೀಲ್ ಹೇಳಿದ್ದಾರೆ.
'ವಿದ್ಯಾರ್ಥಿಗಳು ಓದಿನ ಕಡೆಗೆ ಗಮನ ಹರಿಸಲು ಪ್ರೋತ್ಸಾಹಿಸುವುದು, ಸ್ಕ್ರೀನ್ ಟೈಮ್ ಕಡಿಮೆ ಮಾಡುವುದು ಮತ್ತು ಶಿಸ್ತುಬದ್ಧ ಅಧ್ಯಯನದ ದಿನಚರಿಯನ್ನು ಬೆಳೆಸುವುದು ಈ ಉಪಕ್ರಮದ ಮುಖ್ಯ ಉದ್ದೇಶವಾಗಿದೆ' ಎಂದು ಅವರು ವಿವರಿಸಿದ್ದಾರೆ.
'ಡಿಜಿಟಲ್ ವ್ಯಾಮೋಹದಿಂದ ಮಕ್ಕಳನ್ನು ದೂರವಿಟ್ಟು, ಓದಿನ ಬಗ್ಗೆ ಆಸಕ್ತಿ ಮೂಡಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಈ ಕ್ರಮವು ನೂತನ ಪ್ರಯೋಗವಾಗಿ ಕಂಡುಬಂದರೂ, ಇದರ ಯಶಸ್ಸು ಸಾರ್ವಜನಿಕರ ಸಹಕಾರ, ಸಮುದಾಯದ ಸಹಭಾಗಿತ್ವದ ಮೇಲೆ ಅವಲಂಬಿತವಾಗಿದೆ' ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

