ಕೋಲ್ಕತ್ತ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗಲೇ, ರಾಜ್ಯದಲ್ಲಿ ಚುನಾವಣಾ ಆಯೋಗ ನಡೆಸಿದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯಿಂದಾಗಿ (ಎಸ್‌ಐಆರ್) ಮತದಾರರ ಪಟ್ಟಿಯಿಂದ 91 ಲಕ್ಷ ಹೆಸರುಗಳನ್ನು ತೆಗೆದುಹಾಕಲಾಗಿದೆ.
ಆದಾಗ್ಯೂ, ಈ ಪ್ರಕ್ರಿಯೆ ಪೂರ್ಣಗೊಂಡ ನಂತರದ ಅಂತಿಮ ಪರಿಷ್ಕೃತ ಮತದಾರರ ಸಂಖ್ಯೆಯನ್ನು ಚುನಾವಣಾ ಆಯೋಗವು ಇನ್ನಷ್ಟೇ ಘೋಷಿಸಬೇಕಿದೆ.
ಮತದಾರರ ಪಟ್ಟಿಯ ಪರಿಷ್ಕರಣೆ ಪ್ರಕ್ರಿಯೆಯನ್ನು ಹಂತಹಂತವಾಗಿ ಮತ್ತು ಪಾರದರ್ಶಕವಾಗಿ ನಡೆಸಲಾಗಿದೆ. ಸಂಪೂರ್ಣ ಹೊಣೆಗಾರಿಕೆ ಖಚಿತಪಡಿಸಿಕೊಳ್ಳಲು ಜಿಲ್ಲಾವಾರು ಅಂಕಿಅಂಶಗಳನ್ನು ಪ್ರಕಟಿಸಲಾಗಿದೆ ಎಂದು ಚುನಾವಣಾ ಆಯೋಗದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಹಂತದಲ್ಲಿ ಮತದಾರರ ಹೊಸ ಸೇರ್ಪಡೆಯು ಕಾನೂನು ನಿಬಂಧನೆ ಮತ್ತು ಸಕ್ಷಮ ಅಧಿಕಾರಿಗಳ ನಿರ್ದೇಶನಗಳಿಗೆ ಒಳಪಟ್ಟಿರುತ್ತದೆ ಎಂದು ಅವರು ಹೇಳಿದ್ದಾರೆ.
2025ರ ನವೆಂಬರ್‌ನಲ್ಲಿ ಎಸ್‌ಐಆರ್ ಪ್ರಾರಂಭವಾದಾಗಿನಿಂದ ಮತದಾರರ ಪಟ್ಟಿಯಿಂದ 63.66 ಲಕ್ಷ ಹೆಸರುಗಳನ್ನು ತೆಗೆದುಹಾಕಲಾಗಿತ್ತು. ಇದರಿಂದ ಮತದಾರರ ಸಂಖ್ಯೆ 7.66 ಕೋಟಿಯಿಂದ 7.04 ಕೋಟಿಗೆ ಇಳಿಕೆಯಾಗಿತ್ತು.
7.04 ಕೋಟಿ ಮತದಾರರ ಪೈಕಿ 60.06 ಲಕ್ಷಕ್ಕೂ ಹೆಚ್ಚು ಮತದಾರರನ್ನು ವಿಚಾರಣಾ ಹಂತದಲ್ಲಿದ್ದಾರೆ ಎಂದು ವರ್ಗೀಕರಿಸಲಾಗಿತ್ತು. ನ್ಯಾಯಾಂಗ ಅಧಿಕಾರಿಗಳು ನಡೆಸಿದ ಪರಿಶೀಲನೆ ಬಳಿಕ ಮತದಾರರ ಪಟ್ಟಿಯಿಂದ 27.16 ಲಕ್ಷಕ್ಕೂ ಹೆಚ್ಚು ಹೆಸರುಗಳನ್ನು ತೆಗೆದುಹಾಕಲಾಯಿತು. ಅಲ್ಲದೆ, 32.68 ಲಕ್ಷಕ್ಕೂ ಹೆಚ್ಚು ಹೆಸರುಗಳನ್ನು ಪಟ್ಟಿಯಲ್ಲಿ ಉಳಿಸಿಕೊಳ್ಳಲಾಯಿತು.
ಎಸ್‌ಐಆರ್ ಪ್ರಕ್ರಿಯೆ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ ಒಟ್ಟು 90.83 ಲಕ್ಷ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ.
ಮುಂದಿನ ಹಂತವೇನು?
ಇ-ಸಹಿ ಸೇರಿದಂತೆ ಕೆಲವು ತಾಂತ್ರಿಕ ಪ್ರಕ್ರಿಯೆಗಳು ಬಾಕಿ ಇರುವುದರಿಂದ ಅಂತಿಮ ಸಂಖ್ಯೆಯಲ್ಲಿ ಅಲ್ಪ ಬದಲಾವಣೆಗಳಾಗಬಹುದು. ಸದ್ಯಕ್ಕೆ ಮತದಾರರ ಪಟ್ಟಿಗೆ ಯಾವುದೇ ಹೊಸ ಸೇರ್ಪಡೆ ಇರುವುದಿಲ್ಲ ಎಂದು ಚುನಾವಣಾ ಆಯೋಗದ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.
ಇನ್ನು ಮುಂದೆ ಯಾವುದೇ ಬದಲಾವಣೆಗಳಿದ್ದರೂ ಅದು ಸುಪ್ರೀಂ ಕೋರ್ಟ್ ನೀಡುವ ಹೊಸ ನಿರ್ದೇಶನಗಳ ಮೇಲೆ ಮಾತ್ರ ಅವಲಂಬಿತವಾಗಿರುತ್ತದೆ. ಸುಪ್ರೀಂ ಕೋರ್ಟ್‌ನಲ್ಲಿ ಏಪ್ರಿಲ್ 13ರಂದು ಪಶ್ಚಿಮ ಬಂಗಾಳದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ನಡೆಯಲಿದೆ.

