ಯುದ್ಧದ ಭೀಕರತೆಗೆ ಕೊನೆಯೇ ಇಲ್ಲ ಎಂಬುದನ್ನು ಇತಿಹಾಸ ಪದೇ ಪದೇ ಪಾಠ ಕಲಿಸುತ್ತದೆ. ಆದರೆ, ಯುದ್ಧಗಳೂ ಪದೇ ಪದೇ ಆಗುತ್ತಲೇ ಇವೆ.
ಇಂತಹ ಯುದ್ಧಗಳ ಭೀಕರತೆಯ ಸಾಕ್ಷಿಗೆ ಮತ್ತೊಂದು ಸೇರ್ಪಡೆ ಇನ್ನೂ ಎರಡು ವರ್ಷ ತುಂಬದ ಲೆಬನಾನ್‌ನ ಪುಟ್ಟ ಕಂದಮ್ಮ ಅಲಿನ್‌ಳ ದುರಂತ ಅಂತ್ಯ!
ಹೌದು, ಇರಾನ್-ಇಸ್ರೇಲ್‌ನ ಹೊಡೆದಾಟಕ್ಕೆ ಇನ್ನೇನು ವಿರಾಮ ಸಿಕ್ಕಿತು ಎನ್ನುವ ಮಧ್ಯದಲ್ಲಿಯೇ ಹಿಜ್ಬುಲ್ಲಾಗಳ ಮೇಲೆ ಕುಪಿತಗೊಂಡು ಇಸ್ರೇಲ್, ಲೆಬನಾನ್ ಮೇಲೆ ತನ್ನ ಪರಾಕ್ರಮ ತೋರಿಸುತ್ತಿದೆ.
ಕಳೆದ ಬುಧವಾರ ಇಸ್ರೇಲ್, ಶಿಫ್ರಾ ಹಾಗೂ ದಕ್ಷಿಣ ಲೆಬನಾನ್‌ನ ಹಲವೆಡೆ ನಡೆಸಿದ ಕ್ಷಿಪಣಿ, ಬಾಂಬ್‌ಗಳ ಸುರಿಮಳೆಗೆ ಮಹಿಳೆಯರು, ಮಕ್ಕಳು ಸೇರಿದಂತೆ 250 ಜನ ಒಂದೇ ಏಟಿಗೆ ಉಸಿರು ನಿಲ್ಲಿಸಿದ್ದರು.
ಅಮೆರಿಕ ಘೋಷಿಸಿದ್ದ ಕದನ ವಿರಾಮ ಲೆಬನಾನ್‌ಗೆ ಅನ್ವಯಿಸುವುದಿಲ್ಲ ಎಂದು ತಿಳಿದ ಇಸ್ರೇಲ್, ಇನ್ನೂ ಸಹ ಲೆಬನಾನ್ ಮೇಲೆ ದಾಳಿಗಳನ್ನು ಮುಂದುವರಿಸಿದೆ. ಇದರಿಂದ ಕಳೆದ ನಾಲ್ಕೈದು ದಿನಗಳಲ್ಲಿ ಮೃತ ಲೆಬನಾನಿಗಳ ಸಂಖ್ಯೆ 350ಕ್ಕೂ ಹೆಚ್ಚು.
ಅವಳು ಯುದ್ಧದಲ್ಲಿಯೇ ಹುಟ್ಟಿದಳು, ಯುದ್ಧದಲ್ಲಿಯೇ ಸತ್ತಳು!
ಇಸ್ರೇಲ್ ನಡೆಸುತ್ತಿರುವ ಭೀಕರ ದಾಳಿಗೆ ಲೆಬನಾನಿಗರು ತತ್ತರಿಸಿ ಹೋಗಿದ್ದಾರೆ. ಆದರೆ, ಈ ಒಂದು ಘಟನೆ ಇಡೀ ಜಗತ್ತಿನ ಅಂತಃಕರಣವನ್ನೇ ಕಲುಕಿದೆ.
ಬುಧವಾರ ನಡೆದ ದಾಳಿಯಲ್ಲಿ ಶಿಫ್ರಾದ 45 ವರ್ಷದ ವ್ಯಕ್ತಿ ಸಯೀದ್ ಎನ್ನುವರು ಹತ್ಯೆಯಾಗಿದ್ದರು. ಹಾಗೇ ಅವರ ಕುಟುಂಬದ ಕೆಲವರು ಮೃತರಾಗಿದ್ದರು, ಹಲವರು ಗಾಯಗೊಂಡಿದ್ದರು.
ತೀವ್ರ ದುಃಖದ ನಡುವೆಯೇ ಸಯೀದ್ ಕುಟುಂಬದ ಅಳಿದುಳಿದವರು ಸಯೀದ್ ಅವರ ಅಂತ್ಯಕ್ರಿಯೆ ಮಾಡಲು ನೋಡುತ್ತಿದ್ದರು.
ಇತ್ತ 'ಪಾಕಿಸ್ತಾನದಲ್ಲಿ ಇರಾನ್-ಅಮೆರಿಕ ಕದನ ವಿರಾಮದ ಮಾತುಕತೆ ನಡೆಯುತ್ತಿದೆ ಇನ್ನೇನು ನಮ್ಮ ಮೇಲೆ ದಾಳಿಯಾಗಲಿಕ್ಕಿಲ್ಲ' ಎಂದು ಸಂತ್ರಸ್ತರು ಒಂದು ದೀರ್ಘ ಉಸಿರು ತೆಗೆದುಕೊಂಡಿದ್ದರು.
ಈ ಬೆಳವಣಿಗೆಯಿಂದ ಶನಿವಾರ ಅಂದರೆ ಮಾರ್ಚ್ 11 ರಂದು ಶಿಫ್ರಾದಲ್ಲಿ ಸಯೀದ್ ಸೇರಿ ಹಲವರ ಅಂತ್ಯಕ್ರಿಯೆ ಮಾಡಲು ಜನ ಸೇರಿದ್ದರು. ಅದರಲ್ಲಿ ಸಯೀದ್ ಅವರ ಇನ್ನೂ 2 ವರ್ಷ ತುಂಬದ ಮಗಳು ಅಲಿನ್ ಕೂಡ ತನ್ನ ತಂದೆಗೆ ಅಂತಿಮ ನಮನ ಸಲ್ಲಿಸಲು ಹೋಗಿದ್ದಳು.
ಆದರೆ.. ಅಲ್ಲಿ ಅಲಿನ್ ಅಜ್ಜ, ಅಜ್ಜಿ ಸ್ಮಶಾನದಿಂದ ಆಕಾಶ ನೋಡುತ್ತಾ ಚೀರಿದರು.. ಆಗ ಬಿದ್ದಿದ್ದು ಮತ್ತೆ ಇಸ್ರೇಲ್‌ನ ಬಾಂಬುಗಳು!
ಅಲ್ಲಿಗೆ ಬದುಕು ತಿಳಿಯದ ಬಾಂಬುಗಳು ಘೋರ ಆಕ್ರಂದನದ ನಡುವೆ ಇನ್ನೂ ಬದುಕೇ ನೋಡದ ಅಲಿನ್‌ಳ ಕಥೆಯನ್ನೂ ಮುಗಿಸಿದ್ದವು.
ಗಾಯಗೊಂಡ ಅಲಿನ್ ಅಜ್ಜ ಆಸ್ಪತ್ರೆಯಲ್ಲಿ ಅಲಿನ್‌ಳ ಮೃತದೇಹವನ್ನು ಅಂಗೈಯಲ್ಲಿ ಹಿಡಿದು ಕಣ್ಣೀರು ಹಾಕುತ್ತಾ 'ಅವಳು ಯುದ್ಧದಲ್ಲಿಯೇ ಹುಟ್ಟಿದಳು, ಯುದ್ಧದಲ್ಲಿಯೇ ಸತ್ತಳು' ಎಂದು ಮತ್ತೆ ಸ್ಮಶಾನದ ಕಡೆ ನಡೆದರು.
ಮಿಯಾ ಖಲೀಫಾ ಕಣ್ಣೀರು
ಇರಾನ್ ಬೆಂಬಲಿತ ಹಿಜ್ಬುಲ್ಲಾ ಸಶಸ್ತ್ರ ಪಡೆಗಳ ಮೇಲೆ ಇಸ್ರೇಲ್ 2024ರಿಂದ ದಾಳಿಗಳನ್ನು ತೀವ್ರಗೊಳಿಸಿದೆ. ಅದರಲ್ಲೂ ಕಳೆದ ಫೆಬ್ರುವರಿ 28 ರಂದು ಆರಂಭವಾದ ಇರಾನ್- ಇಸ್ರೇಲ್ ಯುದ್ಧದ ತರುವಾಯ ಮಾರ್ಚ್ 4ರಿಂದ ಹಿಜ್ಬುಲ್ಲಾಗಳೂ ಇಸ್ರೇಲ್ ಮೇಲೆ ರಾಕೆಟ್ ದಾಳಿಗಳನ್ನು ಆರಂಭಿಸಿದರು. ಇದರಿಂದ ಕೆರಳಿ ಕೆಂಡವಾಗಿರುವ ಇಸ್ರೇಲ್ ಲೆಬನಾನ್ ಮೈಮೇಲೆಯೇ ಎಗರಿದೆ.
ಲೆಬನಾನ್ ಮೇಲೆ ಇಸ್ರೇಲ್ ನಡೆಸಿರುವ ಭೀಕರ ದಾಳಿಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. 250 ಜನ ಮೃತರಾದ ಮಾರನೇ ದಿನ ಅಮೆರಿಕದಲ್ಲಿ ಮಾಜಿ ಪೋರ್ನ್ ಸ್ಟಾರ್ ಮಿಯಾ ಖಲೀಫಾ ವಿಡಿಯೊ ಮಾಡಿ ಕಣ್ಣೀರು ಹಾಕಿದ್ದರು. ಏಕೆ ಮುಗ್ಧ ಜನರನ್ನು ಸಾಯಿಸುತ್ತಿದ್ದಿರಾ ಎಂದು ಪ್ರಶ್ನಿಸಿದ್ದರು.

