ಇರಾನ್ ಜೊತೆಗಿನ ಮೊದಲ ಸುತ್ತಿನ ಶಾಂತಿ ಮಾತುಕತೆಯಲ್ಲಿ ಪಾಲ್ಗೊಳ್ಳಲು ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ನೇತೃತ್ವದ ನಿಯೋಗ ಇದೇ (ಏಪ್ರಿಲ್) 11ರಂದು ಪಾಕಿಸ್ತಾನಕ್ಕೆ ಭೇಟಿ ನೀಡಿತ್ತು. ಮಾತುಕತೆ ಫಲಪ್ರದವಾಗಿಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ.
ಆದರೆ, ಆ ದಿನ ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುವಂತಹ ಪ್ರಸಂಗವೊಂದು ನಡೆದಿದೆ.
ಪಾಕಿಸ್ತಾನದಲ್ಲಿ ಅಮೆರಿಕದ ರಾಯಭಾರಿಯಾಗಿರುವ ಸ್ವೀವ್ ವಿಟ್ಕಾಫ್ ಅವರು ವ್ಯಾನ್ಸ್ ಅವರಿಗೆ ವ್ಯಕ್ತಿಯೊಬ್ಬರನ್ನು ಪರಿಚಯಿಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಆ ವ್ಯಕ್ತಿಯ ಕುರಿತಾಗಿ ಚರ್ಚೆ ಆರಂಭವಾಗಿದೆ. ಅವರನ್ನು ಉಮರ್ ಫಾರೂಕ್ ಜಹೂರ್ ಎಂದು ಹೇಳಲಾಗುತ್ತಿದೆ.
ಯಾರು ಈ ಉಮರ್ ಫಾರೂಕ್?
ಉಮರ್ ಫಾರೂಕ್ ಜಹೂರ್ ಪಾಕಿಸ್ತಾನ ಮೂಲದ ಉದ್ಯಮಿ. ಬಹುಕೋಟಿ ವಂಚನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ನಾರ್ವೆ ಹಾಗೂ ಸ್ವಿಟ್ಜರ್ಲೆಂಡ್ ಸರ್ಕಾರಗಳಿಗೆ ಹಲವು ವರ್ಷಗಳಿಂದ ಬೇಕಾಗಿದ್ದಾರೆ. ಈ ಸಂಬಂಧ ನಾರ್ವೆಯ ಪತ್ರಿಕೆ 'ವೆರ್ಡೆನ್ಸ್ ಗ್ಯಾಂಗ್' (ವಿಜಿ) ವರದಿ ಮಾಡಿತ್ತು.
ಇಂತಹ ವ್ಯಕ್ತಿಯು ಅಮೆರಿಕದ ಹಿರಿಯ ಅಧಿಕಾರಿಗಳೊಂದಿಗೆ ಉಪಸ್ಥಿತರಾಗಿರುವುದಷ್ಟೇ ಅಲ್ಲದೆ, ವಿವಿಧ ದೇಶಗಳ ಗಣ್ಯರೊಂದಿಗೆ ಪರಿಚಯಿಸುತ್ತಿರುವುದು ಚರ್ಚೆಗೆ ದಾರಿ ಮಾಡಿಕೊಟ್ಟಿದೆ.
ದೇಶಕ್ಕೆ ಹೆಚ್ಚಿನ ಪ್ರಮಾಣದಲ್ಲಿ ವಿದೇಶಿ ಬಂಡವಾಳವನ್ನು ತಂದ ಕಾರಣಕ್ಕಾಗಿ, ಉಮರ್ ಫಾರೂಕ್ಗೆ ಪಾಕಿಸ್ತಾನದ ಎರಡನೇ ಅತ್ಯುನ್ನತ ನಾಗರಿಕ ಗೌರವ 'ಹಿಲಾಲ್-ಇ-ಇಮ್ತಿಯಾಜ್' ನೀಡಲಾಗಿದೆ.
ಇರಾನ್ ಜೊತೆಗಿನ ಯುದ್ಧ ವಿರಾಮ ಅನಿರ್ದಿಷ್ಟಾವಧಿಗೆ ವಿಸ್ತರಣೆ: ಟ್ರಂಪ್ಅಮೆರಿಕ-ಇರಾನ್ ಕದನ ವಿರಾಮ ವಿಸ್ತರಣೆ: ಟ್ರಂಪ್ಗೆ ಪಾಕ್ ಪ್ರಧಾನಿ ಷರೀಫ್ ಧನ್ಯವಾದ
ಕುತೂಹಲಕಾರಿ ಸಂಗತಿಯೆಂದರೆ, ಮಾಜಿ ಪ್ರಧಾನಿ ಇಮ್ರಾನ್ ಖಾನ್ ಜೈಲು ಸೇರಲು ಕಾರಣವಾದ ತೋಷಖಾನ ಪ್ರಕರಣವನ್ನು ಬಯಲು ಮಾಡಿದ ಶ್ರೇಯವೂ ಉಮರ್ ಫಾರೂಕ್ ಅವರದ್ದು. ಪಾಕ್ ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ಅವರು ಇಮ್ರಾನ್ ಖಾನ್ ಅವರನ್ನು ಪ್ರಮುಖ ಎದುರಾಳಿ ಎಂದೇ ಪರಿಗಣಿಸಿದ್ದಾರೆ. ಅದೇ ಕಾರಣಕ್ಕೆ, ಫಾರೂಕ್ಗೆ ನಾಗರಿಕ ಗೌರವ ನೀಡಲಾಗಿದೆ ಎಂಬ ಮಾತುಗಳೂ ಕೇಳಿಬರುತ್ತವೆ.
ಫಾರೂಕ್ ಮೇಲೆ ನಾರ್ವೆ, ಸ್ವಿಸ್ನಲ್ಲಿ ಪ್ರಕರಣಗಳೇನು?
ಪೋಷಕರು ಸಿಯಾಲ್ಕೋಟ್ನವರಾದರೂ, ಉಮರ್ ಫಾರೂಕ್ ಜನಿಸಿದ್ದು ನಾರ್ವೆಯ ಓಸ್ಲೋದಲ್ಲಿ. ಸಾಮಾಝಿಕ ಮಾಧ್ಯಮ ವೇದಿಕೆ ಎಕ್ಸ್ನಲ್ಲಿ ತಮ್ಮನ್ನು, ಉದ್ಯಮಿ, ಹೂಡಿಕೆದಾರ ಎಂದು ಪರಿಚಯಿಸಿಕೊಂಡಿರುವ ಅವರು ಸದ್ಯ ದುಬೈನಲ್ಲಿ ನೆಲೆಸಿದ್ದಾರೆ. ಗಂಭೀರ ಆರ್ಥಿಕ ಅಪರಾಧಗಳಿಗೆ ಸಂಬಂಧಿಸಿದಂತೆ ದೇಶದಿಂದ ಪರಾರಿಯಾಗಿದ್ದಾರೆ ಎಂದೇ ನಾರ್ವೆ ಅಧಿಕಾರಿಗಳು ಪರಿಗಣಿಸಿದ್ದಾರೆ.
'ವಿಜಿ' ವರದಿ ಪ್ರಕಾರ, ಉಮರ್ ಫಾರೂಕ್ ವಿರುದ್ಧ 2003ಕ್ಕೂ ಹಿಂದೆಯೇ ಮೊದಲ ಪ್ರಕರಣ ದಾಖಲಾಗಿದೆ. ಅವರ ಕುಟುಂಬವೇ ನಡೆಸುವ ಟ್ರಾವೆಲ್ ಏಜೆನ್ಸಿಯು ವಿಮಾನ ಟಿಕೆಟ್ಗಳ ದುರುಪಯೋಗ ಮಾಡಿಕೊಂಡಿದೆ ಎಂಬ ಪ್ರಕರಣ ಸಂಬಂಧ ಓಸ್ಲೋ ನ್ಯಾಯಾಲಯವು ಫಾರೂಕ್ಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಆದರೆ, ಶಿಕ್ಷೆಯಿಂದ ಪಾರಾಗಲು ಫಾರೂಕ್ ನಾರ್ವೆ ತೊರೆದಿದ್ದರು. 10 ವರ್ಷಗಳ ನಂತರ ಪ್ರಕರಣ ರದ್ದಾಗಿತ್ತು.
2010ರಲ್ಲಿ ನಾರ್ಡಿಯಾ ಬ್ಯಾಂಕ್ಗೆ ವಂಚಿಸಿದ ಹಾಗೂ ಹಣದ ಅಕ್ರಮ ವರ್ಗಾವಣೆಯಲ್ಲಿ ಪಾಲ್ಗೊಂಡ ಆರೋಪ ಕೇಳಿ ಬಂದಿತ್ತು. ಅದೇ ಕಾರಣಕ್ಕಾಗಿ ನಾರ್ವೆ ಪೊಲೀಸರು ಬಲೆ ಬೀಸಿದ್ದರು. ಆರ್ಥಿಕ ಅಪರಾಧಕ್ಕೆ ಸಂಬಂಧಿಸಿದ ಇನ್ನಷ್ಟು ಆರೋಪಗಳು ಕೇಳಿಬಂದಿದ್ದವು. ಈ ಸಂಬಂಧ ನ್ಯಾಯಾಲಯಗಳು ಫಾರೂಕ್ ಅವರನ್ನು ಕೂಡಲೇ ಬಂಧಿಸುವಂತೆ ಹಲವು ಬಾರಿ ಆಡಳಿತಗಳಿಗೆ ನಿರ್ದೇಶನ ನೀಡಿದ್ದವು. ಆದಾಗ್ಯೂ, ತಮ್ಮ ವಿರುದ್ಧದ ಆರೋಪಗಳನ್ನು ನಿರಾಕರಿಸುತ್ತಾ ಬಂದಿರುವ ಫಾರೂಕ್, 2005ರಲ್ಲೇ ನಾರ್ವೆ ತೊರೆದಿರುವುದಾಗಿ ತಿಳಿಸಿದ್ದಾರೆ.
ಜ್ಯೂರಿಚ್ನಲ್ಲಿ ನಕಲಿ ಬ್ಯಾಂಕ್ ಸ್ಥಾಪಿಸಿ, ಹೂಡಿಕೆದಾರರಿಗೆ ನೂರಾರು ಕೋಟಿ ವಂಚಿಸಿದ ಸಂಬಂಧ ಸ್ವಿಟ್ಜರ್ಲೆಂಡ್ನಲ್ಲಿ 2004ರಿಂದ ತನಿಖೆ ನಡೆಯುತ್ತಿದೆ. ಈ ಸಂಬಂಧ ಫಾರೂಕ್ ಸಹಚರನೊಬ್ಬನಿಗೆ ಶಿಕ್ಷೆಯಾಗಿದೆ ಎಂದು 'ವಿಜಿ' ವರದಿ ಮಾಡಿದೆ.
ಇಂಧನ ವ್ಯವಹಾರಕ್ಕೆ ಸಂಬಂಧಿಸಿದಂತೆ ಫಾರೂಕ್ ಅವರ ಮೇಲೆ ಘಾನಾದಲ್ಲೂ ವಂಚನೆ ಆರೋಪಗಳಿವೆ.

