HEALTH TIPS

ಮಣಿಪುರದ ಬಿಷ್ಣುಪುರದಲ್ಲಿ ಭದ್ರತಾ ಪಡೆಗಳೊಂದಿಗೆ ಪ್ರತಿಭಟನಾಕಾರರ ಘರ್ಷಣೆ; ನಾಲ್ವರ ಬಂಧನ

 ಇಂಫಾಲ: ಮಣಿಪುರ ರಾಜ್ಯದ ಬಿಷ್ಣುಪುರ ಜಿಲ್ಲೆಯಲ್ಲಿ ಮಂಗಳವಾರ ಪ್ರತಿಭಟನಾಕಾರರು ಹಾಗೂ ಭದ್ರತಾ ಪಡೆಗಳೊಂದಿಗೆ ಘರ್ಷಣೆ ನಡೆಸಿದ್ದು, ಘಟನೆ ಸಂಬಂಧ ನಾಲ್ವರನ್ನು ಬಂಧಿಸಲಾಗಿದೆ. ಘಟನೆ ಬಳಿಕ ಜಿಲ್ಲಾದ್ಯಂತ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್) ಸೆಕ್ಷನ್ 163 ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.


ಪೊಲೀಸರ ಪ್ರಕಾರ, ಗುಂಪೊಂದು ಭದ್ರತಾ ಸಿಬ್ಬಂದಿಯ ವಾಹನಗಳನ್ನು ತಡೆದು, ಅವುಗಳಿಗೆ ಹಾನಿ ಮಾಡಿ ಎರಡು ವಾಹನಗಳಿಗೆ ಬೆಂಕಿ ಹಚ್ಚಿತು. ಹಿಂಸಾಚಾರಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಿದ್ದು, ಬೆಂಕಿ ಹಚ್ಚುವಿಕೆ, ಕಾನೂನುಬಾಹಿರ ಸಭೆ ಹಾಗೂ ಭದ್ರತಾ ಪಡೆಗಳಿಗೆ ಅಡ್ಡಿಪಡಿಸಿದ ಇತರರನ್ನು ಗುರುತಿಸುವ ಕಾರ್ಯ ಮುಂದುವರಿದಿದೆ.

ಇಂಫಾಲ ವಿಮಾನ ನಿಲ್ದಾಣದಲ್ಲಿ ಮಾದಕವಸ್ತುಗಳೊಂದಿಗೆ ಒಬ್ಬ ವ್ಯಕ್ತಿಯನ್ನು ಬಂಧಿಸಿದ ನಂತರ, ಪೊಲೀಸ್ ಮತ್ತು ಅರೆಸೈನಿಕ ಪಡೆಗಳ ಜಂಟಿ ತಂಡವು ಜಿಲ್ಲೆಯ ಕ್ವಾಕ್ಟಾ ಪ್ರದೇಶಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಆರೋಪಿಗಳು ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ ಗುಪ್ತ ಸಂಗ್ರಹದ ಬಗ್ಗೆ ಮಾಹಿತಿ ನೀಡಿದ್ದರು ಎಂದು ತಿಳಿದುಬಂದಿದೆ.

"ಮಧ್ಯಾಹ್ನ ಸುಮಾರು 1.30ರ ಹೊತ್ತಿಗೆ ಬಿಷ್ಣುಪುರದ ತಿನುಂಗೈ ಪ್ರದೇಶದಲ್ಲಿ ಭದ್ರತಾ ಪಡೆಗಳ ಸಂಚಾರದ ಕುರಿತು ವದಂತಿಗಳು ಹರಡಿದ ಹಿನ್ನೆಲೆಯಲ್ಲಿ ಸ್ಥಳೀಯರು ಅವರನ್ನು ಅಡ್ಡಿಪಡಿಸಿದರು. ಗುಂಪೊಂದು ಜಮಾಯಿಸಿ ಭದ್ರತಾ ವಾಹನಗಳನ್ನು ತಡೆಯಿತು," ಎಂದು ಮಣಿಪುರ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗುಂಪಿನ ಕೆಲವರು ಹಿಂಸಾತ್ಮಕವಾಗಿ ವರ್ತಿಸಿ ಭದ್ರತಾ ಸಿಬ್ಬಂದಿಗೆ ಸೇರಿದ ವಾಹನಗಳಿಗೆ ಹಾನಿ ಮಾಡಿ ಬೆಂಕಿ ಹಚ್ಚಿದಾಗ ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಂಡಿತು. ಸಿಬ್ಬಂದಿಯನ್ನು ಬಂಧಿಸಲು ನಡೆದ ಪ್ರಯತ್ನಗಳು ಉದ್ವಿಗ್ನತೆಯನ್ನು ಹೆಚ್ಚಿಸಿತು.

ಪರಿಸ್ಥಿತಿಯನ್ನು ನಿಯಂತ್ರಿಸಲು ಹೆಚ್ಚುವರಿ ಪಡೆಗಳನ್ನು ತಕ್ಷಣವೇ ನಿಯೋಜಿಸಲಾಯಿತು. ಕಾನೂನು ಮತ್ತು ಸುವ್ಯವಸ್ಥೆಯನ್ನು ಮರುಸ್ಥಾಪಿಸಲು ಅಶ್ರುವಾಯು ಸೇರಿದಂತೆ ಅಗತ್ಯ ಬಲವನ್ನು ಬಳಸಿ ಗುಂಪನ್ನು ಚದುರಿಸಲಾಯಿತು. ಘಟನೆಯಲ್ಲಿ ಕೆಲವು ಜನರಿಗೆ ಗಾಯಗಳಾಗಿದ್ದು, ಅವರಿಗೆ ಅಗತ್ಯ ವೈದ್ಯಕೀಯ ಚಿಕಿತ್ಸೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಿಲ್ಲೆಯ ಮೊಯಿರಾಂಗ್ ಟ್ರೋಂಗ್ಲಾಬಿ ಪ್ರದೇಶದಲ್ಲಿ ಇತ್ತೀಚೆಗೆ ನಡೆದ ಬಾಂಬ್ ದಾಳಿಯಲ್ಲಿ ಇಬ್ಬರು ಮಕ್ಕಳು ಸಾವನ್ನಪ್ಪಿ, ಅವರ ತಾಯಿ ಗಾಯಗೊಂಡಿರುವ ಘಟನೆಯನ್ನು ಖಂಡಿಸಿ ಕೆಲವು ಭಾಗಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿದ್ದು, ಅದರ ನಡುವೆಯೇ ಈ ಘರ್ಷಣೆ ಸಂಭವಿಸಿದೆ.

ಈ ಹಿನ್ನಲೆಯಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಪೂಜಾ ಎಲಾಂಗ್‌ ಬಮ್ ಅವರು, "ಬಿಎನ್‌ಎಸ್‌ಎಸ್, 2023 ರ ಸೆಕ್ಷನ್ 163 ಅಡಿಯಲ್ಲಿ ಎ.14, 2026ರ ಸಂಜೆ 5 ಗಂಟೆಯಿಂದ ಮುಂದಿನ ಆದೇಶದವರೆಗೆ ಯಾವುದೇ ವ್ಯಕ್ತಿಯು ತನ್ನ ಮನೆಯಿಂದ ಹೊರಗೆ ಸಂಚರಿಸಬಾರದು" ಎಂದು ಆದೇಶ ಹೊರಡಿಸಿದ್ದಾರೆ.

ಮದುವೆಗಳು, ಅಂತ್ಯಕ್ರಿಯೆಗಳು ಹಾಗೂ ಇತರ ಅಗತ್ಯ ಮೆರವಣಿಗೆಗಳಿಗೆ ಲಿಖಿತ ಪೂರ್ವಾನುಮತಿ ಕಡ್ಡಾಯವಾಗಿದ್ದು, ಅಂತಹ ಅನುಮತಿಯಿಲ್ಲದೆ ಯಾವುದೇ ಮೆರವಣಿಗೆ ನಡೆಸಬಾರದು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries