HEALTH TIPS

ಕೇರಳದಲ್ಲಿ ಕಾಂಗ್ರೆಸ್ - ಯುಡಿಎಫ್ ಮೈತ್ರಿಕೂಟಕ್ಕೆ ಮೂರನೇ ಎರಡರಷ್ಟು ಬಹುಮತ:ಕರ್ನಾಟಕ ಡಿಸಿಎಂ ಡಿ.ಕೆ. ಶಿವಕುಮಾರ್

ಬೆಂಗಳೂರು: ಕೇರಳದಲ್ಲಿ ಯಾರು ಅಧಿಕಾರಕ್ಕೆ ಬರಲಿದ್ದಾರೆ ಎನ್ನುವ ಬಗ್ಗೆ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಭವಿಷ್ಯ ನುಡಿದಿದ್ದಾರೆ. ಕಾಂಗ್ರೆಸ್ - ಯುಡಿಎಫ್ ಮೈತ್ರಿಕೂಟಕ್ಕೆ ಮೂರನೇ ಎರಡರಷ್ಟು ಬಹುಮತ ಬರಲಿದೆ ಎಂದು ಕರ್ನಾಟಕದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.
ಕಳೆದ 10 ವರ್ಷಗಳ ಪಿಣರಾಯಿ ವಿಜಯನ್ ಸರ್ಕಾರ ವಿಫಲವಾಗಿದೆ. ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಚಿನ್ನ ಕಳವು, ಸಿಪಿಐಎಂ ಹಾಗೂ ಕೇಂದ್ರ ಬಿಜೆಪಿ ಸರ್ಕಾರದಿಂದ ತನಿಖೆಯಾಕಿಲ್ಲ ಎಂದೂ ಅವರು ಪ್ರಶ್ನೆ ಮಾಡಿದ್ದಾರೆ.

ಕೇರಳದ ಜನತೆ ಬದಲಾವಣೆ ಬಯಸಿದ್ದು, ಅಭಿವೃದ್ಧಿ, ನಿರುದ್ಯೋಗ ಸಮಸ್ಯೆಗೆ ಪರಿಹಾರ, ಸ್ವಾಮಿ ಅಯ್ಯಪ್ಪನಿಗೆ ನ್ಯಾಯ ಒದಗಿಸಲು ಬಯಸುತ್ತಿರುವ ಜನ ಕಾಂಗ್ರೆಸ್ ಹಾಗೂ ಯುಡಿಎಫ್ ಮೈತ್ರಿಕೂಟಕ್ಕೆ ಮೂರನೇ ಎರಡರಷ್ಟು ಬಹುಮತದೊಂದಿಗೆ ಗೆಲ್ಲಿಸಲಿದ್ದಾರೆ ಎಂದು ಶೇಕಡ ನೂರರಷ್ಟು ವಿಶ್ವಾಸ ನಮಗಿದೆ ಎಂದು ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ. ಕೇರಳ ರಾಜ್ಯದ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರಕ್ಕೆ ತೆರಳಿರುವ ಶಿವಕುಮಾರ್ ಅವರು ಮಾಧ್ಯಮಗಳ ಪ್ರಶ್ನೆಗಳಿಗೆ ಭಾನುವಾರ ಪ್ರತಿಕ್ರಿಯೆ ನೀಡಿದ್ದಾರೆ.

ಕೇರಳದಲ್ಲಿ ಚುನಾವಣೆ ಕಾವು ಹೇಗಿದೆ ಎಂದು ಕೇಳಿದಾಗ, ಅಯ್ಯಪಸ್ವಾಮಿ ದೇವಾಲಯದ ಚಿನ್ನ ಕಳ್ಳತನ ಪ್ರಕರಣವನ್ನು ಸಿಪಿಐಎಂ ಸರ್ಕಾರ ಸರಿಯಾದ ತನಿಖೆ ನಡೆಸಿಲ್ಲ. ಕೇಂದ್ರ ಬಿಜೆಪಿ ಸರ್ಕಾರ ಕೂಡ ಈ ಪ್ರಕರಣದ ಸಿಬಿಐ ತನಿಖೆ ನಡೆಸಿಲ್ಲ. ಬೆಲೆ ಏರಿಕೆ ಸಮಸ್ಯೆ ನಡುವೆ ಸೌದಿ ಸೇರಿದಂತೆ ಅರಬ್ ರಾಷ್ಟ್ರಗಳಿಂದ ಲಕ್ಷಾಂತರ ಜನ ಕೇರಳಕ್ಕೆ ಮರಳುತ್ತಿದ್ದಾರೆ. ಪ್ರತಿ ವರ್ಷ ಲಕ್ಷಾಂತರ ಯುವಕರು ಕೆಲಸ ಹುಡುಕಿಕೊಂಡು ಕೇರಳದಿಂದ ಹೊರಗೆ ಹೋಗುತ್ತಿದ್ದಾರೆ. ಇದು ರಾಜ್ಯದ ಪ್ರಮುಖ ಸಮಸ್ಯೆಯಾಗಿದೆ. ಜನರ ಸಮಸ್ಯೆಗಳಿಗೆ ಪರಿಹಾರ ನೀಡಲು ಕಾಂಗ್ರೆಸ್ ನಿಂದ ಮಾತ್ರ ಸಾಧ್ಯವಿದ್ದು ಯುಡಿಎಫ್ ಮೈತ್ರಿಕೂಟವನ್ನು ಕೇರಳಿಗರು ಆರಿಸಲಿದ್ದಾರೆ. ಕಳೆದ ಹತ್ತುವರ್ಷಗಳ ಪಿಣರಾಯಿ ವಿಜಯನ್ ಅವರ ಸರ್ಕಾರ ವಿಫಲವಾಗಿದ್ದು, ಅಭಿವೃದ್ಧಿಯ ಯಾವುದೇ ಗುರುತು ನಮ್ಮ ಕಣ್ಣಿಗೆ ಕಾಣುತ್ತಿಲ್ಲ ಎಂದರು.

ಯುಡಿಎಫ್ ಅಧಿಕಾರಕ್ಕೆ ಬಂದರೆ ಸಿಎಂ ಯಾರಾಗಲಿದ್ದಾರೆ ಎಂದು ಕೇಳಿದಾಗ, ಕಾಂಗ್ರೆಸ್ ಪಕ್ಷ ಸಿಎಂ ಆಗಿರುತ್ತದೆ. ಇಲ್ಲಿ ನಿರ್ದಿಷ್ಠ ವ್ಯಕ್ತಿ ಎಂಬುದಕ್ಕಿಂತ ಪಕ್ಷ ಮುಖ್ಯ. ಕಾಂಗ್ರೆಸ್ ಪಕ್ಷ ಸಿದ್ಧಾಂತದ ಮೇಲೆ ನಂಬಿಕೆ ಇಟ್ಟಿದ್ದು, ಕಾಂಗ್ರೆಸ್ ಪಕ್ಷದ ನಾಯಕತ್ವದ ಮೇಲೆ ನಂಬಿಕೆ ಇದೆ ಎಂದು ಹೇಳಿದ್ದಾರೆ.

ಬಿಜೆಪಿ ಹಾಗೂ ಕಾಂಗ್ರೆಸ್ ಮಧ್ಯೆ ಮ್ಯಾಚ್ ಫಿಕ್ಸಿಂಗ್ ನಡೆದಿದೆ ಎಂಬ ಆರೋಪದ ಬಗ್ಗೆ ಕೇಳಿದಾಗ, ರಾಹುಲ್ ಗಾಂಧಿ ಅವರನ್ನು ಸಂಸತ್ ಸದಸ್ಯತ್ವ ಸ್ಥಾನದಿಂದ ಅನರ್ಹಗೊಳಿಸುವುದು ಮ್ಯಾಚ್ ಫಿಕ್ಸಿಂಗ್ ಎನ್ನುತ್ತಾರೆಯೇ. ಕೇರಳಂ ಜನ ಭರ್ಜರಿ ಮತಗಳೊಂದಿಗೆ ರಾಹುಲ್ ಗಾಂಧಿ ಅವರನ್ನು ಸಂಸತ್ತಿಗೆ ಆಯ್ಕೆ ಮಾಡಿದಾಗ, ಅವರು ಕೋಲಾರದಲ್ಲಿ ಮಾಡಿದ ಭಾಷಣವನ್ನು ನೆಪವಾಗಿಟ್ಟುಕೊಂಡು ಸಂಸತ್ ಸದಸ್ಯತ್ವದಿಂದ ಅನರ್ಹ ಮಾಡಲು ಮುಂದಾದರು. ಆ ಮೂಲಕ ಕೇರಳ ಜನರಿಗೆ ಅಪಮಾನ ಎಸಗಿದರು. ಇದನ್ನು ಮ್ಯಾಚ್ ಫಿಕ್ಸಿಂಗ್ ಎಂದು ಕರೆಯುತ್ತಾರೆಯೇ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ಕೇರಳಂನಲ್ಲೂ ಕರ್ನಾಟಕ ಮಾದರಿ ಗ್ಯಾರಂಟಿ ಯೋಜನೆ ಘೋಷಣೆ ಮಾಡಲಾಗುತ್ತಿದೆ ಎಂದು ಕೇಳಿದಾಗ, ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷನಾಗಿ ನಾನು ಪಂಚ ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದೆ. ನಾವು ಕೊಟ್ಟ ಮಾತಿನಂತೆ ನಡೆದಿದ್ದೇವೆ. ಪ್ರತಿ ಮರಕ್ಕೆ ಬೇರು ಮುಖ್ಯ. ನಾವು ಬೇರನ್ನು ನಂಬಿರುವವರು. ಬೇರು ಇಲ್ಲದೇ ನಂಬಿಕೆ ಮೂಡಲು ಸಾಧ್ಯವಿಲ್ಲ. ಜನರು ನಮ್ಮನ್ನು ನಂಬಿದರು. ನಾವು ಅವರ ನಂಬಿಕೆ ಉಳಿಸಿಕೊಂಡು ನುಡಿದಂತೆ ನಡೆದಿದ್ದೇವೆ. ಕರ್ನಾಟಕ, ತೆಲಂಗಾಣ, ಹಿಮಾಚಲ ಪ್ರದೇಶದಲ್ಲಿ ನಾವು ಕೊಟ್ಟ ಮಾತಿನಂತೆ ಗ್ಯಾರಂಟಿ ಯೋಜನೆ ಜಾರಿಗೆ ತಂದಿದ್ದೇವೆ. ಕೇರಳದಲ್ಲಿ ಕೊಟ್ಟಿರುವ ಭರವಸೆಯಂತೆ ಇಂದಿರಾ ಕ್ಯಾಂಟೀನ್ ಆರಂಭಿಸುತ್ತೇವೆ. ಕೇಂದ್ರದಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ, ಆಹಾರ ಭದ್ರತೆ, ಶೈಕ್ಷಣಿಕ ಹಕ್ಕು, ಉದ್ಯೋಗ ಖಾತರಿ ಯೋಜನೆ ಜಾರಿಗೆ ತಂದೆವು ಎಂದು ತಿಳಿಸಿದರು.

ಶಬರಿಮಲ ವಿಚಾರ ಎಲ್‌ಡಿಎಫ್ ಮೇಲೆ ಪರಿಣಾಮ ಬೀರಲಿದೆಯೇ ಎಂದು ಕೇಳಿದಾಗ, ಖಂಡಿತವಾಗಿ ಪರಿಣಾಮ ಬೀರಲಿದೆ. ಇದು ದೇವರ ನಾಡು. ಇಲ್ಲಿನ ಜನ ದೇವರು, ಧರ್ಮ, ಸಂಸ್ಕೃತಿಯ ಮೇಲೆ ನಂಬಿಕೆ ಇಟ್ಟಿದ್ದಾರೆ. ದೇವರ ಹಿತಾಸಕ್ತಿಯನ್ನು ನಾವು ಕಾಪಾಡಬೇಕು. ದೇಶದ ಎಲ್ಲಾ ಭಾಗದ ಜನ ನಂಬಿಕೆಯ ಮೇಲೆ ಶಬರಿಮಲೆಗೆ ಬರುತ್ತಾರೆ. ಈ ದೇಶ ಹಾಗೂ ರಾಜ್ಯದ ಬೇರು ನಂಬಿಕೆ ಮೇಲೆ ನಿಂತಿದೆ. ಈ ಕಾರಣದಿಂದಾಗಿ ಎಲ್‌ಡಿಎಫ್ ಸರ್ಕಾರವನ್ನು ಈ ಬಾರಿಯ ಚುನಾವಣೆಯಲ್ಲಿ ಬೇರು ಸಮೇತ ಕಿತ್ತೊಗೆಯಲಾಗುವುದು ಎಂದರು.

ಮಲಯಾಳಂ ಭಾಷಾ ನೀತಿ ಬಗ್ಗೆ ಕೇಳಿದಾಗ, ಈ ವಿಚಾರವಾಗಿ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಕೇರಳಂ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಜನ ಅಸಂತುಷ್ಟರಾಗಿದ್ದು, ಈ ಕಾರಣಕ್ಕೆ ಲೋಕಸಭೆ ಚುನಾವಣೆಯಲ್ಲಿ ಜನರು ಯುಡಿಎಫ್‌ಗೆ ಬೆಂಬಲ ನೀಡಿದರು. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜನ ಕಾಂಗ್ರೆಸ್ ಪಕ್ಷ ಹಾಗೂ ಯುಡಿಎಫ್ ಗೆ ಭರ್ಜರಿ ಬಹುಮತ ನೀಡಿದ್ದು, ವಿಧಾನಸಭಾ ಚುನಾವಣೆಯಲ್ಲೂ ಮೂರನೇ ಎರಡರಷ್ಟು ಬಹುಮತ ನೀಡಲಿದ್ದಾರೆ ಎಂದು ತಿಳಿಸಿದರು.

ಕರ್ನಾಟಕದಲ್ಲಿ ಟ್ರೆಕಿಂಗ್‌ಗೆ ತೆರಳಿದ್ದ ಕೇರಳದ ಯುವತಿ ನಾಪತ್ತೆಯಾಗಿರುವ ಬಗ್ಗೆ ಕೇಳಿದಾಗ, ಈ ವಿಚಾರವಾಗಿ ನನಗೆ ಮಾಹಿತಿ ಲಭ್ಯವಿಲ್ಲ. ನೀವು ಪ್ರಶ್ನೆ ಕೇಳಿರುವುದರಿಂದ ಮಾಹಿತಿ ಪಡೆದು ಉತ್ತರ ನೀಡುವೆ ಎಂದು ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries