ಲಖನೌ: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ನಡೆಸಿದ ಬಳಿಕ ಚುನಾವಣಾ ಆಯೋಗವು ಉತ್ತರ ಪ್ರದೇಶದ ಮತದಾರರ ಅಂತಿಮ ಪಟ್ಟಿಯನ್ನು ಶುಕ್ರವಾರ ಬಿಡುಗಡೆಗೊಳಿಸಿದೆ.
ಕರಡು ಪಟ್ಟಿಯಲ್ಲಿ ಇದ್ದದ್ದಕ್ಕಿಂತ 84 ಲಕ್ಷ ಮಂದಿ ಹೆಚ್ಚುವರಿ ಮತದಾರರು ಅಂತಿಮ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದು, ಒಟ್ಟು ಮತದಾರರ ಸಂಖ್ಯೆ 13.39 ಕೋಟಿಗೆ ಏರಿಕೆಯಾಗಿದೆ.
2025ರ ಅಕ್ಟೋಬರ್ 27ರಿಂದ 2026ರ ಏಪ್ರಿಲ್ 10ರವರೆಗೆ ರಾಜ್ಯದಾದ್ಯಂತ 75 ಜಿಲ್ಲೆಗಳು, 403 ವಿಧಾನಸಭಾ ಕ್ಷೇತ್ರಗಳಲ್ಲಿ ಎಸ್ಐಆರ್ ನಡೆಸಲಾಗಿದೆ. ಈ ಪ್ರಕ್ರಿಯೆ 166 ದಿನಗಳ ಕಾಲ ನಡೆದಿದೆ.
ಜನವರಿ 6ರಂದು ಬಿಡುಗಡೆಯಾಗಿದ್ದ ಕರಡು ಮತದಾರರ ಪಟ್ಟಿಯಲ್ಲಿ 12,55,56,025 (12.55 ಕೋಟಿ) ಮಂದಿ ಮತದಾರರು ಇದ್ದರು.
ಕಳೆದ ವರ್ಷ ಅಕ್ಟೋಬರ್ನಲ್ಲಿ ಪ್ರಕಟಗೊಂಡಿದ್ದ ಮತದಾರರ ಪಟ್ಟಿಯಲ್ಲಿ ಒಟ್ಟು ಸಂಖ್ಯೆ 15.44 ಕೋಟಿ ಆಗಿತ್ತು. ಇದೀಗ ಮತದಾರರ ಅಂತಿಮ ಪಟ್ಟಿಯಲ್ಲಿ 2.06 ಕೋಟಿ ಮತದಾರರ ಹೆಸರು ಕೈಬಿಡುವ ಮೂಲಕ ಒಟ್ಟು ಸಂಖ್ಯೆ 13,39,84,792ಕ್ಕೆ ತಲುಪಿದೆ.

