ನವದೆಹಲಿ: ದಿಲ್ಲಿ ಹಾಗೂ ಉತ್ತರ ಭಾರತದ ಹಲವು ನಗರಗಳಲ್ಲಿ ರವಿವಾರ ಸಿಎನ್‌ಜಿ ಬೆಲೆಯನ್ನು ಪ್ರತಿ ಕಿ.ಗ್ರಾಂ.ಗೆ 1ರೂ. ಏರಿಕೆ ಮಾಡಲಾಗಿದೆ.
ಇದು ಕಳೆದ 48 ಗಂಟೆಗಳಲ್ಲಿ ನಡೆದಿರುವ ಎರಡನೇ ಬೆಲೆ ಏರಿಕೆಯಾಗಿದೆ.
ಇತ್ತೀಚೆಗಿನ ಪರಿಷ್ಕರಣೆಯೊಂದಿಗೆ ಸಿಎನ್‌ಜಿ ಬೆಲೆ ದಿಲ್ಲಿಯಲ್ಲಿ ಪ್ರತಿ ಕಿ.ಗ್ರಾಂ.ಗೆ 80.09 ರೂ.ಆಗಿದೆ. ಶುಕ್ರವಾರ 2 ರೂ. ಏರಿಕೆಯ ನಂತರ ಇದು ಪ್ರತಿ ಕೆ.ಜಿ.ಗೆ 79.09 ರೂ. ಆಗಿತ್ತು.
ಇತ್ತೀಚೆಗಿನ ಏರಿಕೆಯಿಂದಾಗಿ ದಿಲ್ಲಿಯಲ್ಲಿ ಸಿಎನ್‌ಜಿ ಬೆಲೆ ಮೊದಲ ಬಾರಿಗೆ ಪ್ರತಿ ಕಿ.ಗ್ರಾಂ.ಗೆ 80 ರೂ. ಗಡಿ ದಾಟಿದೆ.
ಅನಿಲ ವೆಚ್ಚದಲ್ಲಿ ಏರಿಕೆ ಮತ್ತು ರೂಪಾಯಿ ವಿರುದ್ಧ ಡಾಲರ್ ಬೆಲೆ ಏರಿಕೆಯನ್ನ ಸರಿದೂಗಿಸುವ ನಿಟ್ಟಿನಲ್ಲಿ ಬೆಲೆ ಪರಿಷ್ಕರಣೆ ಮಾಡಲಾಗಿದೆ ಎಂದು ಉತ್ತರ ಭಾರತದ ಅತಿ ದೊಡ್ಡ ಸಿಎನ್‌ಜಿ ವಿತರಕ ಸಂಸ್ಥೆಯಾದ ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್ ತಿಳಿಸಿದೆ.
ಪರಿಷ್ಕೃತ ಬೆಲೆಯ ಪ್ರಕಾರ ಸಿಎನ್‌ಜಿ ಬೆಲೆ ಪ್ರತಿ ಕಿ.ಗ್ರಾಂ.ಗೆ ನೋಯ್ಡಾ ಮತ್ತು ಗಾಜಿಯಾಬಾದ್‌ನಲ್ಲಿ 88.7 ಆಗಿದ್ದರೆ, ಗುರುಗ್ರಾಮದಲ್ಲಿ 84.12ರೂ. ಆಗಿದೆ.
ಶುಕ್ರವಾರ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಪ್ರತಿ ಲೀಟರ್‌ಗೆ ತಲಾ ಸುಮಾರು 3 ರೂಪಾಯಿಗಳಷ್ಟು ಏರಿಕೆ ಮಾಡಲಾಗಿತ್ತು. ಇದರ ಬೆನ್ನಲ್ಲೆ ಈಗ ಸಿಎನ್‌ಜಿ ಬೆಲೆಯೂ ಏರಿಕೆಯಾಗಿದೆ.

