HEALTH TIPS

ಸೊಹ್ರಾಬುದ್ದೀನ್ ಶೇಖ್ ನಕಲಿ ಎನ್‌ಕೌಂಟರ್: 22 ಜನರ ಖುಲಾಸೆ ಎತ್ತಿಹಿಡಿದ ಬಾಂಬೆ HC

ಮುಂಬೈ: 2005ರಲ್ಲಿ ನಡೆದಿದ್ದ ಶಂಕಿತ 'ಗ್ಯಾಂಗ್‌ಸ್ಟರ್‌' ಸೊಹ್ರಾಬುದ್ದೀನ್‌ ಶೇಖ್ ಮತ್ತು ತುಳಸಿರಾಮ್‌ ಪ್ರಜಾಪತಿ ನಕಲಿ ಎನ್‌ಕೌಂಟರ್‌ ಹಾಗೂ ಸೊಹ್ರಾಬುದ್ದೀನ್‌ ಪತ್ನಿ ಕೌಸರ್‌ಬಿ ಹತ್ಯೆ ಪ್ರಕರಣದ ಎಲ್ಲ 22 ಆರೋಪಿಗಳನ್ನು ಖುಲಾಸೆಗೊಳಿಸಿ ಸಿಬಿಐ ವಿಶೇಷ ನ್ಯಾಯಾಲಯ ನೀಡಿದ್ದ ತೀರ್ಪನ್ನು ಬಾಂಬೆ ಹೈಕೋರ್ಟ್‌ ಗುರುವಾರ ಎತ್ತಿಹಿಡಿದಿದೆ.

ಸಿಬಿಐ ವಿಶೇಷ ನ್ಯಾಯಾಲಯವು 2018ರ ಡಿಸೆಂಬರ್‌ನಲ್ಲಿ ಪ್ರಕರಣದ ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿತ್ತು. ವಿಶೇಷ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಶೇಖ್ ಸಹೋದರರಾದ ರುಬಾಬುದ್ದೀನ್ ಮತ್ತು ನಯಾಬುದ್ದೀನ್ ಸಲ್ಲಿಸಿದ್ದ ಮೇಲ್ಮನವಿಯನ್ನು ಬಾಂಬೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಶ್ರೀ ಚಂದ್ರಶೇಖರ್ ಮತ್ತು ನ್ಯಾಯಮೂರ್ತಿ ಗೌತಮ್ ಅಂಖಡ್ ಅವರ ಪೀಠ ವಜಾಗೊಳಿಸಿದೆ.

ಖುಲಾಸೆಗೊಂಡ 22 ಆರೋಪಿಗಳಲ್ಲಿ, 21 ಮಂದಿ ಗುಜರಾತ್ ಪೊಲೀಸ್‌ ಭಯೋತ್ಪಾದಕ ನಿಗ್ರಹ ದಳ (ಎಟಿಎಸ್) ಮತ್ತು ರಾಜಸ್ಥಾನ ಪೊಲೀಸ್‌ನ ಕಿರಿಯ ಅಧಿಕಾರಿಗಳಾಗಿದ್ದಾರೆ. ಈ ಅಧಿಕಾರಿಗಳು ಮೂವರನ್ನು ನಕಲಿ ಎನ್‌ಕೌಂಟರ್‌ನಲ್ಲಿ ಕೊಂದ ತಂಡಗಳ ಭಾಗವಾಗಿದ್ದರು ಎಂದು ಹೇಳಲಾಗಿದೆ.

ಉಳಿದ ಒಬ್ಬ ಆರೋಪಿ ಗುಜರಾತ್‌ನ ತೋಟದ ಮನೆಯ ಮಾಲೀಕರಾಗಿದ್ದು, ಶೇಖ್ ಮತ್ತು ಕೌಸರ್‌ಬಿ ಅವರನ್ನು ಕೊಲ್ಲುವ ಮೊದಲು ತೋಟದ ಮನೆಯಲ್ಲಿ ಅಕ್ರಮವಾಗಿ ಇರಿಸಲಾಗಿತ್ತು ಎಂದು ಆರೋಪಿಸಲಾಗಿದೆ.

ಹೈದರಾಬಾದ್‌ನಿಂದ ಮಹಾರಾಷ್ಟ್ರದ ಸಾಂಗ್ಲಿಗೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಶೇಖ್, ಆತನ ಪತ್ನಿ ಮತ್ತು ಸಹಚರ ಪ್ರಜಾಪತಿಯನ್ನು 2005ರ ನವೆಂಬರ್ 22-23ರ ರಾತ್ರಿ ಪೊಲೀಸ್ ತಂಡ ವಶಕ್ಕೆ ತೆಗೆದುಕೊಂಡಿತ್ತು. ಆ ಬಳಿಕ ದಂಪತಿಯನ್ನು ಒಂದು ವಾಹನದಲ್ಲಿ ಮತ್ತು ಪ್ರಜಾಪತಿಯನ್ನು ಇನ್ನೊಂದು ವಾಹನದಲ್ಲಿ ಕರೆದೊಯ್ಯಲಾಗಿತ್ತು.

ಪ್ರಕರಣದ ತನಿಖೆ ನಡೆಸಿದ ಸಿಬಿಐ ಪ್ರಕಾರ, ಸೊಹ್ರಾಬುದ್ದೀನ್‌ನನ್ನು 2005ರ ನವೆಂಬರ್ 26ರಂದು ಗುಜರಾತ್ ಮತ್ತು ರಾಜಸ್ಥಾನ ಪೊಲೀಸರನ್ನು ಒಳಗೊಂಡ ಜಂಟಿ ತಂಡ ಎನ್‌ಕೌಂಟರ್‌ನಲ್ಲಿ ಕೊಂದಿತ್ತು. ಅದಾದ ಮೂರು ದಿನಗಳ ಬಳಿಕ ಕೌಸರ್‌ಬಿ ಹತ್ಯೆ ನಡೆಸಿ ಮೃತದೇಹ ಸುಟ್ಟುಹಾಕಲಾಗಿತ್ತು.

ಉದಯಪುರ ಕೇಂದ್ರ ಜೈಲಿನಲ್ಲಿದ್ದ ಪ್ರಜಾಪತಿಯನ್ನು 2006ರ ಡಿಸೆಂಬರ್ 27ರಂದು ಗುಜರಾತ್-ರಾಜಸ್ಥಾನ ಗಡಿಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಕೊಲ್ಲಲಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್‌ನ ಆಗಿನ ಗೃಹ ಸಚಿವ, ಪ್ರಸ್ತುತ ಕೇಂದ್ರದ ಗೃಹ ಸಚಿವರಾಗಿರುವ ಅಮಿತ್ ಶಾ, ರಾಜಸ್ಥಾನದ ಮಾಜಿ ಗೃಹ ಸಚಿವ ಗುಲಾಬ್ ಚಂದ್ ಕಟಾರಿಯಾ ಸೇರಿದಂತೆ ಒಟ್ಟು 38 ಮಂದಿ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿತ್ತು.

38 ಆರೋಪಿಗಳಲ್ಲಿ ಶಾ, ಕಟಾರಿಯಾ ಮತ್ತು ಹಲವು ಐಪಿಎಸ್ ಅಧಿಕಾರಿಗಳು ಸೇರಿದಂತೆ 16 ಮಂದಿಯನ್ನು 2014 ಮತ್ತು 2017ರ ನಡುವೆ ಆರೋಪ ಮುಕ್ತಗೊಳಿಸಲಾಗಿತ್ತು.

ಲಷ್ಕರ್-ಎ-ತಯಬಾ ಮತ್ತು ಪಾಕಿಸ್ತಾನದ ಐಎಸ್‌ಐ ಜೊತೆ ನಂಟು ಹೊಂದಿದ್ದ ಸೊಹ್ರಾಬುದ್ದೀನ್, ಗುಜರಾತ್‌ನ ಅಂದಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರ ಹತ್ಯೆಗೆ ಸಂಚು ರೂಪಿಸುತ್ತಿದ್ದನೆಂದು ಗುಜರಾತ್‌ ಎಟಿಎಸ್‌ ಆರೋಪಿಸಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries