ಫಾಲ್ಟಾ: ಪಶ್ಚಿಮ ಬಂಗಾಳದ ಫಾಲ್ಟಾ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ದೆಭಾಂಶು ಪಾಂಡಾ ಅವರು ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ.
ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಚುನಾವಣಾ ಅಕ್ರಮಗಳು ನಡೆದಿವೆ ಎಂಬ ಆರೋಪದ ಹಿನ್ನೆಲೆಯಲ್ಲಿ ಫಾಲ್ಟಾ ಕ್ಷೇತ್ರಕ್ಕೆ ಮೇ 21ರಂದು ಮರುಮತದಾನ ನಡೆದಿತ್ತು.
ಶೇ 88ರಷ್ಟು ಮಂದಿ ತಮ್ಮ ಹಕ್ಕು ಚಲಾಯಿಸಿದ್ದರು.
ಭಾನುವಾರ ಮತ ಎಣಿಕೆ ನಡೆದಿದ್ದು, ಪಾಂಡಾ 1,09,021 ಮತಗಳ ಅಂತದರಿಂದ ಗೆಲುವು ಸಾಧಿಸಿದ್ದಾರೆ. ಅವರಿಗೆ ಒಟ್ಟು 1,49,666 ಮತಗಳು ಲಭಿಸಿವೆ. ಅವರ ಸಮೀಪದ ಸ್ಪರ್ಧಿಯಾಗಿದ್ದ ಸಿಪಿಐ(ಎಂ)ನ ಶಂಭುನಾಥ್ ಕುರ್ಮಿ 40,645 ಮತಗಳನ್ನು ಪಡೆದುಕೊಂಡಿದ್ದಾರೆ. ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದ ಅಬ್ದುರ್ ರಜಾಕ್ ಮೊಲ್ಲಾ, 10,084 ಮತಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.
ಪಶ್ಚಿಮ ಬಂಗಾಳ ವಿಧಾನಸಭೆಗೆ ಇತ್ತೀಚೆಗೆ ಎರಡು ಹಂತಗಳಲ್ಲಿ ನಡೆದಿತ್ತು. 152 ಕ್ಷೇತ್ರಗಳಿಗೆ ಏಪ್ರಿಲ್ 23ರಂದು ಮೊದಲ ಹಂತ ಹಾಗೂ ಫಾಲ್ಟಾ ಸೇರಿದಂತೆ ಉಳಿದ 142 ಕ್ಷೇತ್ರಗಳಿಗೆ ಏಪ್ರಿಲ್ 29ರಂದು ಎರಡನೇ ಹಂತದ ಮತದಾನವಾಗಿತ್ತು.
'ಫಾಲ್ಟಾದಲ್ಲಿ ಏಪ್ರಿಲ್ 29ರಂದು ನಡೆದ ಮತದಾನದ ವೇಳೆ ಚುನಾವಣಾ ಅಕ್ರಮಗಳು ನಡೆದಿವೆ' ಎಂಬ ಕಾರಣ ನೀಡಿ ಚುನಾವಣಾ ಆಯೋಗವು ಮರು ಚುನಾವಣೆ ಘೋಷಿಸಿತ್ತು.
ಆದರೆ, ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ಜಹಾಂಗೀರ್ ಖಾನ್ ಅವರು ಮರುಮತದಾನಕ್ಕೆ ಇನ್ನು ಎರಡು ದಿನಗಳು ಬಾಕಿ ಇದ್ದಾಗ ಕಣದಿಂದ ಹಿಂದೆ ಸರಿದಿದ್ದರು. ಆದಾಗ್ಯೂ ಅವರಿಗೆ 7,783 ಜನರು ಮತ ನೀಡಿದ್ದಾರೆ.
ಬಿಜೆಪಿ ಬಲ 208ಕ್ಕೆ
294 ಸದಸ್ಯ ಬಲದ ಪಶ್ಚಿಮ ಬಂಗಾಳ ವಿಧಾನಸಭೆಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಟಿಎಂಸಿ ಮುಖಭಂಗ ಅನುಭವಿಸಿತ್ತು. 2021ರಲ್ಲಿ 215 ಕ್ಷೇತ್ರಗಳಲ್ಲಿ ಗೆದ್ದು ಸತತ ಮೂರನೇ ಅವಧಿಗೆ ಅಧಿಕಾರ ಹಿಡಿದಿದ್ದ ಮಮತಾ ಬ್ಯಾನರ್ಜಿ ಅವರ ಪಕ್ಷ, ಈ ಬಾರಿ 80 ಸ್ಥಾನಗಳಿಗೆ ಕುಸಿದಿದೆ.
207 ಕ್ಷೇತ್ರಗಳಲ್ಲಿ ಜಯ ಸಾಧಿಸುವ ಮೂಲಕ ಭಾರಿ ಬಹುಮತ ಗಳಿಸಿದ್ದ ಬಿಜೆಪಿ, ಇದೇ ಮೊದಲ ಬಾರಿಗೆ ಬಂಗಾಳದಲ್ಲಿ ಸರ್ಕಾರ ರಚಿಸಿದೆ. ಇದೀಗ ಫಾಲ್ಟಾದಲ್ಲಿ ಗೆಲ್ಲುವುದರೊಂದಿಗೆ ಸಂಖ್ಯಾಬಲ 208ಕ್ಕೆ ಏರಿದೆ.

